ಎ.14ರ ನಂತರ ಲಾಕ್ ಡೌನ್ ಮುಂದುವರಿಯಬಹುದೇ?: ಕೇಂದ್ರ ಸಚಿವ ಜಾವಡೇಕರ್ ಹೇಳಿದ್ದು ಹೀಗೆ...

Update: 2020-04-06 18:29 GMT

ಹೊಸದಿಲ್ಲಿ,ಎ.6: ಕೊರೋನ ವೈರಸ್ ಸೋಂಕು ಹರಡುವಿಕೆಯನ್ನು ತಡೆಯಲು ಜನರ ಚಲನವಲನಗಳ ಮೇಲೆ ಹೇರಲಾಗಿರುವ ಕಠಿಣ ನಿರ್ಬಂಧಗಳು ದೇಶವ್ಯಾಪಿ ಲಾಕ್‌ ಡೌನ್ ಅಂತ್ಯಕ್ಕೆ ನಿಗದಿತ ದಿನಾಂಕವಾಗಿರುವ ಎ.14ರ ನಂತರವೂ ಮುಂದುವರಿಯಬಹುದೇ ಎನ್ನುವ ಗೊಂದಲ ಹಲವರಲ್ಲಿದೆ.

ಇಂದು ಕ್ಯಾಬಿನೆಟ್ ಚರ್ಚೆಯ ನಂತರ ಈ ಬಗ್ಗೆ ಮಾತನಾಡಿದ ಪ್ರಕಾಶ್ ಜಾವಡೇಕರ್, "ನಾವು ಜಗತ್ತಿನ ಪರಿಸ್ಥಿತಿಯನ್ನು ಪ್ರತಿ ನಿಮಿಷವೂ ಅವಲೋಕಿಸುತ್ತಿದ್ದೇವೆ. ರಾಷ್ಟ್ರೀಯ ಹಿತಾಸಕ್ತಿಗಾಗಿ ನಿರ್ಧಾರವೊಂದನ್ನು ಕೈಗೊಳ್ಳಲಾಗುವುದು. ಈ ಬಗ್ಗೆ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳಲಾಗುವುದು" ಎಂದು ಹೇಳಿದ್ದಾರೆ.

ದೇಶವ್ಯಾಪಿ ಲಾಕ್‌ ಡೌನ್ ಬದಲು ಕೋವಿಡ್-19 ಹಾಟ್‌ ಸ್ಪಾಟ್‌ ಗಳಲ್ಲಿ ಮಾತ್ರ ಲಾಕ್‌ ಡೌನ್ ಮುಂದುವರಿಸುವ ಪ್ರಸ್ತಾವವನ್ನು ಸರಕಾರವು ಪರಿಶೀಲಿಸುತ್ತಿದೆ ಎಂದು ಕೇಂದ್ರದಲ್ಲಿನ ಮೂಲಗಳು ತಿಳಿಸಿವೆ. ಆರೋಗ್ಯ ಸಚಿವಾಲಯವು ದೇಶಾದ್ಯಂತ ಕನಿಷ್ಠ 20 ಕೊರೋನ ವೈರಸ್ ಹಾಟ್‌ ಸ್ಪಾಟ್‌ ಗಳನ್ನು ಮತ್ತು 22 ಸಂಭಾವ್ಯ ಹಾಟ್‌ಸ್ಪಾಟ್‌ಗಳನ್ನು ಗುರುತಿಸಿದೆ.

ಸಂಪುಟ ಕಾರ್ಯದರ್ಶಿ ರಾಜೀವ ಗಾಬಾ ಅವರು ಕಳೆದ ವಾರ ಲಾಕ್‌ ಡೌನ್ ವಿಸ್ತರಿಸುವ ಯಾವುದೇ ಯೋಜನೆಯನ್ನು ನಿರಾಕರಿಸಿದ್ದರೆ, ನಿರ್ಬಂಧಗಳು ಮುಂದುವರಿಯಬೇಕೆಂದು ಹಲವಾರು ರಾಜ್ಯಗಳು ಕೇಂದ್ರ ಸರಕಾರಕ್ಕೆ ಪತ್ರಗಳನ್ನು ಬರೆದಿದ್ದವು.

ಸೋಮವಾರ ನಡೆದ ಸಂಪುಟ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪರಿಸ್ಥಿತಿಯ ಮಾಹಿತಿಗಳನ್ನು ನೀಡಲಾಗಿದೆ ಮತ್ತು ಲಾಕ್‌ ಡೌನ್ ವಿಸ್ತರಿಸುವ ಬಗ್ಗೆ ಅಂತಿಮ ನಿರ್ಧಾರವೊಂದನ್ನು ಅವರೇ ತೆಗೆದುಕೊಳ್ಳಲಿದ್ದಾರೆ ಎಂದು ಸರಕಾರದಲ್ಲಿನ ಮೂಲಗಳು ತಿಳಿಸಿವೆ.

ಕೊರೋನ ವೈರಸ್‌ನಿಂದ ಅತ್ಯಂತ ಪೀಡಿತ ರಾಜ್ಯವಾಗಿರುವ ಮಹಾರಾಷ್ಟ್ರವು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದ್ದರೆ ಲಾಕ್‌ಡೌನ್ ಅನ್ನು ವಿಸ್ತರಿಸುವ ಹೊರತು ಬೇರೆ ಆಯ್ಕೆಯಿಲ್ಲ ಎಂದು ಈಗಾಗಲೇ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News