ಕೊರೋನ ಸೋಲಲಿ, ಮನುಷ್ಯತ್ವ ಗೆಲ್ಲಲಿ

Update: 2020-04-06 05:33 GMT

ರೋಗ, ಪ್ರಕೃತಿ ವಿಕೋಪ ಸೇರಿದಂತೆ ಯಾವುದೇ ಆಪತ್ತುಗಳು ಮೊದಲು ಜಗತ್ತಿನ ತಂತ್ರಜ್ಞಾನ, ವೈದ್ಯಕೀಯ ಸೇರಿದಂತೆ ಹತ್ತು ಹಲವು ಕ್ಷೇತ್ರಗಳಿಗೆ ಸವಾಲು ಹಾಕುತ್ತವೆೆ. ಈ ಬಾರಿ ಕೊರೋನ ಜಗತ್ತಿನ ವೈದ್ಯಕೀಯ ವ್ಯವಸ್ಥೆಗಳಿಗಷ್ಟೇ ಅಲ್ಲ, ಸರಕಾರಗಳ ಆಡಳಿತ ಮುತ್ಸದ್ದಿತನಗಳ ಕಾರ್ಯಕ್ಷಮತೆಯನ್ನೂ ನಿಕಷಕ್ಕೊಡ್ಡಿದೆ. ಹಲವು ದೇಶಗಳು ಇದರಲ್ಲಿ ಭಾಗಶಃ ಗೆದ್ದಿವೆ. ಕೆಲವು ದೇಶಗಳು ಸೋತು ಅದರ ಪರಿಣಾಮಗಳನ್ನು ಅನುಭವಿಸುತ್ತಿವೆ. ಇದೇ ಸಂದರ್ಭದಲ್ಲಿ ಕೊರೋನಾ ಮನುಷ್ಯನೊಳಗಿನ ಮಾನವೀಯ ವೌಲ್ಯಗಳಿಗೂ ಸವಾಲು ಒಡ್ಡುತ್ತಿದೆ. ಮನುಷ್ಯರು ಪರಸ್ಪರ ದೂರ ಇರಿ, ಎನ್ನುವ ಎಚ್ಚರಿಕೆಯ ಗಂಟೆಯೊಂದಿಗೇ ಕೊರೋನಾ ಆಗಮಿಸಿದೆ. ಭಾರತದಂತಹ ದೇಶದಲ್ಲಿ ಈಗಾಗಲೇ ಜಾತಿ, ಅಸ್ಪಶ್ಯತೆ ಮನುಷ್ಯರ ನಡುವೆ ಕಂದರಗಳನ್ನು ಬಿತ್ತಿರುವ ಹೊತ್ತಿನಲ್ಲಿ ಕೊರೋನ, ಇದರ ಅಂತರವನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆಗಳಿವೆ. ಆದರೆ ಈ ಸಂದರ್ಭದಲ್ಲಿ ಮನುಷ್ಯ ದೈಹಿಕವಾಗಿ ಎಷ್ಟು ಅಂತರವನ್ನು ಸಾಧಿಸುವುದು ಅತ್ಯಗತ್ಯವೋ, ಮಾನಸಿಕವಾಗಿ ಬೆಸೆಯುವುದು ಕೂಡ ಅಗತ್ಯ. ಆದುದರಿಂದ, ಸೋಂಕಿಗೆ ಒಳಗಾಗದಂತೆ ಮನುಷ್ಯರಿಂದ ದೂರ ಇರುವುದರ ಜೊತೆ ಜೊತೆಗೇ ಮನುಷ್ಯನ ನೋವು, ಸಂಕಟಗಳಿಗೆ ಪರಸ್ಪರ ನೆರವಾಗುತ್ತಾ ಮಾನಸಿಕವಾಗಿ ಹಿಂದೆಂದಿಗಿಂತ ಹತ್ತಿರವಾಗಬೇಕಾಗಿದೆ. ಜಗತ್ತು ಈ ಸವಾಲನ್ನು ಗೆಲ್ಲುವುದು ಕೊರೋನವನ್ನು ಗೆಲ್ಲುವಷ್ಟೆ ಮುಖ್ಯವಾಗಿದೆ.

ಕೊರೋನ ಎದುರಿಸಲು ವಿಧಿಸಲಾಗಿರುವ ಲಾಕ್‌ಡೌನ್ ಇಡೀ ದೇಶದ ಜನರನ್ನು ಗೃಹಬಂಧನದಲ್ಲಿರಿಸಿದೆ. ಸಂದರ್ಭದಲ್ಲಿ ಮನುಷ್ಯ-ಮನುಷ್ಯನಿಗೆ ನೆರವಾಗುವುದಕ್ಕೆ ಹಲವು ದಾರಿಗಳಿವೆ. ‘ನಾನೇನು ಮಾಡಲಿ, ಊರಿಗೆ ದಾನ ಮಾಡುವಷ್ಟು ಹಣ ನನ್ನಲ್ಲಿಲ್ಲ’ ಎಂದು ಮುಖ ತಿರುವುವವರು ಹಲವರಿದ್ದಾರೆ. ‘ನಮ್ಮ ಕಷ್ಟ ನಮಗೆ, ಇನ್ನು ಊರವರಿಗೆ ನೆರವಾಗುವುದೆಂತು’ ಎಂದು ಅಸಹಾಯಕತೆ ವ್ಯಕ್ತಪಡಿಸುವವರ ಸಂಖ್ಯೆಯೂ ಸಣ್ಣದೇನೂ ಇಲ್ಲ. ಸದ್ಯದ ಸಂದರ್ಭದಲ್ಲಿ ನೆರವಾಗುವುದೆಂದರೆ, ‘ತಾನೂ ಬದುಕಿ ಇತರರನ್ನು ಬದುಕ ಬಿಡುವುದು’. ಕೊರೋನ ಬಂದು ಪ್ರಧಾನಿ ಲಾಕ್‌ಡೌನ್ ಘೋಷಿಸಿದ ಬೆನ್ನಿಗೇ ಸಾವಿರಾರು ಜನರು ನಗರಗಳಲ್ಲಿ ನೆರೆದು ತಮಗೆ ಬೇಕಾದ, ಬೇಡದ ವಸ್ತುಗಳೆಲ್ಲವನ್ನೂ ಕೊಂಡು ಮನೆಯೊಳಗೆ ದಾಸ್ತಾನು ಮಾಡಿಟ್ಟರು. ಇದೇ ಸಂದರ್ಭದಲ್ಲಿ ‘ಲಾಕ್‌ಡೌನ್ ಮೂರು ತಿಂಗಳ ಕಾಲ ಮುಂದುವರಿಯುವ ಸಾಧ್ಯತೆಗಳಿವೆ’ ಎನ್ನುವ ವದಂತಿಗಳನ್ನು ನಂಬಿ ನಾಲ್ಕೈದು ತಿಂಗಳಿಗೆ ಬೇಕಾದ ದಿನಸಿಗಳನ್ನು ಕೊಂಡು ಮನೆಯೊಳಗೆ ದಾಸ್ತಾನು ಮಾಡಿಟ್ಟವರಿದ್ದಾರೆ. ಆದರೆ ಹಣವಿಲ್ಲದವರದು ಅಸಹಾಯಕ ಸ್ಥಿತಿ. ಇದೊಂದು ರೀತಿಯಲ್ಲಿ ಕಾಡಿನ ನ್ಯಾಯ. ಸಮರ್ಥನಷ್ಟೇ ಇಲ್ಲಿ ಬದುಕಿ ಉಳಿಯುತ್ತಾರೆ. ಆದರೆ ಕಾಡಿನ ಪ್ರಾಣಿಗಳಿಗೂ ಮನುಷ್ಯನಿಗೂ ವ್ಯತ್ಯಾಸವಿದೆ. ಅದನ್ನು ಸಾಬೀತು ಪಡಿಸುವ ಸಮಯ ಇದು. ‘ಉಳಿದವರು ಏನಾದರೂ ಸಾಯಲಿ, ನಾನು ನನ್ನ ಕುಟುಂಬ ಬದುಕಿ ಉಳಿದರೆ ಸಾಕು’ ಎನ್ನುವ ಮನಸ್ಥಿತಿಯಿಂದ ಹೊರಬಂದು, ತನ್ನ ಜೊತೆಗೆ ಇತರರೂ ಬದುಕಬೇಕು ಎನ್ನುವ ಉದಾರತೆಯನ್ನು ಪ್ರದರ್ಶಿಸುವುದು ಇಂದಿನ ಬೇಡಿಕೆಯಾಗಿದೆ.

