ಕತ್ತಲನ್ನೇ ಬೆಳಕೆಂದು ಸಂಭ್ರಮಿಸಿದರೆ?

Update: 2020-04-08 04:15 GMT

ಪ್ರಧಾನಿ ನರೇಂದ್ರ ಮೋದಿ ಅವರು ‘ಜನತಾ ಕರ್ಫ್ಯೂ’ ಘೋಷಿಸಿದ ಸಂಜೆ ನಡೆದ ದುರಂತ ರವಿವಾರ ಪುನರಾವರ್ತಿಸಿದೆ. ಪ್ರಧಾನಿ ಅವರ ಸಂದೇಶದ ಉದ್ದೇಶವೇ ಒಂದಾಗಿದ್ದರೆ, ಅದನ್ನು ಜನರು ಸ್ವೀಕರಿಸಿದ ಕಾರಣವೇ ಬೇರೆಯಾಗಿದೆ. ‘‘ಇಡೀ ದಿನ ಮನೆಯೊಳಗೆ ಇದ್ದು ಸಂಜೆ 5 ಗಂಟೆಗೆ ಎಲ್ಲರೂ ಅವರ ಮನೆಯ ಬಾಲ್ಕನಿಯಲ್ಲಿ ನಿಂತು ಚಪ್ಪಾಳೆ ತಟ್ಟಿ, ಅಥವಾ ಸದ್ದು ಮಾಡಿ’’ ಎಂದು ಪ್ರಧಾನಿ ಅವರು ಕರೆ ನೀಡಿದ್ದರು. ಆದರೆ ಜನರು, ಚಪ್ಪಾಳೆ ತಟ್ಟುವ ಮೂಲಕ ಕೊರೋನ ವೈರಸ್‌ನ್ನು ನಿವಾರಿಸಬಹುದು ಎಂದು ಭಾವಿಸಿದರು. ಅಷ್ಟೇ ಅಲ್ಲ, ಬಹುತೇಕ ಜನರು, ಜನತಾ ಕರ್ಫ್ಯೂ ಮುಗಿಯುತ್ತಿದ್ದಂತೆಯೇ ವೈರಸ್ ಈ ದೇಶ ಬಿಟ್ಟು ತೊಲಗಿತು ಎಂಬಂತೆ ಮೆರವಣಿಗೆಯಲ್ಲಿ ತಟ್ಟೆ, ಡೋಲು ಬಾರಿಸುತ್ತಾ ಸಂಭ್ರಮಿಸಿದರು. ‘ಇಡೀ ದಿನ ಮನೆಯಲ್ಲಿರಿ’ ಎಂಬ ಕರೆಯ ಉದ್ದೇಶವನ್ನೇ ಮರೆತು, ಸಂಜೆ ಐದು ಗಂಟೆಗೆ ಬೀದಿಯಲ್ಲಿ ನೆರೆದು ದೈಹಿಕ ಅಂತರವನ್ನು ಮರೆತು ಬಿಟ್ಟರು. ವೈದ್ಯರಿಗೆ ನೈತಿಕ ಬೆಂಬಲವನ್ನು ನೀಡಬೇಕಾಗಿದ್ದ ‘ಚಪ್ಪಾಳೆ’ಯೇ ವೈದ್ಯರ ಪಾಲಿಗೆ ಸಮಸ್ಯೆಯಾಯಿತು. ಸಂಜೆಯ ಹೊತ್ತು ಬೀದಿಗಿಳಿದು ಮೆರವಣಿಗೆ ಮಾಡಿದ ಪರಿಣಾಮವಾಗಿ, ಜನತಾ ಕರ್ಫ್ಯೂ ವಿಫಲವಾಗಿ ಸೋಂಕು ಇನ್ನಷ್ಟು ಹರಡುವ ಭೀತಿ ಎದುರಾಯಿತು. ಇದೀಗ ಲಾಕ್‌ಡೌನ್ ಮಾಡಿ ಮನೆಯಲ್ಲಿ ಕುಳಿತಿರುವ ಭಾರತೀಯರಿಗೆ ನರೇಂದ್ರ ಮೋದಿ ಅವರು ಎರಡನೇ ಟಾಸ್ಕ್ ಒಂದನ್ನು ನೀಡಿದರು. ಈಗ ಚಪ್ಪಾಳೆಯ ಜಾಗದಲ್ಲಿ ದೀಪ ಬಂದು ಕುಳಿತಿತ್ತು. ‘ದೀಪ’ಕ್ಕೆ ಭಾರತೀಯ ಸಂಸ್ಕೃತಿಯಲ್ಲಿ ಅವಿನಾಭಾವ ಸಂಬಂಧವಿದೆ.

