ಕೊರೋನ: ಧರ್ಮದ ನೆಪದಲ್ಲಿ ಕಾನೂನು ಉಲ್ಲಂಘನೆ ಸಲ್ಲ

Update: 2020-04-04 04:43 GMT

ಕೊರೋನ ಹರಡುವಿಕೆಯನ್ನು ತಡೆಯುವಲ್ಲಿ ಸರಕಾರದ ವೈಫಲ್ಯ, ಲಾಕ್‌ಡೌನ್ ಸಂದರ್ಭದಲ್ಲಿ ಸರಕಾರದ ಪೂರ್ವ ತಯಾರಿ ಕೊರತೆ ಸಾಕಷ್ಟು ಚರ್ಚೆಗಳಿಗೆ ಒಳಗಾಗಿವೆ. ಬಹುಶಃ ಸರಕಾರ ಮಾರ್ಚ್ ಮೊದಲ ವಾರವೇ ಅಂತರ್‌ರಾಷ್ಟ್ರೀಯ ವಿಮಾನನಿಲ್ದಾಣಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಅನಿವಾಸಿಗಳಿಗೆ ಕ್ವಾರಂಟೈನ್ ಏರ್ಪಡಿಸಿದ್ದರೆ, ಭಾರತ ಇಂದು ಈ ಮಟ್ಟಿಗೆ ಕಂಗಾಲಾಗಬೇಕಾಗಿರಲಿಲ್ಲ ಎನ್ನುವುದು ಬಹುಜನರ ವಾದವಾಗಿದೆ. ಹಾಗೆಯೇ ಲಾಕ್‌ಡೌನ್ ಘೋಷಿಸುವ ಮೊದಲು ವಲಸೆ ಕಾರ್ಮಿಕರ ಮೇಲೆ ಇದು ಬೀರುವ ಪರಿಣಾಮಗಳನ್ನು ಚರ್ಚಿಸಿ, ಮುಂಜಾಗ್ರತೆ ವಹಿಸಿದ್ದರೆ ಸಾವಿರಾರು ವಲಸೆ ಕಾರ್ಮಿಕರು ಏಕಾಏಕಿ ಊರಿಗೆ ಮರಳುವ ಸ್ಥಿತಿಯೂ ನಿರ್ಮಾಣವಾಗುತ್ತಿರಲಿಲ್ಲ, ಸರಕಾರದ ಲಾಕ್‌ಡೌನ್ ವಿಫಲವಾಗುತ್ತಿರಲಿಲ್ಲ ಎನ್ನುವ ಅಭಿಪ್ರಾಯಗಳಿವೆ. ಇದು ನಮ್ಮನ್ನಾಳುವವರ ಬೇಜವಾಬ್ದಾರಿಗೆ ಸಂಬಂಧಿಸಿದ ವಿಷಯವಾಯಿತು. ವೈಫಲ್ಯಗಳಿಗೆ ಸದಾ ಸರಕಾರವನ್ನು ಟೀಕಿಸುವ ಜನತೆಯೂ ಕೂಡ ಕೊರೋನ ವಿಷಯದಲ್ಲಿ ತಮ್ಮ ಹೊಣೆಗಾರಿಕೆಗಳನ್ನು ಮರೆತಿರುವ ಆಘಾತಕಾರಿ ಸುದ್ದಿಗಳು ಈಗಲೂ ದೇಶದ ಮೂಲೆ ಮೂಲೆಗಳಿಂದ ವರದಿಯಾಗುತ್ತಿವೆ. ಇಂದು ನಾವು ಎಲ್ಲಕ್ಕೂ ಸರಕಾರವನ್ನೇ ಹೊಣೆ ಮಾಡುವ ಮೊದಲು, ಕೊರೋನ ಹರಡುವಿಕೆಯಲ್ಲಿ ಸ್ವತಃ ನಮ್ಮ ಪ್ರಮಾದಗಳೆಷ್ಟು ಎನ್ನುವುದರ ಆತ್ಮವಿಮರ್ಶೆಯೂ ಈ ಸಂದರ್ಭದಲ್ಲಿ ನಡೆಯಬೇಕಾಗಿದೆ. ದೇಶದಲ್ಲಿ ಕೊರೋನ ಕುರಿತಂತೆ ಜನರ ಬೇಜವಾಬ್ದಾರಿ ಚರ್ಚೆಗೆ ಬಂದಿರುವುದೇ ‘ನಿಝಾಮುದ್ದೀನ್ ಪ್ರಕರಣ’ದ ಬಳಿಕ. ದಿಲ್ಲಿಯ ನಿಝಾಮುದ್ದೀನ್‌ನಲ್ಲಿ ತಬ್ಲೀಗಿ ಸಮಾವೇಶ ನಡೆಯಲು ಸಂಘಟನೆಯ ಪಾಲೆಷ್ಟಿದೆಯೋ, ಸರಕಾರದ ಪಾಲೂ ಅಷ್ಟೇ ಇದೆ. ಆ ಸಂದರ್ಭದಲ್ಲಿ ಕೊರೋನವನ್ನು ಯಾರೂ ಇಷ್ಟು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ ಎನ್ನುವುದು ಸಂಘಟನೆಯ ಸ್ಪಷ್ಟೀಕರಣವಾಗಿದೆ. ಇದರಲ್ಲಿ ಸತ್ಯಾಂಶ ಇಲ್ಲದೇ ಇಲ್ಲ. ಆದರೆ ಹಾಗೆಂದು, ಸಂಘಟನೆ ತನ್ನ ಹೊಣೆಗಾರಿಕೆಯಿಂದ ಸಂಪೂರ್ಣ ನುಣುಚಿಕೊಳ್ಳುವಂತೆಯೂ ಇಲ್ಲ. ದೇಶ ವಿದೇಶಗಳಿಂದ ಸಮಾವೇಶಕ್ಕೆ ಕಾರ್ಯಕರ್ತರು ಆಗಮಿಸಿರುವುದರಿಂದ, ಅಲ್ಲಿ ಕೊರೋನ ಹರಡುವಿಕೆಯ ಸಾಧ್ಯತೆಗಳು ಹೆಚ್ಚಿರುತ್ತವೆ ಎನ್ನುವುದನ್ನು ಊಹಿಸದಷ್ಟು ಅವಿದ್ಯಾವಂತರು ಅಲ್ಲಿದ್ದರೇ? ಕನಿಷ್ಠ ಆ ಬಳಿಕವಾದರೂ ಎಲ್ಲರೂ ಸ್ವಯಂ ಕ್ವಾರಂಟೈನ್‌ಗೆ ಒಳಪಟ್ಟಿದ್ದಿದ್ದರೆ ಇಂದು ಸರಕಾರವಾಗಲಿ, ಜನರಾಗಲಿ ಇಷ್ಟು ಹೆದರಬೇಕಾಗಿರಲಿಲ್ಲ. ಧಾರ್ಮಿಕತೆ ನಮಗೆ ಸಜ್ಜನಿಕೆಯನ್ನು, ಸಾರ್ವಜನಿಕ ಕಾಳಜಿಯನ್ನು, ಹೊಣೆಗಾರಿಕೆಗಳನ್ನು ಕಲಿಸಬೇಕು. ಸಕಲ ಧರ್ಮಗಳೂ ಮಾನವೀಯತೆಯನ್ನು ಬೋಧಿಸುತ್ತವೆೆ ಎನ್ನುವುದನ್ನು ಈ ಜಗತ್ತು ನಂಬಿಕೊಂಡು ಬಂದಿದೆ ಮತ್ತು ಅದು ನಿಜವೋ, ಸುಳ್ಳೋ ಎನ್ನುವುದು ಸಾಬೀತಾಗುವುದು ಕೊರೋನದಂತಹ ಸಾಂಕ್ರಾಮಿಕ ರೋಗಗಳು ಅಥವಾ ಇನ್ನಿತರ ಅವಘಡಗಳು ಮನುಕುಲವನ್ನು ಸಂಕಟಗಳಿಗೆ ತಳ್ಳಿದಾಗ. ಆದರೆ ದುರದೃಷ್ಟವಶಾತ್ ಇಂದು ಧರ್ಮದ ನೆಪವನ್ನು ಮುಂದೊಡ್ಡಿಕೊಂಡು ಕೆಲವೇ ಕೆಲವರು ತಮ್ಮ ಸಾಮಾಜಿಕ ಹೊಣೆಗಾರಿಕೆಗಳನ್ನು ಮರೆತು ಧರ್ಮಗಳು ಬೋಧಿಸುವ ವೌಲ್ಯಗಳಿಗೆ ಕಳಂಕ ಬಳಿಯುತ್ತಿದ್ದಾರೆ.