ಹಣವಿದೆ ಎನ್ನುವ ದುರಹಂಕಾರ, ನಾಲ್ಕೈದು ತಿಂಗಳಿಗೆ ಬೇಕಾಗುವಷ್ಟು ದಿನಸಿಗಳನ್ನು ಒಮ್ಮೆಲೆ ತುಂಬಿಕೊಂಡು ಮನೆಯಲ್ಲಿ ದಾಸ್ತಾನು ಇಡುವ ಹಕ್ಕನ್ನು ನಮಗೆ ನೀಡುವುದಿಲ್ಲ. ನಾಲ್ಕೈದು ತಿಂಗಳಿಗಾಗುವಷ್ಟು ದಿನಸಿಗಳನ್ನೇನೋ ತೆಗೆದಿರಿಸಬಹುದು. ಆದರೆ ಅದರಲ್ಲಿ ಬಹುತೇಕ ವಸ್ತುಗಳು ಕೆಟ್ಟು ಯಾರಿಗೂ ದಕ್ಕದೇ ಹೋಗಬಹುದು. ಎಲ್ಲಕ್ಕಿಂತ ಮುಖ್ಯವಾಗಿ ನಾಲ್ಕೈದು ತಿಂಗಳ ಕಾಲ ನಾವು ಬದುಕುತ್ತೇವೆ ಎನ್ನುವ ಖಚಿತತೆಯಾದರೂ ಯಾರಿಗಿದೆ? ಈ ಜಗತ್ತಿನಲ್ಲಿ ಕೊರೋನಗಳಿಗಿಂತ ಮಾರಕ ರೋಗಗಳಿವೆ ಎಂಬ ಎಚ್ಚರಿಕೆಯೂ ನಮಗಿರಬೇಕು. ನಾಲ್ಕು ತಿಂಗಳಿಗೆ ಬೇಕಾದುದನ್ನು ದಾಸ್ತಾನು ಮಾಡುವವರು, ಅದನ್ನು ಎರಡು ತಿಂಗಳಿಗೆ ಇಳಿಸಿದರೆ, ಆ ದಿನಸಿಗಳಿಂದ ಇತರ ಹಲವು ಕುಟುಂಬಗಳು ತಿಂಗಳ ಕಾಲ ಜೀವನ ನಡೆಸಬಹುದು. ಹಸಿವಿನಿಂದ ರಕ್ಷಣೆ ಪಡೆಯಬಹುದು. ಈ ಸಂದರ್ಭದಲ್ಲಿ ಒಬ್ಬನೇ ಒಬ್ಬ ದಿನಸಿ ಕೊರತೆಯಿಂದ ಹಸಿವಿನಿಂದ ನರಳಿದರೆ, ಅದಕ್ಕೆ ಹೊಣೆ, ದಿನಸಿಗಳನ್ನು ದಾಸ್ತಾನು ಮಾಡಿಟ್ಟ ಪ್ರತಿಯೊಬ್ಬರೂ ಕೂಡ. ಹಣವನ್ನು ತಿನ್ನಲಾಗುವುದಿಲ್ಲ ಎನ್ನುವ ಪಾಠವನ್ನು ಕೊರೋನ ನಮಗೆ ಕಲಿಸಿಕೊಡುತ್ತಿದೆ. ಕೈಯಲ್ಲಿ ಹಣ ಹಿಡಿದುಕೊಂಡು ಹೋದರೂ ಖಾಲಿ ಅಂಗಡಿಗಳು ನಮ್ಮನ್ನು ಅಣಕಿಸುತ್ತಿರುವ ದಿನಗಳು ಇವು. ಹೀಗಿರುವಾಗ, ನಮ್ಮ ಅಗತ್ಯಕ್ಕೆ ತಕ್ಕ ಹಾಗೆ ದಿನಸಿಗಳನ್ನು ಕೊಂಡು, ಉಳಿದವರಿಗೂ ಕೊಳ್ಳುವುದಕ್ಕೆ ಒಂದಿಷ್ಟು ಉಳಿಸಿ ಹೋಗುವುದು ಮನುಷ್ಯತ್ವದ ಭಾಗವಾಗಿದೆ. ಕಾಳಸಂತೆಯಲ್ಲಿ ವ್ಯಾಪಾರಿಗಳು