ಲಾಕ್‌ಡೌನ್ ಅವಧಿಯಲ್ಲಿ ಕೌಟುಂಬಿಕ ಹಿಂಸೆ ಪ್ರಕರಣಗಳಲ್ಲಿ ಹೆಚ್ಚಳ: ಎನ್‌ಸಿಡಬ್ಲ್ಯು ಕಳವಳ

Update: 2020-04-03 17:50 GMT

ಹೊಸದಿಲ್ಲಿ, ಎ.3: ಕೊರೋನ ವೈರಸ್ ಹರಡುವಿಕೆಯನ್ನು ತಡೆಯಲು ದೇಶಾದ್ಯಂತ ಹೇರಲಾಗಿರುವ ಲಾಕ್‌ಡೌನ್ ಅವಧಿಯಲ್ಲಿ ಕೌಟುಂಬಿಕ ಹಿಂಸೆ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ರಾಷ್ಟ್ರೀಯ ಮಹಿಳಾ ಆಯೋಗ (ಎನ್‌ಸಿಡಬ್ಲು)ವು ಕಳವಳ ವ್ಯಕ್ತಪಡಿಸಿದೆ. ಮಾ.24ರಿಂದ ಎ.1ರವರೆಗಿನ ಲಾಕ್‌ಡೌನ್‌ನ ಮೊದಲ ಹಂತದಲ್ಲಿ ಕೌಟುಂಬಿಕ ದೌರ್ಜನ್ಯದ 69 ಪ್ರಕರಣಗಳನ್ನು ಆಯೋಗವು ಸ್ವೀಕರಿಸಿದೆ ಎಂದು ಎನ್‌ಸಿಡಬ್ಲು ಅಧ್ಯಕ್ಷೆ ರೇಖಾ ಶರ್ಮಾ ಹೇಳಿದ್ದಾರೆ.

ಮಾರ್ಚ್ ಮೊದಲ ವಾರದಲ್ಲಿ ದೇಶಾದ್ಯಂತ ಮಹಿಳೆಯರ ವಿರುದ್ಧ ಅಪರಾಧಗಳ 116 ದೂರುಗಳನ್ನು ಆಯೋಗವು ಸ್ವೀಕರಿಸಿತ್ತು. ಮಾ.23ರಿಂದ ಮಾ.31ರವರೆಗಿನ ಹತ್ತು ದಿನಗಳ ಅವಧಿಯಲ್ಲಿ 257 ಪ್ರಕರಣಗಳು ವರದಿಯಾಗಿವೆ ಎಂದು ಹೇಳಿಕೆಯಲ್ಲಿ ತಿಳಿಸಿರುವ ಶರ್ಮಾ,ಆಯೋಗವು ಲಾಕ್‌ಡೌನ್ ಅವಧಿಯಲ್ಲಿ ಕೌಟುಂಬಿಕ ಹಿಂಸಾಚಾರದ 69 ಪ್ರಕರಣಗಳು,ಘನತೆಯಿಂದ ಬದುಕುವ ಹಕ್ಕಿನಡಿ 77 ಪ್ರಕರಣಗಳು ಮತ್ತು ಮನೆಗಳಲ್ಲಿ ವಿವಾಹಿತ ಮಹಿಳೆಯರಿಗೆ ಕಿರುಕುಳದ 15 ಪ್ರಕರಣಗಳನ್ನು ಸ್ವೀಕರಿಸಿದೆ. ಇದರೊಂದಿಗೆ ವರದಕ್ಷಿಣೆ ಸಾವುಗಳ ಎರಡು ಪ್ರಕರಣಗಳು ಮತ್ತು ಅತ್ಯಾಚಾರ ಅಥವಾ ಅತ್ಯಾಚಾರ ಪ್ರಯತ್ನದ 13 ಪ್ರಕರಣಗಳೂ ಆಯೋಗದಲ್ಲಿ ದಾಖಲಾಗಿವೆ ಎಂದಿದ್ದಾರೆ.

ಗರಿಷ್ಠ ಸಂಖ್ಯೆಯಲ್ಲಿ ಕೌಟುಂಬಿಕ ಹಿಂಸೆಯ ದೂರುಗಳು ಉತ್ತರ ಪ್ರದೇಶದಲ್ಲಿ (90) ದಾಖಲಾಗಿದ್ದರೆ,ದಿಲ್ಲಿ (37) ನಂತರದ ಸ್ಥಾನದಲ್ಲಿದೆೆ. ಲಾಕಡೌನ್ ಘೋಷಣೆಗೆ ಮುನ್ನ ಇಷ್ಟೇ ದಿನಗಳಲ್ಲಿ ಉ.ಪ್ರದೇಶದಲ್ಲಿ 36 ಮತ್ತು ದಿಲ್ಲಿಯಲ್ಲಿ 16 ದೂರುಗಳು ದಾಖಲಾಗಿದ್ದವು ಎಂದು ಅವರು ತಿಳಿಸಿದ್ದಾರೆ.

 ಮಹಿಳೆಯರು ತಮ್ಮ ಮೇಲಿನ ಹಿಂಸೆಯ ವಿರುದ್ಧ ದೂರು ಕೊಡಲು ಬಯಸಿದರೂ ಲಾಕ್‌ಡೌನ್‌ನಿಂದಾಗಿ ಪೊಲೀಸರನ್ನು ತಲುಪಲು ಅವರಿಗೆ ಸಾಧ್ಯವಾಗುತ್ತಿಲ್ಲ,ಹೀಗಾಗಿ ಲಾಕ್‌ಡೌನ್ ಮಹಿಳೆಯರಿಗೆ ಹೆಚ್ಚಿನ ಸವಾಲು ಆಗಿದೆ. ಲಾಕ್‌ಡೌನ್‌ನಿಂದಾಗಿ ಅವರಿಗೆ ತವರಿಗೆ ತೆರಳಲೂ ಸಾಧ್ಯವಾಗುತ್ತಿಲ್ಲ,ಹೀಗಾಗಿ ಹೆಚ್ಚ್ಚಿನ ಮಹಿಳೆಯರು ದೂರು ಸಲ್ಲಿಸದೆ ವೌನವಾಗಿ ಹಿಂಸೆಯನ್ನು ಸಹಿಸುತ್ತಿದ್ದಾರೆ ಎಂದು ಶರ್ಮಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News