ಕಲಾಪದ ಸಂದರ್ಭ ಸಾಮಾಜಿಕ ಅಂತರ ನಿಯಮ ಪಾಲಿಸಲು ಕೋರ್ಟ್‌ಗಳಿಗೆ ಸುಪ್ರೀಂ ನಿರ್ದೇಶ

Update: 2020-04-06 18:22 GMT

ಹೊಸದಿಲ್ಲಿ, ಎ.6: ನ್ಯಾಯಾಲಯಗಳ ಕಲಾಪದ ಸಂದರ್ಭ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು ಸುಪ್ರೀಂಕೋರ್ಟ್ ಸೋಮವಾರ ಆದೇಶ ನೀಡಿರುವುದಾಗಿ ವರದಿಯಾಗಿದೆ.

 ಕೊರೋನ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಾಲಯದ ಕಲಾಪಗಳನ್ನು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ನಡೆಸುವ ಕುರಿತು ಸುಪ್ರೀಂಕೋರ್ಟ್‌ನ ಮೂರು ಸದಸ್ಯರ ನ್ಯಾಯಪೀಠ ಸೋವವಾರ ಚರ್ಚಿಸಿತು. ಲಾಕ್‌ಡೌನ್ ಸಂದರ್ಭ ನ್ಯಾಯಾಲಯಗಳ ಕಾರ್ಯನಿರ್ವಹಣೆಯ ಕುರಿತು ಹಿರಿಯ ವಕೀಲ ವಿಕಾಸ್ ಸಿಂಗ್ ಪತ್ರ ಸುಪ್ರೀಂಕೋರ್ಟ್‌ಗೆ ಪತ್ರ ಬರೆದಿದ್ದಾರೆ.

ಸೋಮವಾರ ಸುಪ್ರೀಂಕೋರ್ಟ್‌ನಲ್ಲಿ ನಡೆದ ನ್ಯಾಯವಿಚಾರಣೆ ಸಂದರ್ಭ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಗೂ ನ್ಯಾಷನಲ್ ಇನ್‌ ಫಾರ್ಮಟಿಕ್ಸ್ ಸೆಂಟರ್‌ನ ನಿರ್ದೇಶಕಿ ನೀತಾ ವರ್ಮ ಹಾಜರಿದ್ದರು.

 ಕೊರೋನ ಸೋಂಕು ಹರಡಲು ನ್ಯಾಯಾಲಯದ ಆವರಣ ಕೊಡುಗೆ ನೀಡುವಂತಾಗಬಾರದು. ಸಮೂಹ(ಸಭೆ)ದಲ್ಲಿ ನಡೆಸುವ ಎಲ್ಲಾ ವಿಚಾರಣೆಗಳನ್ನೂ ತಡೆಹಿಡಿಯಬೇಕು ಮತ್ತು ಗರಿಷ್ಟ ಮಟ್ಟದಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು ಮತ್ತು ಸುಪ್ರೀಂಕೋರ್ಟ್ , ಹೈಕೋರ್ಟ್ ಸಹಿತ ಎಲ್ಲಾ ನ್ಯಾಯಾಲಯಗಳೂ ಸಾಮಾಜಿಕ ಅಂತರ ನಿಯಮ ಪಾಲಿಸಬೇಕು ಎಂದು ನ್ಯಾಯಪೀಠ ತಿಳಿಸಿದೆ.

ವೀಡಿಯೊ ಕಾನ್ಫರೆನ್ಸಿಂಗ್ ವಿಧಾನಗಳನ್ನು ನಿರ್ಧರಿಸುವ ಅಧಿಕಾರ ಹೈಕೋರ್ಟ್‌ಗಳಿಗಿದೆ. ವೀಡಿಯೊ ಕಾನ್ಫರೆನ್ಸಿಂಗ್ ಸಂದರ್ಭದ ಯಾವುದೇ ಅಹವಾಲುಗಳನ್ನು ಸಲ್ಲಿಸಲು ಎಲ್ಲಾ ನ್ಯಾಯಾಲಯಗಳೂ ಹೆಲ್ಪ್‌ಲೈನ್ ನಂಬರನ್ನು ಅಳವಡಿಸಿಕೊಳ್ಳಬೇಕು. ಮತ್ತು ವೀಡಿಯೊ ಕಾನ್ಫರೆನ್ಸಿಂಗ್ ಸೌಲಭ್ಯ ಪಡೆಯಲು ಅಸಾಧ್ಯವಾದ ಕಕ್ಷಿಗಾರರಿಗೆ ಸೂಕ್ತ ಸೌಲಭ್ಯ ಒದಗಿಸಬೇಕು ಎಂದು ಸುಪ್ರೀಂ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News