ಕೂಡಿಡುವುದನ್ನು ನಾವು ಟೀಕಿಸುತ್ತೇವೆ, ಅದರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತೇವೆ. ಆದರೆ ಸಂಕಟಗಳ ದಿನಗಳಲ್ಲಿ ಒಂದು ಕುಟುಂಬ ತನಗೆ ಅಗತ್ಯವಿಲ್ಲದೇ ಇದ್ದರೂ ದುಪ್ಪಟ್ಟು ದಿನಸಿಗಳನ್ನು ಮನೆಯಲ್ಲಿ ಶೇಖರಿಸಿಡುವುದೂ ಕಾಳಸಂತೆಯೇ. ಮಾರುಕಟ್ಟೆಯಲ್ಲಿ ದಿನಸಿಗಳ ಕೊರತೆ ಹೆಚ್ಚಾದಂತೆಯೇ ಬೆಲೆಯೂ ಹೆಚ್ಚಾಗತೊಡಗುತ್ತದೆ. ಆದುದರಿಂದ ಸದ್ಯ ಯಾವುದೇ ವಸ್ತುಗಳ ಬೆಲೆಯೇರಿಕೆಯಾದಾಗ ಕೇವಲ ವ್ಯಾಪಾರಿಗಳನ್ನಷ್ಟೇ ಟೀಕಿಸುವುದರಿಂದ ಪ್ರಯೋಜನವಿಲ್ಲ.

ಇತ್ತೀಚೆಗೆ ವಿವಿಧ ಮೆಡಿಕಲ್‌ಗಳಲ್ಲಿ ಮುಖಕವಚಗಳು ದೊರಕದಂತಹ ಸ್ಥಿತಿ ನಿರ್ಮಾಣವಾಯಿತು. ಒಂದು ಸಾಮಾನ್ಯ ಮುಖಕವಚವನ್ನು 50 ರೂಪಾಯಿವರೆಗೆ ಮಾರಾಟ ಮಾಡಿದ ಪ್ರಕರಣಗಳು ವರದಿಯಾಗಿವೆ. ಈಗಲೂ, ಒಂದು ಮುಖಗವಚವನ್ನು ವ್ಯಾಪಾರಿಗಳು 25 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಈ ಕಾರಣಕ್ಕಾಗಿ ಮೆಡಿಕಲ್ ಶಾಪ್ ಮತ್ತು ಇನ್ನಿತರ ವ್ಯಾಪಾರಿಗಳ ಬಗ್ಗೆ ತೀವ್ರ ಟೀಕೆಗಳು ಕೇಳಿ ಬರುತ್ತಿವೆ. ಆದರೆ ಮುಖಗವಚದ ದರ ದುಬಾರಿಯಾಗುವಲ್ಲಿ ವ್ಯಾಪಾರಿಗಳ ದುರಾಸೆಯಷ್ಟೇ ಅಲ್ಲ, ಜನತೆಯ ಕೊಡುಗೆಯೂ ಇದೆ. ಮುಖಗವಚ ಧರಿಸಿದರೆ ಕೊರೋನ ಸೋಂಕು ತಟ್ಟುವುದಿಲ್ಲ ಎಂಬ ತಪ್ಪು ಕಲ್ಪನೆಯಿಂದ ಜನರು ಔಷಧಿ ಅಂಗಡಿಗಳಿಗೆೆ ದಾಂಗುಡಿಯಿಟ್ಟರು. ಏಕಾಏಕಿ ಮುಖಗವಚಗಳ ಕೊರತೆ ಎದುರಾಗಿ, ಅದರ ದರವೂ ಏರಿತು. ಕೆಲವು ಅಂಗಡಿ ವ್ಯಾಪಾರಿಗಳು ಜನರ ದುರಾಸೆಯನ್ನು ಬಳಸಿಕೊಂಡು, ಅದರ ಅಭಾವವನ್ನು