ಈ ಬೇಜವಾಬ್ದಾರಿತನ ಯಾವುದೇ ಒಂದು ನಿರ್ದಿಷ್ಟ ಧರ್ಮಕ್ಕೆ ಸೀಮಿತವಾಗಿಲ್ಲ. ವಿಪರ್ಯಾಸವೆಂದರೆ, ಧರ್ಮದ ನೆಪದಲ್ಲಿ ಇಂತಹದೊಂದು ಉಲ್ಲಂಘನೆಯನ್ನು ಅಧಿಕೃತವಾಗಿ ಉದ್ಘಾಟನೆ ಮಾಡಿದ್ದೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್. ಪ್ರಧಾನಿ ನರೇಂದ್ರ ಮೋದಿಯವರು ದೇಶಕ್ಕೆ ‘ಜನತಾ ಕರ್ಫ್ಯೂ’ ಸಂದೇಶ ನೀಡುತ್ತಿರುವಾಗ, ಇತ್ತ ಮುಖ್ಯಮಂತ್ರಿ ಆದಿತ್ಯನಾಥ್ ಅವರು ‘ಅಯೋಧ್ಯೆಯಲ್ಲಿ ರಾಮನವಮಿ ಯಾವ ಕಾರಣಕ್ಕೂ ನಿಲ್ಲುವುದಿಲ್ಲ. ಸಮಾರಂಭದಲ್ಲಿ ಭಾಗವಹಿಸುವವರನ್ನು ರಾಮ ಕಾಪಾಡುತ್ತಾನೆ’ ಎಂಬಂತಹ ಹೇಳಿಕೆಯನ್ನು ನೀಡಿದರು. ವಿವಿಧ ಕೇಸರಿ ಸಂಘಟನೆಗಳ ಮುಖ್ಯಸ್ಥರು ಈ ಹೇಳಿಕೆಯನ್ನು ಸ್ವಾಗತಿಸಿದರು. ಒಬ್ಬ ಮುಖ್ಯಮಂತ್ರಿಯೇ ಧರ್ಮವನ್ನು ಮುಂದೊಡ್ಡಿ ಬೇಜವಾಬ್ದಾರಿತನವನ್ನು ಪ್ರದರ್ಶಿಸುವಾಗ ಅವರ ಹಿಂಬಾಲಕರ ಸ್ಥಿತಿ ಹೇಗಿರಬಹುದು? ಆದರೆ ಕೆಲವೇ ದಿನಗಳಲ್ಲಿ ಆದಿತ್ಯನಾಥ್ ತಮ್ಮ ಹೇಳಿಕೆಯನ್ನು ಅನಿವಾರ್ಯವಾಗಿ ಹಿಂದೆಗೆದುಕೊಳ್ಳಬೇಕಾಯಿತು. ಮೋದಿಯವರ ಜನತಾ ಕರ್ಫ್ಯೂ ಬಳಿಕ, ಹೇಗೆ ಜನರು ಬೀದಿ ಮೆರವಣಿಗೆ ನಡೆಸಿ ಅವರ ಉದೇಶವನ್ನು ನೀರು ಪಾಲು ಮಾಡಿದರು ಎನ್ನುವುದನ್ನು ನಾವು ನೋಡಿದ್ದೇವೆ. ಮಹಾರಾಷ್ಟ್ರದ ಸೋಲಾಪುರದಲ್ಲಿ ನಾಲ್ಕು ದಿನಗಳ ಹಿಂದೆ ಬೃಹತ್ ರಥಯಾತ್ರೆಯೊಂದು ನಡೆದು, ಸರಕಾರದ ಲಾಕ್‌ಡೌನ್ ಉದ್ದೇಶವನ್ನೇ ತಮಾಷೆಗೀಡು ಮಾಡಿತು. ಈ ರಥಯಾತ್ರೆಯಲ್ಲಿ ಭಾಗವಹಿಸಿರುವ ಜನರನ್ನು ತಡೆಯುವುದಕ್ಕೆ ಮುಂದಾದ ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಯಿತು. ಹಲವು ಪೊಲೀಸರು ಗಾಯಗೊಂಡರು. ಇದೇ ಸಂದರ್ಭದಲ್ಲಿ ಗುರುವಾರ ರಾಮನವಮಿಯ ಹೆಸರಿನಲ್ಲೂ ಜನರು ಲಾಕ್‌ಡೌನ್‌ನ್ನು ಉಲ್ಲಂಘಿಸಿದರು.

