ಈ ಸಾವಿಗೆ ಯಾರು ಹೊಣೆ?

Update: 2020-04-08 05:11 GMT

ಕೊರೋನ ವೈರಸ್‌ನಿಂದ ಇಡೀ ಜಗತ್ತಿನಂತೆ ಕರ್ನಾಟಕವೂ ತತ್ತರಿಸಿ ಹೋಗಿದೆ.ವೈರಾಣು ಹರಡುವಿಕೆ ತಡೆಗಾಗಿ ಹೇರಲಾಗಿರುವ ‘ಲಾಕ್‌ಡೌನ್’ ಎಪ್ರಿಲ್ 14 ಕ್ಕೆ ಕೊನೆಗೊಳ್ಳುವುದೇ ಎಂದು ಜನ ಕಾಯುತ್ತಿದ್ದಾರೆ. ಈ ನಡುವೆ ಕೊರೋನ ಪ್ರಕರಣಗಳು ನಿರಂತರವಾಗಿ ವರದಿಯಾಗುತ್ತಲೇ ಇವೆ. ಇದನ್ನೆದುರಿಸಲು ಸರಕಾರ ಪ್ರಯಾಸಪಡುತ್ತಲೇ ಇದೆ. ಬಡವರ, ಕೂಲಿಕಾರ್ಮಿಕರ ಬದುಕಂತೂ ಮೂರಾಬಟ್ಟೆಯಾಗಿದೆ. ಸಾವುಗಳು ಬರೀ ಕಾಯಿಲೆಯಿಂದಲ್ಲ ಹಸಿವೆಯಿಂದಲೂ ಸಂಭವಿಸುತ್ತಿವೆ. ಕೈಗೆ ಕೆಲಸವಿಲ್ಲದೆ, ಊಟವಿಲ್ಲದೆ ಕಾಲ್ನಡಿಗೆಯಲ್ಲಿ ಬೆಂಗಳೂರಿನಿಂದ 700 ಕಿ.ಮೀ. ದೂರದ ತನ್ನೂರು ಸಿಂಧನೂರಿಗೆ ಹೊರಟಿದ್ದ ಗಂಗಮ್ಮ ಎಂಬ ಕೂಲಿ ಹೆಣ್ಣು ಮಗಳು ಹಸಿವೆಯಿಂದ ನಿತ್ರಾಣಳಾಗಿ ಬಳ್ಳಾರಿ ಬಳಿ ಅಸು ನೀಗಿದ್ದಾಳೆ. ಆಕೆಯನ್ನು ಕೆಲಸಕ್ಕೆ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದ ಕಟ್ಟಡ ನಿರ್ಮಾಣದ ಗುತ್ತಿಗೆದಾರ ಒಂದು ತಿಂಗಳ ದುಡಿಮೆಯ ಹಣವನ್ನೂ ಕೊಡದೆ ಬರಿಗೈಯಲ್ಲಿ ಹೊರ ದಬ್ಬಿದ್ದರಿಂದ ಈ ಸಾವು ಸಂಭವಿಸಿದೆ. ಸರಕಾರ ಈ ಸಾವಿಗೆ ಕಾರಣನಾದ ಗುತ್ತಿಗೆದಾರನ ಮೇಲೆ ಕ್ರಮಕೈಗೊಳ್ಳುವುದು ಅಗತ್ಯವಾಗಿದೆ.