‘ದೀಪಾವಳಿ’ಯ ಮೂಲಕ ನಾವು ಕತ್ತಲನ್ನು ಅಳಿಸಿ, ಬೆಳಕನ್ನು ಆಹ್ವಾನಿಸುತ್ತಾ ಬಂದಿದ್ದೇವೆ. ಅಜ್ಞಾನದ ಕತ್ತಲು, ದುಃಖ ಸಂಕಟಗಳ ಕತ್ತಲು, ಅವಿವೇಕದ ಕತ್ತಲನ್ನು ಕಳೆದು ಹೊಸ ಬದುಕಿನ ನಿರೀಕ್ಷೆಯಲ್ಲಿ ದೀಪಾವಳಿಯಂದು ದೀಪ ಹಚ್ಚುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಅವರೂ, ಈ ಉದ್ದೇಶವನ್ನಿಟ್ಟುಕೊಂಡೇ ರವಿವಾರ ರಾತ್ರಿ ಒಂಬತ್ತು ಗಂಟೆಗೆ ಎಲ್ಲ ಜನರು ಒಟ್ಟಾಗಿ ತಮ್ಮ ತಮ್ಮ ಮನೆಯ ಬಾಲ್ಕನಿ, ಅಂಗಳದಲ್ಲಿ ದೀಪ ಹಚ್ಚಲು ಕರೆ ನೀಡಿದ್ದರು. ಸದ್ಯದ ಸಂದರ್ಭದಲ್ಲಿ ಇಡೀ ದೇಶವನ್ನು ಕತ್ತಲು ಆವರಿಸಿದೆ. ಒಂದೆಡೇ ಕೊರೋನ ವೈರಸ್, ಇನ್ನೊಂದೆಡೆ ಆರ್ಥಿಕ ಹಿಂಜರಿತ, ಮಗದೊಂದೆಡೆ ಕೋಮು ವೈರಸ್...ಇವೆಲ್ಲವೂ ದೇಶವನ್ನು ಕತ್ತಲಲ್ಲಿ ತಳ್ಳಿವೆ. ಜೊತೆಗೆ ‘ದಿಗ್ಬಂಧನ’ದ ಕಾರಣಗಳಿಂದ ಎಲ್ಲರಲ್ಲೂ ಒಂದು ರೀತಿಯ ಒಂಟಿತನ ಕಾಡುತ್ತಿದೆ. ಇದನ್ನೆಲ್ಲ ಹೋಗಲಾಡಿಸಲು, ಪರಸ್ಪರ ಆತ್ಮಸ್ಥೈರ್ಯವನ್ನು ತುಂಬಲು 9 ಗಂಟೆಗೆ ತಮ್ಮ ತಮ್ಮ ಬಾಲ್ಕನಿಗಳಲ್ಲಿ, ಮನೆಯಂಗಳದಲ್ಲಿ ನಿಂತು ದೀಪವನ್ನು ಹಚ್ಚಿ ಎಂದು ಮೋದಿ ಅವರು ಕರೆ ನೀಡಿದ್ದರು. ‘ಕೊರೋನ ವಿರುದ್ಧದ ಹೋರಾಟದಲ್ಲಿ ನಾವು ಒಂಟಿಯಲ್ಲ’ ಎನ್ನುವುದನ್ನು ಸಾರುವ ಉದ್ದೇಶವೂ ಇದರ ಹಿಂದಿದೆ. ಆದರೆ ಈ ದೀಪ ಹಚ್ಚುವ ಉದ್ದೇಶವನ್ನೇ ಜನರು ಅಪಾರ್ಥ ಮಾಡಿಕೊಂಡರು. ವಿಪರ್ಯಾಸವೆಂದರೆ ಹೀಗೆ ಅಪಾರ್ಥ ಮಾಡಿಕೊಂಡವರಲ್ಲಿ ರಾಜಕಾರಣಿಗಳೂ ಸೇರಿರುವುದು. ಕರ್ನಾಟಕದ ಮಾಜಿ ಸಚಿವರೊಬ್ಬರು ಸಾರ್ವಜನಿಕವಾಗಿ ಭಾಷಣ ಮಾಡುತ್ತಾ ‘‘ಎಲ್ಲರೂ ಒಂದಾಗಿ ದೀಪ ಹಚ್ಚುವಾಗ ವಾತಾವರಣದಲ್ಲಿ ಉಷ್ಣತೆ ಏರಿ, ಅದರಿಂದ ವೈರಸ್ ಸಾಯುತ್ತದೆ’’ ಎಂಬ ತಪ್ಪು ಮಾಹಿತಿಯನ್ನು ಹಂಚಿದರು.

ಕೊರೋನದಂತಹ ಸಾಂಕ್ರಾಮಿಕ ರೋಗದ ಬಗ್ಗೆ ಹೀಗೆ ಹಗುರವಾಗಿ ಮಾತನಾಡಿದ ಕಾರಣಕ್ಕಾಗಿ ಇವರ ಮೇಲೆ ಈವರೆಗೆ ಯಾವುದೇ ಮೊಕದ್ದಮೆ ದಾಖಲಾಗಿಲ್ಲ ಎನ್ನುವುದು ವಿಷಾದನೀಯ. ಇಷ್ಟಕ್ಕೂ ದೀಪದ ಶಾಖದಿಂದ ವೈರಸ್ ನಾಶವಾಗುವುದಾದರೆ, ಹಗಲಿಡೀ ದಗದಗಿಸಿ ಉರಿಯುತ್ತಿರುವ ಸೂರ್ಯನಿಂದಲೇ ವೈರಸ್ ನಾಶವಾಗಬೇಕಾಗಿತ್ತು. ಮನೆಯೊಳಗೆ ಉರಿಯುವ ವಿದ್ಯುತ್‌ಲೈಟ್‌ಗಳೂ ದೀಪವೇ ತಾನೇ? ಅವುಗಳನ್ನು ಆರಿಸುವ ಅಗತ್ಯವೇನು? ಒಬ್ಬ ರಾಜಕಾರಣಿಯೇ ಇಷ್ಟು ಬೇಜವಾಬ್ದಾರಿಯಿಂದ ಸಾರ್ವಜನಿಕವಾಗಿ ಮಾತನಾಡುತ್ತಾರೆ ಎಂದ ಮೇಲೆ ಜನಸಾಮಾನ್ಯರ ಸ್ಥಿತಿ ಏನಾಗಬೇಕು? ಈ ಅವಿವೇಕಿ ರಾಜಕಾರಣಿಗಳಿಗೆ ತಕ್ಕಂತೆಯೇ ಜನರೂ, ರವಿವಾರ ರಾತ್ರಿ ಪ್ರತಿಕ್ರಿಯಿಸಿದರು. ಪ್ರಧಾನಿ ಅವರು ತಮ್ಮ ತಮ್ಮ ಮನೆಯ ಮುಂದೆ ದೀಪ ಹಚ್ಚಿಡಿ ಎಂದರೆ, ಅವಿವೇಕಿಗಳು ದೊಂದಿಗಳ ಜೊತೆಗೆ ಮೆರವಣಿಗೆ ಹೊರಟರು. ಹಲವೆಡೆ ದೀಪಾವಳಿ ಬಂತೇನೋ ಎನ್ನುವಂತೆ ಗೂಡು ದೀಪಗಳನ್ನು ತೂಗು ಹಾಕಿದರು. ಎಲ್ಲಕ್ಕಿಂತ ದುರಂತವೆಂದರೆ, ದೇಶದ ಹಲವೆಡೆ ರಾತ್ರಿ ಒಂಬತ್ತು ಗಂಟೆಗೆ ಪಟಾಕಿ ಸಿಡಿಸಿ ಸಂಭ್ರಮ ಆಚರಿಸಿದರು.