ಕೋಲ್ಕತಾದ ಬೆಲಿಯಾಘಾಟ್, ಮಾನಿಕ್ ತಾಲಾ ದೇವಾಲಯಗಳಲ್ಲಿ, ಶಿರಡಿಯ ಸಾಯಿಬಾಬಾ ದೇವಾಲಯದಲ್ಲಿ, ತೆಲಂಗಾಣದ ಭದ್ರಾಚಲಂನ ಶ್ರೀ ಸೀತಾರಾಮಚಂದ್ರ ಸ್ವಾಮಿ ದೇವಾಲಯದಲ್ಲಿ ನಡೆದ ಉತ್ಸವಗಳಲ್ಲಿ ಭಾರೀ ಪ್ರಮಾಣದ ಭಕ್ತಾದಿಗಳು ನೆರೆದಿರುವುದು ಮಾಧ್ಯಮಗಳಲ್ಲಿ ವರದಿಯಾಗಿವೆ. ಇದು ವೈದ್ಯಕೀಯ ತಜ್ಞರನ್ನು ತೀವ್ರ ಆತಂಕಕ್ಕೆ ತಳ್ಳಿದೆ. ಈ ಬೆಳವಣಿಗೆ ಮುಂದಿನ ದಿನಗಳಲ್ಲಿ ಸೋಂಕು ಪೀಡಿತರ ಸಂಖ್ಯೆಯನ್ನು ಹೆಚ್ಚಿಸಲಿವೆ ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಬೆಂಗಳೂರಿನಲ್ಲಿ, ಕೊರೋನ ಕುರಿತಂತೆ ಮಾಹಿತಿ ಸಂಗ್ರಹಿಸಲು ತೆರಳಿದ ಆಶಾಕಾರ್ಯಕರ್ತೆಯ ಮೇಲೆ ದೌರ್ಜನ್ಯ ಎಸಗಿದ ಆರೋಪಗಳು ಕೇಳಿ ಬಂದಿವೆೆ. ಯಾವುದೇ ತಪ್ಪು ಕಲ್ಪನೆಯಿಂದ ಈ ದೌರ್ಜನ್ಯ ನಡೆದಿದ್ದರೂ, ಇದನ್ನು ಸಮರ್ಥಿಸುವುದಕ್ಕೆ ಸಾಧ್ಯವಿಲ್ಲ. ತಕ್ಷಣ ಇದರ ಸತ್ಯಾಸತ್ಯತೆಗಳನ್ನು ಪರಿಶೀಲಿಸಿ, ಆರೋಪ ನಿಜವೇ ಆಗಿದ್ದರೆ ದುಷ್ಕರ್ಮಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇದೇ ಸಂದರ್ಭದಲ್ಲಿ ಹುಬ್ಬಳ್ಳಿ ಮತ್ತು ಶಿವಮೊಗ್ಗದಲ್ಲಿ ಶುಕ್ರವಾರದ ನಮಾಝ್‌ಗೆ ಸಂಬಂಧಿಸಿ ಒಂದು ಗುಂಪು ಪೊಲೀಸರ ಜೊತೆಗೆ ತಿಕ್ಕಾಟ ನಡೆಸಿದೆ. ಕಲ್ಲು ತೂರಾಟವೂ ನಡೆದಿದೆ. ಈಗಾಗಲೇ ಎಲ್ಲ ಪ್ರಮುಖ ಮಸೀದಿಗಳು ಲಾಕ್‌ಡೌನ್‌ನ್ನು ಸಂಪೂರ್ಣ ಬೆಂಬಲಿಸಿ ಸಾಮೂಹಿಕ ಪ್ರಾರ್ಥನೆಗಳನ್ನು ನಿಲ್ಲಿಸಿವೆ. ವಿವಿಧ ಧಾರ್ಮಿಕ ಮುಖಂಡರು ಕೂಡ ಅದಕ್ಕೆ ಪೂರಕವಾಗಿ ಕರೆಗಳನ್ನು ನೀಡಿ, ಯಾವ ಕಾರಣಕ್ಕೂ ಸಾಮೂಹಿಕ ಪ್ರಾರ್ಥನೆ ನಡೆಸಬಾರದು ಎಂಬ ಸೂಚನೆಯನ್ನು ನೀಡಿದ್ದಾರೆ. ಆದರೆ ಇವೆಲ್ಲವನ್ನು ಮೀರಿ ಶುಕ್ರವಾರ ಕೆಲವೆಡೆ ಸಾಮೂಹಿಕ ಪ್ರಾರ್ಥನೆ ನಡೆಸುವ ಪ್ರಯತ್ನ ನಡೆದಿದೆ. ಇದು ದಿಲ್ಲಿಯಲ್ಲಿ ನಡೆದ ‘ನಿಝಾಮುದ್ದೀನ್’ ಪ್ರಕರಣಕ್ಕಿಂತಲೂ ಆಘಾತಕಾರಿಯಾಗಿದೆ.

