×
Ad

ಭಾರತದಲ್ಲಿ ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ ಈ ಐವರು ಮಹಿಳೆಯರು

Update: 2020-04-08 16:14 IST

ಹೊಸದಿಲ್ಲಿ: ಭಾರತದ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಐದು ಮಂದಿ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ಅವರ ಕುರಿತು theprint.in ಪ್ರಕಟಿಸಿದ ಸಂಪೂರ್ಣ ಮಾಹಿತಿ ಇಲ್ಲಿದೆ.

ಪ್ರೀತಿ ಸೂದನ್ : ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಲ್ಲಿ ಕಾರ್ಯದರ್ಶಿಯಾಗಿರುವ ಪ್ರೀತಿ  ಕೊರೋನ ವಿರುದ್ಧ ಹೋರಾಡಲು ನರೇಂದ್ರ ಮೋದಿ ಸರಕಾರದ ಹಲವು ಕಾರ್ಯಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲು ವಿವಿಧ ಇಲಾಖೆಗಳ ಜತೆ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ಅವಿರತ ಶ್ರಮ ಪಡುತ್ತಿದ್ದಾರೆ.

ಆಂಧ್ರ ಪ್ರದೇಶ ಕೇಡರ್ ನ 1983 ಬ್ಯಾಚಿನ ಐಎಎಸ್ ಅಧಿಕಾರಿಯಾಗಿರುವ ಈಕೆ ಸಾಮಾನ್ಯವಾಗಿ ನಿರ್ಮಾಣ್ ಭವನ್‍ ನಲ್ಲಿರುವ ತಮ್ಮ ಕಚೇರಿಯಿಂದ ತಡರಾತ್ರಿ ಮನೆಗೆ ಹಿಂದಿರುಗುವುದು ಕಾಣಿಸುತ್ತದೆ. ಅರ್ಥಶಾಸ್ತ್ರದಲ್ಲಿ ಎಂಫಿಲ್ ಪದವಿ ಹಾಗೂ ಸಾಮಾಜಿಕ ನೀತಿ ಮತ್ತು ಯೋಜನೆ ವಿಷಯದಲ್ಲಿ ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್ ನಿಂದ ಸ್ನಾತಕೋತ್ತರ ಪದವಿಯನ್ನೂ ಪಡೆದಿರುವ ಇವರು ವಾಷಿಂಗ್ಟನ್‍ನಲ್ಲಿ ವಿಶ್ವ ಬ್ಯಾಂಕ್ ನಲ್ಲಿ ಕನ್ಸಲ್ಟೆಂಟ್ ಆಗಿಯೂ ಸೇವೆ ಸಲ್ಲಿಸಿದವರು. ಚೀನಾದ ವುಹಾನ್‍ ನಲ್ಲಿ ಸಿಲುಕಿದ್ದ ಭಾರತದ 645 ವಿದ್ಯಾರ್ಥಿಗಳನ್ನು ವಾಪಸ್ ಕರೆತರುವ ನಿಟ್ಟಿನಲ್ಲೂ ಪ್ರೀತಿ ಪ್ರಮುಖ ಪಾತ್ರ ವಹಿಸಿದ್ದರು.

ಡಾ ನಿವೇದಿತಾ ಗುಪ್ತಾ: ದೇಶದ ಅತ್ಯುನ್ನತ ಆರೋಗ್ಯ ಸಂಶೋಧನಾ ಇಲಾಖೆಯ ಎಪಿಡೆಮಿಯಾಲಜಿ ಆ್ಯಂಡ್ ಕಮ್ಯುನಿಕೇಬಲ್ ಡಿಸೀಸಸ್ ವಿಭಾಗದಲ್ಲಿ ವೈರಲ್ ರೋಗಗಳ ಘಟಕದ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುವ ನಿವೇದಿತಾ ಪ್ರಮುಖ ಜವಾಬ್ದಾರಿ ಭಾರತದಲ್ಲಿ ಕೊರೋನ ಪರೀಕ್ಷೆ ಮತ್ತು ಚಿಕಿತ್ಸೆ ಕುರಿತಂತೆ ನಿಯಮಾವಳಿ ರಚಿಸುವುದಾಗಿದೆ.