 ಇದೊಂದೇ ಸಾವು ಅಲ್ಲ, ಕೊರೋನ ಹಾವಳಿಯ ನಂತರ ಕೆಲಸವಿಲ್ಲದೆ, ಊಟವಿಲ್ಲದೆ ಸಾವಿನ ಅಂಚಿಗೆ ಬಂದು ನಿಂತಿರುವ ಕುಟುಂಬಗಳ ಬಗ್ಗೆ ಅಧಿಕಾರದಲ್ಲಿ ಇದ್ದವರು ಮಾನವೀಯವಾಗಿ ಸ್ಪಂದಿಸಬೇಕಾಗಿದೆ. ಈ ರಾಜ್ಯದಲ್ಲಿ ಯಾರೂ ಹಸಿವೆಯಿಂದ ಸಾಯಬಾರದು ಎಂದು ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ನಭಾಗ್ಯ ಯೋಜನೆ ಜಾರಿಗೆ ತಂದರು, ಇಂದಿರಾ ಕ್ಯಾಂಟೀನ್ ಆರಂಭಿಸಿದರು. ಆದರೆ ಈಗಿನ ಸರಕಾರ ಈ ಯೋಜನೆಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸಿದಂತೆ ಕಾಣುವುದಿಲ್ಲ.ಮುಖ್ಯವಾಗಿ ಜನಪ್ರತಿನಿಧಿಗಳ ನಿರ್ಲಕ್ಷ ಎಲ್ಲೆಡೆ ಎದ್ದು ಕಾಣುತ್ತಿದೆ. ಕೊರೋನದಿಂದ ರಾಜ್ಯ ತತ್ತರಿಸಿರುವಾಗ ರಾಜ್ಯದ ಮಾನ ಮರ್ಯಾದೆ ಉಳಿದಿದ್ದರೆ ಅದು ಜನ ಪ್ರತಿನಿಧಿಗಳಿಂದಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ಅಧಿಕಾರಿ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗೆ ಅದರ ಶ್ರೇಯಸ್ಸು ಸಲ್ಲುತ್ತದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ ಮಾತು ಗಮನಾರ್ಹವಾಗಿದೆ.

ಜನ ಸಾಮಾನ್ಯರು ಸಂಕಟದ ಮಡುವಿನಲ್ಲಿ ಬಿದ್ದಿರುವಾಗ ಮೊದಲು ಅವರ ನೆರವಿಗೆ ಬರಬೇಕಾದವರು ಜನಪ್ರತಿನಿಧಿಗಳು. ಅಂದೇ ದುಡಿದು ಅಂದೇ ಊಟ ಮಾಡುವ ಶ್ರಮಿಕರ ಯಾತನೆ ಅಸಹನೀಯವಾಗಿದೆ. ಹೊಟ್ಟೆಪಾಡಿಗಾಗಿ ಹೊರ ರಾಜ್ಯಗಳಿಗೆ ಹೋದವರ ಪರಿಸ್ಥಿತಿ ಇನ್ನೂ ಶೋಚನೀಯವಾಗಿದೆ. ಮನೆಯೊಳಗೆ ಇರುವವರು ಹೊರ ಬರಲಾಗದೆ ಹೈರಾಣಾಗಿದ್ದಾರೆ. ಕಷ್ಟದಲ್ಲಿರುವ ಜನರ ನೆರವಿಗಾಗಿ ವೈದ್ಯರು, ದಾದಿಯರು, ಪೊಲೀಸರು, ಪೌರ ಕಾರ್ಮಿಕರು ಹಗಲು ರಾತ್ರಿ ದುಡಿಯುತ್ತಿದ್ದಾರೆ.ತಮಗೆ ಸೋಂಕು ತಗಲುವ ಭೀತಿ ಇದ್ದರೂ ಅನೇಕರು ಸೇವಾ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ ಇದರಲ್ಲಿ ಜನಪ್ರತಿನಿಧಿಗಳು ಎಲ್ಲಿದ್ದಾರೆಂದು ಹುಡುಕಬೇಕಾಗಿದೆ. ಮುಖ್ಯಮಂತ್ರಿ ಮತ್ತು ಕೆಲ ಸಚಿವರು ಶ್ರಮಿಸುತ್ತಿದ್ದಾರೆ. ಬೆರಳೆಣಿಕೆಯಷ್ಟು ಶಾಸಕರು, ಒಬ್ಬಿಬ್ಬರು ಸಂಸದರು ಶ್ರಮಿಸುತ್ತಿದ್ದಾರೆ. ಆದರೆ ಉಳಿದ ಶಾಸಕರು, ಸಂಸದರು ಎಲ್ಲಿದ್ದಾರೆ? ಎಲ್ಲಿ ಅಡಗಿ ಕೂತಿದ್ದಾರೆ ಎಂದು ಹುಡುಕಬೇಕಾಗಿದೆ.