ದಿಲ್ಲಿಯಲ್ಲಿ ಕೊರೋನದ ಗಂಭೀರತೆಯ ಅರಿವಿಲ್ಲದೆ ಸಮಾವೇಶ ನಡೆದಿದೆ. ಆದರೆ ಇದೀಗ, ದೇಶಾದ್ಯಂತ ಕೊರೋನ ವಿರುದ್ಧ ಸಮರೋಪಾದಿಯಲ್ಲಿ ಕಾರ್ಯಗಳು ಜರುಗುತ್ತಿವೆ. ಇಡೀ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯಿದೆ. ಇಂತಹ ಸಂದರ್ಭದಲ್ಲಿ ಧರ್ಮದ ನೆಪವನ್ನು ಮುಂದೊಡ್ಡಿ ಸರಕಾರದ ಆದೇಶಗಳನ್ನು ಉಲ್ಲಂಘಿಸುವುದು ಸಮಾಜಕ್ಕೆ, ದೇಶಕ್ಕೆ ಮಾತ್ರವಲ್ಲ, ಸ್ವತಃ ಅವರ ಧರ್ಮದ ವೌಲ್ಯಗಳಿಗೆ ದ್ರೋಹವೆಸಗಿದಂತೆ. ಇವೆಲ್ಲದರ ಜೊತೆಗೆ ಅಮಾಯಕ ಜನರಲ್ಲಿ ಗಾಬರಿ, ಆತಂಕಗಳನ್ನು ಬಿತ್ತಿ ಅವರನ್ನು ದಾರಿ ತಪ್ಪಿಸುವ ಸಂಚು ವಿದ್ಯಾವಂತರಿಂದಲೇ ನಡೆಯುತ್ತಿದೆ. ನಕಲಿ ವಾಟ್ಸ್‌ಆ್ಯಪ್ ಸಂದೇಶಗಳು, ವೀಡಿಯೊಗಳಿಂದ ಹೆದರಿ ಇಂದೋರ್‌ನ ಜನರು ವೈದ್ಯಕೀಯ ಪರಿಶೋಧಕರ ಮೇಲೆ ಹಲ್ಲೆ ನಡೆಸಿ ಓಡಿಸಿರುವ ಘಟನೆ ವರದಿಯಾಗಿದೆ. ಜನರಲ್ಲಿ ಆತ್ಮವಿಶ್ವಾಸವನ್ನು ತುಂಬಬೇಕಾದ ಮಾಧ್ಯಮಗಳೂ ಸುಳ್ಳು ಸುದ್ದಿಗಳು ಮತ್ತು ಕೋಮು ವಿಭಜನಕಾರಿ ಸುದ್ದಿಗಳನ್ನು ಹರಡುವಲ್ಲಿ ಮುಂಚೂಣಿಯಲ್ಲಿರುವುದು ಅತ್ಯಂತ ವಿಷಾದಕರ ಸಂಗತಿಯಾಗಿದೆ. ಈ ಕಷ್ಟ ಕಾಲದಲ್ಲಿ ಮಾಧ್ಯಮಗಳು ‘ಅಭಿವ್ಯಕ್ತಿ’ಯ ಹೆಸರಲ್ಲಿ ಸಮಾಜ ಬಾಹಿರ ಕೆಲಸಗಳನ್ನು ನಡೆಸುತ್ತಿರುವುದು ಪತ್ರಿಕೋದ್ಯಮದ ವೌಲ್ಯಗಳಿಗೆ ಬಗೆಯುವ ದ್ರೋಹವಾಗಿದೆ. ಇವರಿಗೂ, ಧರ್ಮದ ಅಮಲು ತಲೆಗೇರಿಸಿಕೊಂಡು ಸಾಮಾಜಿಕ ಬಾಧ್ಯತೆಗಳನ್ನು ಮರೆಯುವ ದುಷ್ಕರ್ಮಿಗಳಿಗೂ ಯಾವ ವ್ಯತ್ಯಾಸವೂ ಇಲ್ಲ.