ಇಡೀ ದೇಶ ಹಸಿವು, ಆತಂಕ, ದುಃಖದ ಮಡುವಿನಲ್ಲಿ ಬಿದ್ದಿರುವಾಗ, ಅದನ್ನು ದೇಶ ಪರೋಕ್ಷವಾಗಿ ಪಟಾಕಿ ಸಿಡಿಸಿ ಸಂಭ್ರಮಿಸಿತು. ಇಷ್ಟಕ್ಕೂ ದೀಪಕ್ಕೂ ಪಟಾಕಿಗೂ ಏನು ಸಂಬಂಧ? ದೀಪಾವಳಿ ಹಬ್ಬದ ದಿನವೂ, ಸರಕಾರದ ಎಲ್ಲ ಸೂಚನೆಗಳನ್ನು ಧಿಕ್ಕರಿಸಿ ಜನರು ಪಟಾಕಿ ಸಿಡಿಸುತ್ತಾ ಬರುತ್ತಿದ್ದಾರೆ. ದೀಪ ಮನೆ ಮನವನ್ನು ಬೆಳಗಿದರೆ, ಪಟಾಕಿ ದೊಡ್ಡ ಸದ್ದುಗಳನ್ನು ಮಾಡುತ್ತಾ ಬೂದಿಯಾಗುತ್ತದೆ. ಬಳಿಕ ಉಳಿದುಕೊಳ್ಳುವುದು ಗಂಧಕದ ವಾಸನೆಯ ಜೊತೆಗೆ ಗಾಢ ಕತ್ತಲೆ. ರವಿವಾರ ರಾತ್ರಿಯೂ ಇದೇ ನಡೆಯಿತು. ಲಾಕ್‌ಡೌನ್‌ನಿಂದ ಶುಭ್ರವಾಗಿದ್ದ ವಾತಾವರಣ, ಪರಿಸರವನ್ನು ಪಟಾಕಿ ಹಚ್ಚುವ ಮೂಲಕ ಮತ್ತೆ ಮಲಿನಗೊಳಿಸಿದರು. ಪಟಾಕಿ ಅವಶೇಷಗಳಿಂದ ಪರಿಸರ ಗಬ್ಬೆದ್ದು ಹೋಯಿತು. ಮನೆಯಲ್ಲಿದ ವೃದ್ಧರು, ರೋಗಿಗಳ ನೆಮ್ಮದಿಯನ್ನೂ ಈ ಪಟಾಕಿ ಕೆಡಿಸಿ ಬಿಟ್ಟಿತು. ಒಟ್ಟಿನಲ್ಲಿ ಧನಾತ್ಮಕ ಪರಿಣಾಮ ಬೀರಬೇಕಾಗಿದ್ದ ಮೋದಿ ಅವರ ‘ಟಾಸ್ಕ್’ ಋಣಾತ್ಮಕ ಸಂದೇಶದೊಂದಿಗೆ ಮುಗಿದು ಹೋಯಿತು. ರಾಜಸ್ಥಾನದಲ್ಲಿ ಹಾರಿ ಬಿಟ್ಟ ಗೂಡು ದೀಪ ಗುಡಿಸಲುಗಳ ಮೇಲೆ ಬಿದ್ದು ಸಾಲು ದುರಂತಗಳಿಗೆ ಕಾರಣವಾಯಿತು.

