ಇಟಲಿ, ಸ್ಪೇನ್‌ಗಳಲ್ಲಿ ಸಾವಿನ ಸಂಖ್ಯೆ ಇಳಿಮುಖ: ರೋಗಲಕ್ಷಣಗಳಿಲ್ಲದವರ ಸ್ಕ್ರೀನಿಂಗ್‌ಗೆ ಸ್ಪೇನ್ ನಿರ್ಧಾರ

Update: 2020-04-06 17:22 GMT

ಮ್ಯಾಡ್ರಿಡ್,ಎ.6: ಕೊರೋನ ವೈರಸ್ ಹಾವಳಿಯಿಂದ ತತ್ತರಿಸಿರುವ ಸ್ಪೇನ್, ಈ ಮಾರಕ ಸಾಂಕ್ರಾಮಿಕದ ಹಾವಳಿ ತಡೆಯಲು ತಾನು ಹೇರಿರುವ ಲಾಕ್‌ಡೌನ್ ಅನ್ನು ಸಡಿಲಗೊಳಿಸುವ ಮೊದಲ ಹೆಜ್ಜೆಯಾಗಿ, ರೋಗಲಕ್ಷಣಗಳನ್ನು ತೋರ್ಪಡಿಸದೆ ಇರುವವರನ್ನು ಕೂಡಾ ಪರೀಕ್ಷೆಗೊಳಪಡಿಸಲು ನಿರ್ಧರಿಸಿದೆ.

   ಯುರೋಪ್‌ನ ರಾಷ್ಟ್ರಗಳಾದ ಇಟಲಿ ಹಾಗೂ ಸ್ಪೇನ್‌ಗಳಲ್ಲಿ ಸತತ ನಾಲ್ಕನೆ ದಿನವೂ ಹೊಸ ಸೋಂಕಿನ ಪ್ರಕರಣಗಳು ಹಾಗೂ ಸಾವಿನ ಸಂಖ್ಯೆಯಲ್ಲಿ ತೀವ್ರ ಇಳಿಮುಖವಾಗಿರುವುದು ಹೊಸ ಆಶಾವಾದವನ್ನು ಮೂಡಿಸಿದೆ. ಕಳೆದ 24 ತಾಸುಗಳಲ್ಲಿ ಸ್ಪೇನ್‌ನಲ್ಲಿ 674 ಮಂದಿ ಸಾವನ್ನಪ್ಪಿದ್ದಾರೆ,ಇದು ಕಳೆದ ವಾರ ಸ್ಪೇನ್‌ನಲ್ಲಿ ಸೋಂಕಿನಿಂದ ಸಂಭವಿಸಿದ ಸಾವಿನ ಸಂಖ್ಯೆಯ ಅರ್ಧದಷ್ಟಾಗಿದೆ.

    ಸ್ಪೇನ್‌ನಲ್ಲಿ ಈವರೆಗೆ ಕೊರೋನ ವೈರಸ್ ಸೋಂಕಿನ ಶಂಕಿತರನ್ನು ಮಾತ್ರವೇ ತಪಾಸಣೆಗೊಳಪಡಿಸಲಾಗುತ್ತಿತ್ತು. ಆದರೆ ಇನ್ನು ಮುಂದೆ, ರೋಗಲಕ್ಷಣಗಳನ್ನು ಪ್ರದರ್ಶಿಸದೆಯೇ ಸೋಂಕಹರಡುವವರನ್ನು ಗುರುತಿಸಲು ಪ್ರಯತ್ನಿಸಲಾಗುವುದು ಎಂದ ಸ್ಪೇನ್ ವಿದೇಶಾಂಗ ಸಚಿವ ಅರಾನ್ಸಾ ಗೊಂಝಾಲೆಝ್ ತಿಳಿಸಿದ್ದಾರೆ.

  ಕೊರೋನಾ ವೈರಸ್ ಹರಡುವುಕ್ಕೆ ಕಡಿವಾಣ ಹಾಕಲು ಸ್ಪೇನ್ ಮಾರ್ಚ್ 14ರಿಂದ ಎಪ್ರಿಲ್ 26ರವರೆಗೆ ಲಾಕ್‌ಡೌನ್ ಘೋಷಿಸಿದೆ. ರವಿವಾರದವರೆಗೆ ಕೊರೋನ ಸೋಂಕಿಗೆ ಸ್ಪೇನ್‌ನಲ್ಲಿ 12,418 ಮಂದಿ ಸಾವನ್ನಪ್ಪಿದ್ದು, 1.20 ಲಕ್ಷಕ್ಕೂ ಅಧಿಕ ಮಂದಿ ಸೋಂಕಿತರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News