ಧರ್ಮದ ವೌಲ್ಯಗಳು ಸಮಾಜವನ್ನು ಕೆಡುಕಿನಿಂದ ಒಳಿತಿನೆಡೆಗೆ ಕೊಂಡೊಯ್ಯಲು ಪ್ರೇರೇಪಿಸುತ್ತವೆ. ಭಾರತದ ಇಂದಿನ ಸಂಕಟದ ಕಾಲದಲ್ಲಿ ಧಾರ್ಮಿಕ ವ್ಯಕ್ತಿಗಳು ಬಡವರಿಗೆ, ದುರ್ಬಲರಿಗೆ ನೆರವಾಗುವ ಮೂಲಕ ಧರ್ಮದ ವೌಲ್ಯಗಳನ್ನು ಎತ್ತಿ ಹಿಡಿಯಬೇಕು. ಕೋರೋನ ವಿರುದ್ಧ ಹೋರಾಡುತ್ತಿರುವ ಪೊಲೀಸರು ಹಾಗೂ ವೈದ್ಯರ ಜೊತೆಗೆ ಕೈ ಜೋಡಿಸಿ ಅವರ ಮಾರ್ಗದರ್ಶನಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ಈ ಮೂಲಕ ತಮ್ಮ ತಮ್ಮ ಧರ್ಮಗಳ ಹಿರಿಮೆಯನ್ನು ಎತ್ತಿ ಹಿಡಿಯಲು ಅವರಿಗೊಂದು ಸದವಕಾಶ ಒದಗಿ ಬಂದಿದೆ. ಇದರ ಬದಲು ಸಾಮಾಜಿಕ ಹೊಣೆಗಾರಿಕೆಗಳನ್ನು ಮರೆತು, ಧರ್ಮದ ಹೆಸರಲ್ಲಿ ಕೊರೋನ ಹರಡುವುದಕ್ಕೆ ಮುಂದಾದರೆ ಅದರಿಂದ ನಷ್ಟ ಅವರಿಗೆ ಮಾತ್ರವಲ್ಲ, ಅವರು ಅನುಸರಿಸುತ್ತಿರುವ ಧರ್ಮವೂ ಅದರಿಂದ ನಷ್ಟ ಅನುಭವಿಸಬೇಕಾಗುತ್ತದೆ. ಆದುದರಿಂದ ಬಡವರಿಗೆ ಅನ್ನಾಹಾರಗಳನ್ನು ಒದಗಿಸುವುದು ಮಾತ್ರವಲ್ಲ ಅಮಾಯಕರಲ್ಲಿ ಜಾಗೃತಿ ಬಿತ್ತುವುದೂ ಧಾರ್ಮಿಕ ನಾಯಕರ ಬಾಧ್ಯತೆಯಾಗಿದೆ. ದೇವಾಲಯ, ಮಸೀದಿ, ಚರ್ಚ್‌ಗಳು ಮುಚ್ಚಿರುವ ಈ ಹೊತ್ತಿನಲ್ಲಿ ಇದುವೇ ದೇವರನ್ನು ಹತ್ತಿರವಾಗಿಸಿಕೊಳ್ಳಲು ನಮ್ಮ ಮುಂದಿರುವ ಏಕೈಕ ದಾರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News