ಕೊರೋನ ಬಗ್ಗೆ ಸುಳ್ಳು ಹರಡಿದ ಬಜರಂಗದಳ ಕಾರ್ಯಕರ್ತನ ಬಂಧನ

Update: 2020-04-05 17:32 GMT

ಪಾಟ್ನ, ಎ.5: ಕೊರೋನ ಬಗ್ಗೆ ತಪ್ಪು ಮಾಹಿತಿ ಪ್ರಸಾರ ಮಾಡಿದ ಹಿನ್ನೆಲೆಯಲ್ಲಿ ಬಿಹಾರದ ಮುಂಗೇರ್ ಗ್ರಾಮದಲ್ಲಿ ಬಜರಂಗದಳದ ಕಾರ್ಯಕರ್ತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

 ಮುಂಗೇರ್ ಗ್ರಾಮದ ತಾರಾಪುರದಲ್ಲಿರುವ ಮುಸ್ಲಿಂ ಕುಟುಂಬದ ಸದಸ್ಯರು ದಿಲ್ಲಿಯಲ್ಲಿ ತಬ್ಲೀಗಿ ಜಮಾಅತ್ ನಡೆಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಮತ್ತು ಇದರಲ್ಲಿ ಒಬ್ಬರಲ್ಲಿ ಕೊರೋನ ಸೋಂಕು ದೃಢಪಟ್ಟಿದೆ ಎಂದು ಬಜರಂಗದಳದ ಕಾರ್ಯಕರ್ತ ಗೌತಮ್ ಸಿಂಗ್ ಕುಶ್ವಾಹಾ ಎಂಬಾತ ಫೇಸ್‌ ಬುಕ್‌ ನಲ್ಲಿ ಪೋಸ್ಟ್ ಮಾಡಿದ್ದು ಇದು ವೈರಲ್ ಆಗಿತ್ತು.

ಈ ಕುಟುಂಬದವರು ತಾರಾಪುರ ಮಾರುಕಟ್ಟೆಯಲ್ಲಿ ಮೆಡಿಕಲ್ ಶಾಪ್ ಮತ್ತು ಪಾದರಕ್ಷೆಗಳ ಅಂಗಡಿಯನ್ನು ಹೊಂದಿದ್ದು ಕುಟುಂಬದವರಿಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಈ ಪೋಸ್ಟ್ ಮಾಡಿದ್ದ ಎಂದು ಕುಟುಂಬದವರು ದೂರು ನೀಡಿದ್ದರು. ವದಂತಿ ಹರಡಿದ ಬಳಿಕ ಪೊಲೀಸರ ಒತ್ತಡ ತಡೆಯಲಾರದೆ ಕುಟುಂಬದ 6 ಸದಸ್ಯರು ವೈದ್ಯಕೀಯ ಪರೀಕ್ಷೆಗೆ ಒಳಪಟ್ಟಿದ್ದು ಯಾರಲ್ಲೂ ಸೋಂಕು ದೃಢಪಟ್ಟಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಇವರಿಗೆ ಹೋಂ ಕ್ವಾರಂಟೈನ್‌ನಲ್ಲಿ ಇರುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಮುಂಗೇರ್‌ನ ಮುಸ್ಲಿಮ್ ಕುಟುಂಬದ ಯಾವ ಸದಸ್ಯರೂ ತಬ್ಲೀಗಿ ಜಮಾಅತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ ಎಂದು ಗೃಹ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ತಪ್ಪು ಮಾಹಿತಿ ನೀಡಿದ್ದ ಆರೋಪದಲ್ಲಿ ಗೌತಮ್ ಸಿಂಗ್ ಕುಶ್ವಾಹನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮುಂಗೇರ್‌ನ ಡಿಐಜಿ ಮನು ಮಹಾರಾಜ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News