ಸೃಷ್ಟಿಸಿದರು. ಇಂದು ಕೆಮ್ಮು ಮೊದಲಾದ ಸಮಸ್ಯೆಗಳನ್ನು ಎದುರಿಸುವ ಜನರಿಗೆ ಬೇಕೆಂದರೂ ಔಷಧಿ ಅಂಗಡಿಗಳಲ್ಲಿ ಮುಖಗವಚ ಸಿಗುತ್ತಿಲ್ಲ. ಒಂದು ವೇಳೆ ಈಗಲೂ ಮುಖಗವಚ 10 ರೂಪಾಯಿಗೆ ಸಿಗುವುದಿದ್ದರೆ, ಜನರೇ ಇನ್ನಷ್ಟು ಕೊಂಡು ಅವುಗಳನ್ನು ಮನೆಯ ಕಾಪಾಟುಗಳಲ್ಲಿ ದಾಸ್ತಾನು ಮಾಡಿಡುತ್ತಿದ್ದರು. ನಾವಿಂದು ಪಾಲಿಸಬೇಕಾಗಿರುವುದು ‘ಕಾಗೆಗಳ ಗುಣ’ವನ್ನು. ಅನ್ನ ಕಂಡಾಕ್ಷಣ ಇತರ ಕಾಗೆಗಳನ್ನು ಕರೆದು ಹಂಚಿಕೊಂಡು ಉಣ್ಣುವುದು ಕಾಗೆಗಳ ಗುಣ. ಕನಿಷ್ಠ ಕೊರೋನ ವಿಪತ್ತು ಮುಗಿಯುವವರೆಗಾದರೂ ಇರುವುದನ್ನು ಹಂಚಿಕೊಂಡು ಬದುಕುವ ಕಲೆಯನ್ನು ನಾವು ಕಾಗೆಗಳ ಮೂಲಕ ಕಲಿಯಬೇಕಾಗಿದೆ.

ಆಹಾರ ಧಾನ್ಯಗಳಿಲ್ಲದೇ ಇದ್ದರೆ, ತಿಜೋರಿಯಲ್ಲಿರುವ ನೋಟುಗಳ ರಾಶಿ ಕಾಗದವಷ್ಟೇ. ಹಣವಿರುವವರಿಗಷ್ಟೇ ಬದುಕುವ ಹಕ್ಕಿರುವುದಲ್ಲ. ಈ ಭೂಮಿಯ ಮೇಲಿರುವ ಎಲ್ಲರಿಗೂ ಈ ಭೂಮಿಯ ಆಹಾರ ಪದಾರ್ಥಗಳ ಮೇಲೆ ಸಮಾನ ಹಕ್ಕಿದೆ. ಆಪತ್ತಿನ ಸಂದರ್ಭದಲ್ಲಿ ಅವುಗಳನ್ನು ಹಂಚುತ್ತಾ ಬದುಕುವ ಮೂಲಕ ಮನುಷ್ಯತ್ವವನ್ನು ಎತ್ತಿ ಹಿಡಿಯಬೇಕು. ಕೊರೋನ ಇಂದು ಬಂದು ನಾಳೆ ಇಲ್ಲವಾಗಬಹುದು. ಆದರೆ, ಈ ಸಂದರ್ಭದಲ್ಲಿ ಮನುಷ್ಯತ್ವ ಕಳೆದುಕೊಂಡು ತನ್ನ ಸ್ವಾರ್ಥಕ್ಕಾಗಿ ಇತರರ ಬದುಕನ್ನು ಬಲಿಕೊಟ್ಟರೆ, ಅದು ಮನುಕುಲದ ಇತಿಹಾಸದಲ್ಲಿ ಅಳಿಸಲಾಗದ ಕಲೆಯಾಗಿ ಶಾಶ್ವತ ಉಳಿದು ಬಿಡಬಹುದು. ಕೊರೋನವನ್ನು ಸೋಲಿಸುವ ಜೊತೆ ಜೊತೆಗೇ ಮನುಷ್ಯತ್ವವನ್ನು ಗೆಲ್ಲಿಸುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News