ಒಬ್ಬ ಕೊರೋನಾ ರೋಗಿಯಿಂದ 30 ದಿನಗಳಲ್ಲಿ 406 ಜನರಿಗೆ ಸೋಂಕು!

Update: 2020-04-07 16:53 GMT

ಹೊಸದಿಲ್ಲಿ,ಎ.7: ಲಾಕ್‌ಡೌನ್ ಮತ್ತು ಸಾಮಾಜಿಕ ಅಂತರ ಗಳಂತಹ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಓರ್ವ ಕೋವಿಡ್-19 ರೋಗಿ 30 ದಿನಗಳಲ್ಲಿ 406 ಜನರಿಗೆ ಸೋಂಕು ಹರಡಬಲ್ಲ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯು ನಡೆಸಿದ ಅಧ್ಯಯನವೊಂದು ಬಹಿರಂಗಗೊಳಿಸಿದೆ.

ಮಂಗಳವಾರ ಇಲ್ಲಿ ಈ ವಿಷಯವನ್ನು ತಿಳಿಸಿದ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರವಾಲ್ ಅವರು,ಸಕಾಲದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡರೆ ಇದೇ ಅವಧಿಯಲ್ಲಿ ಸೋಂಕು ಹರಡುವಿಕೆ ದರವನ್ನು ಪ್ರತಿ ರೋಗಿಗೆ ಸರಾಸರಿ ಕೇವಲ 2.5 ವ್ಯಕ್ತಿಗಳಿಗೆ ತಗ್ಗಿಸಬಹುದು ಎಂದರು.

ಐಸಿಎಂಆರ್ ಅಧ್ಯಯನವನ್ನು ಉಲ್ಲೇಖಿಸಿದ ಅವರು ಕೊರೋನ ವೈರಸ್ ಸೋಂಕಿಗೆ ಹಾಲಿ ‘ಆರ್‌ಒ’ ಅಥವಾ ಆರ್ ನಾಟ್ 1.5ರಿಂದ 4ರ ನಡುವೆ ಇದೆ ಎಂದು ತಿಳಿಸಿದರು.

‘ಆರ್‌ಒ’ ಗಣಿತದ ಶಬ್ದವಾಗಿದ್ದು, ಸಾಂಕ್ರಾಮಿಕ ರೋಗವೊಂದು ಎಷ್ಟು ಸಾಂಕ್ರಾಮಿಕವಾಗಬಹುದು ಎನ್ನುವುದನ್ನು ಸೂಚಿಸುತ್ತದೆ. ಅದು ಓರ್ವ ಸೋಂಕಿತ ವ್ಯಕ್ತಿಯಿಂದ ಸರಾಸರಿ ಎಷ್ಟು ಜನರಿಗೆ ರೋಗವು ಹರಡಬಲ್ಲದು ಎನ್ನುವುದನ್ನು ಸೂಚಿಸುವ ಸಂಖ್ಯೆಯಾಗಿದೆ.

ಹಾಲಿ ಜಾರಿಯಲ್ಲಿರುವ 21 ದಿನಗಳ ಲಾಕ್‌ಡೌನ್ ಮತ್ತು ಸಾಮಾಜಿಕ ಅಂತರ ಕ್ರಮಗಳ ಮಹತ್ವವನ್ನು ಪ್ರಮುಖವಾಗಿ ಬಿಂಬಿಸಿದ ಅಗರವಾಲ್, ಆರ್‌ಒ ಅನ್ನು 2.5 ಎಂದು ಪರಿಗಣಿಸಿದರೆ ಲಾಕ್‌ಡೌನ್ ಮತ್ತು ಸಾಮಾಜಿಕ ಅಂತರದ ಅನುಪಸ್ಥಿತಿಯಲ್ಲಿ ಓರ್ವ ಸೋಂಕಿತ ವ್ಯಕ್ತಿಯು 30 ದಿನಗಳಲ್ಲಿ 406 ಜನರಿಗೆ ಸೋಂಕನ್ನು ಹರಡುತ್ತಾನೆ, ಆದರೆ ಸಾಮಾಜಿಕವಾಗಿ ಒಡ್ಡಿಕೊಳ್ಳುವುದನ್ನು ಶೇ.75ರಷ್ಟು ಕಡಿಮೆ ಮಾಡಿದರೆ ಓರ್ವ ರೋಗಿ ಕೇವಲ 2.5 ವ್ಯಕ್ತಿಗಳಿಗೆ ಮಾತ್ರ ಸೋಂಕು ಹರಡಬಲ್ಲ ಎಂದು ತಿಳಿಸಿದರು.

ಕೋವಿಡ್-19 ಅನ್ನು ನಿಯಂತ್ರಿಸುವಲ್ಲಿ ಲಾಕ್‌ಡೌನ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯವಾಗಿರುವುದ ರಿಂದ ಅವುಗಳನ್ನು ತಪ್ಪದೆ ಪಾಲಿಸುವಂತೆ ಅವರು ಜನತೆಯನ್ನು ಕೋರಿಕೊಂಡರು.

ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಟಣೆಯಂತೆ ದೇಶದಲ್ಲಿ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆ ಮಂಗಳವಾರ 4,421ಕ್ಕೇರಿದ್ದು,ಒಟ್ಟು 114 ಜನರು ಸಾವನ್ನಪ್ಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News