ಬುದ್ಧಿವಂತರ ಜಿಲ್ಲೆಯೆಂದು ಕರೆಯಲಾಗುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 9 ಗಂಟೆಯ ಹೊತ್ತಿಗೆ ದುಷ್ಕರ್ಮಿಗಳು ಕಾಡಿಗೇ ಬೆಂಕಿ ಹಚ್ಚಿದ್ದಾರೆ. ಒಟ್ಟಿನಲ್ಲಿ ಕೊರೋನದಂತಹ ಸಾಂಕ್ರಾಮಿಕ ರೋಗ ತಾಂಡವವಾಡುತ್ತಿರುವ ಈ ಹೊತ್ತಿನಲ್ಲಿ ವಿಜ್ಞಾನ ಬೀದಿಯಲ್ಲಿರಬೇಕಾಗಿತ್ತು. ಆದರೆ ಬೀದಿಯಲ್ಲಿ ಅಜ್ಞಾನ ತನ್ನ ಪಾರಮ್ಯವನ್ನು ಮೆರೆದಿದೆ. ದೇಶದ ಜನರಿಗೆ ಇಂತಹ ಅನಗತ್ಯ ‘ಟಾಸ್ಕ್’ಗಳನ್ನು ನೀಡಿ, ಲಾಕ್‌ಡೌನ್ ಉದ್ದೇಶವನ್ನು ಸ್ವತಃ ಪ್ರಧಾನಿಯೇ ವಿಫಲಗೊಳಿಸುತ್ತಿದ್ದಾರೆ. ಇಂತಹ ಟಾಸ್ಕ್‌ಗಳ ಬದಲಿಗೆ, ಕೊರೋನದಿಂದ ತತ್ತರಿಸಿದ ದೇಶಕ್ಕೆ ಆರ್ಥಿಕವಾಗಿ, ವೈದ್ಯಕೀಯವಾಗಿ ಸರಕಾರ ಏನೇನು ಕ್ರಮಗಳನ್ನು ತೆಗೆದುಕೊಂಡಿದೆ ಎನ್ನುವುದನ್ನು ವಿವರಿಸಿದರೆ ಹತಾಶೆಗೊಂಡಿರುವ ಜನರಲ್ಲಿ ಒಂದಿಷ್ಟು ಆತ್ಮವಿಶ್ವಾಸ ಮೂಡಬಹುದು. ಹಾಗೆಯೇ ವೌಢ್ಯಗಳು, ವದಂತಿಗಳು ಕೊರೋನ ವೈರಸ್‌ಗಿಂತ ಅಪಾಯಕಾರಿ. ಕೊರೋನ ಇಂದೋ ನಾಳೆಯೋ ನಮ್ಮನ್ನು ತೊರೆದು ಹೋಗಬಹುದು. ಆದರೆ ವೌಢ್ಯಗಳು ಮತ್ತು ವದಂತಿಗಳಿಂದ ಉಂಟಾಗುವ ದುಷ್ಪರಿಣಾಮಗಳಿಂದಾಗುವ ನಷ್ಟಗಳನ್ನು ತುಂಬಿಸುವುದು ಕಷ್ಟ. ಆದುದರಿಂದ ಚಪ್ಪಾಳೆ ತಟ್ಟುವ, ದೀಪ ಹಚ್ಚುವ, ಪಟಾಕಿ ಸಿಡಿಸುವಂತಹ ಅನಗತ್ಯ ಸಲಹೆಗಳನ್ನು ನೀಡುವುದಕ್ಕಾಗಿ ಪ್ರಧಾನಿ ಅವರು ಪದೇ ಪದೇ ಟಿವಿಯೊಳಗೆ ಕಾಣಿಸಿಕೊಂಡು ತಮ್ಮ ಹುದ್ದೆಯ ಘನತೆಯನ್ನು ತಗ್ಗಿಸುವ ಕೆಲಸವನ್ನು ಮಾಡಬಾರದು. ಪ್ರಧಾನಿ ಅವರು ಇನ್ನಾದರೂ ಕೊರೋನಾ ರೋಗವನ್ನು ಗಂಭೀರವಾಗಿ ಸ್ವೀಕರಿಸಿ, ದೇಶಕ್ಕೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News