ಶಾಸಕರು ಮತ್ತು ಸಂಸದರು ಚುನಾವಣೆ ಬಂದಾಗ ಊರೂರಿಗೆ ಬಂದು ಮನೆ ಬಾಗಿಲಲ್ಲಿ ನಿಂತು ಸೀರೆ, ಬಟ್ಟೆಗಳನ್ನು ಹಂಚಿ ಭಾರೀ ನಯವಿನಯ ತೋರಿಸುತ್ತಾರೆ. ಆದರೆ ಹೊಟ್ಟೆಗಿಲ್ಲದೆ ಗಂಗಮ್ಮಳಂತಹ ಕಟ್ಟಡ ಕಾರ್ಮಿಕಳು ಸಾಯುವಾಗ ಇವರೇನು ಮಾಡುತ್ತಿದ್ಸಾರೆ, ತಮ್ಮ ಮತದಾರರ, ಪ್ರಜೆಗಳ ಪ್ರಾಣ ರಕ್ಷಣೆ ಮಾಡುವ ಕನಿಷ್ಠ ಹೊಣೆಗಾರಿಕೆ ಇಲ್ಲದ ಇವರು ತಮ್ಮ ವೇತನದ ಅಲ್ಪ ಭಾಗವನ್ನು ಪರಿಹಾರ ನಿಧಿಗೆ ನೀಡಿ ಕೈ ತೊಳೆದುಕೊಳ್ಳುತ್ತಾರೆ. ಚುನಾವಣೆ ಸಂದರ್ಭದಲ್ಲಿ ಕೋಟ್ಯಂತರ ರೂಪಾಯಿ ಆಸ್ತಿಯನ್ನು ಘೋಷಿಸಿಕೊಳ್ಳುವ ಇವರು ತಮ್ಮ ಸ್ವಂತದ ಹಣವನ್ನು ದೇಣಿಗೆ ರೂಪದಲ್ಲಿ ಯಾಕೆ ನೀಡುವುದಿಲ್ಲ.

 ತಮ್ಮ ಮೈ ಬೆವರು ಮತ್ತು ರಕ್ತ ನೀಡಿ ಈ ನಾಡು ಕಟ್ಟಿದ, ಕಟ್ಟುತ್ತಿರುವ ಗಂಗಮ್ಮಳಂತಹ ಶ್ರಮಜೀವಿಗಳ ಹಸಿವಿನ ಸಾವಿಗೆ ಯಾರು ಹೊಣೆ? ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಕಾರ್ಮಿಕ ಇಲಾಖೆಯಲ್ಲಿ ಇಡಲಾಗಿದ್ದ ಸಾವಿರಾರು ಕೋಟಿ ರೂಪಾಯಿಗಳಲ್ಲಿ ಒಂದೇ ಒಂದು ಪೈಸೆ ಗಂಗಮ್ಮಳ ನೆರವಿಗೆ ಯಾಕೆ ಬರಲಿಲ್ಲ? ಬೆಂಗಳೂರಿನ ಕಟ್ಟಡ ನಿರ್ಮಾಣದಲ್ಲಿ ಕೆಲಸ ಮಾಡಿದ ಗಂಗಮ್ಮಳ ಸಂಬಳದ ಬಾಕಿ ಯಾಕೆ ಪಾವತಿಯಾಗಲಿಲ್ಲ? ಸಿಂಧನೂರಿನಲ್ಲಿರುವ ಆಕೆಯ ಪತಿ ಮತ್ತು ಇಬ್ಬರು ಪುಟ್ಟ ಮಕ್ಕಳು ಈಗ ಬೀದಿಗೆ ಬಿದ್ದಿದ್ದಾರೆ. ಅವರಿಗೆ ಯಾರು ನೆರವಾಗುತ್ತಾರೆ. ಜಾತಿ, ಕೋಮು ಹೆಸರಿನಲ್ಲಿ ಹುಸಿ ಧರ್ಮಾಭಿಮಾನ ಕೆರಳಿಸುವ ದುಷ್ಟ ಮನಸ್ಸುಗಳು ಗಂಗಮ್ಮಳಂತಹ ಬಡ ಮಹಿಳೆಯ ಸಾವಿಗೆ ಯಾಕೆ ಸ್ಪಂದಿಸುವುದಿಲ್ಲ? ಗಂಗಮ್ಮನ ಸಾವಿಗೆ ಯಾರು ಹೊಣೆ? ಈ ಪ್ರಶ್ನೆಗಳನ್ನು ನಾವು ಮತ್ತೆ ಮತ್ತೆ ಕೇಳಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News