ಕಳೆದ ವರ್ಷ ಕೇರಳದಲ್ಲಿ ನಿಪಾಹ್ ಸೋಂಕು ಸಾಕಷ್ಟು ಆತಂಕ ಸೃಷ್ಟಿಸಿದಾಗ ಈ ಕುರಿತಂತೆ ತನಿಖೆ ಹಾಗೂ ನಿಯಂತ್ರಣ ಕಾರ್ಯದಲ್ಲಿ ನಿವೇದಿತಾ ಪ್ರಮುಖ ಪಾತ್ರ ವಹಿಸಿದ್ದರು.

ಲೇಡಿ ಹಾರ್ಡಿಂಗ್ ಮೆಡಿಕಲ್ ಕಾಲೇಜಿನಿಂದ ಎಂಬಿಬಿಎಸ್ ಪದವಿ ಪಡೆದಿರುವ ಡಾ. ನಿವೇದಿತಾ ದೇಶದಾದ್ಯಂತ ಕೋವಿಡ್-19 ಪರೀಕ್ಷೆಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಮುಖ ಕ್ರಮಗಳನ್ನು ಕೈಗೊಂಡಿದ್ದಾರೆ. ಕೇವಲ ಎರಡು ತಿಂಗಳ ಅವಧಿಯಲ್ಲಿ ಸರಕಾರಿ ವಲಯದಲ್ಲಿ 130 ಪ್ರಯೋಗಾಲಯಗಳು ಹಾಗೂ ಖಾಸಗಿ ವಲಯದಲ್ಲಿ 52 ಪ್ರಯೋಗಾಲಯಗಳು ಕೊರೋನ ವೈರಸ್ ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗುವ ನಿಟ್ಟಿನಲ್ಲಿ ಈಕೆ ಶ್ರಮಿಸಿದ್ದಾರೆ.

ಜೆಎನ್‍ಯುವಿನಿಂದ ಮಾಲಿಕ್ಯುಲರ್ ಮೆಡಿಸಿನ್‍ ನಲ್ಲಿ ಪಿಎಚ್ಡಿ ಪದವಿ ಪಡೆದಿರುವ ಈಕೆ ಐಸಿಎಂಆರ್‍ನ ವೈರಾಣು ಸಂಶೋಧನಾ ಮತ್ತು ಪತ್ತೆ ಪ್ರಯೋಗಾಲಯ ಜಾಲ ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ರೇಣು ಸ್ವರೂಪ್: ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಬಯೋಟೆಕ್ನಾಲಜಿ ವಿಭಾಗದಲ್ಲಿ ಕಳೆದ 30 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ರೇಣು ವಿಜ್ಞಾನಿ. ಎಪ್ರಿಲ್ 2018ರಲ್ಲಿ ಇವರನ್ನು ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿತ್ತು.  ಕೊರೋನ ವೈರಸ್ ಲಸಿಕೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿನ ಸಂಶೋಧನೆಯಲ್ಲಿ ರೇಣು ಈಗ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಜೆನೆಟಿಕ್ಸ್ ಆ್ಯಂಡ್ ಪ್ಲಾಂಟ್ ಬ್ರೀಡಿಂಗ್‍ ನಲ್ಲಿ ಈಕೆ ಪಿಎಚ್ಡಿ ಪದವಿಯನ್ನೂ ಹೊಂದಿದ್ದಾರೆ.

ಪ್ರಿಯಾ ಅಬ್ರಹಾಂ: ಪುಣೆಯಲ್ಲಿರುವ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ವೈರಾಲಜಿ ಮುಖ್ಯಸ್ಥೆಯಾಗಿದ್ದಾರೆ ಪ್ರಿಯಾ. ಆರಂಭದಲ್ಲಿ ದೇಶದ ಏಕೈಕ ಕೋವಿಡ್-19 ಪತ್ತೆ  ಕೇಂದ್ರ ಇದಾಗಿತ್ತು. ಪ್ರಕರಣಗಳು ಹೆಚ್ಚಾಗುತ್ತಿದ್ದಂತೆಯೇ ಪರೀಕ್ಷೆಗಳನ್ನು 12ರಿಂದ 14 ಗಂಟೆಗಳಲ್ಲಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಸಂಸ್ಥೆ ಯಶಸ್ಸು ಸಾಧಿಸಿತ್ತು.

ಎಂಬಿಬಿಎಸ್ ಪದವಿ ಜತೆಗೆ ಮೆಡಿಕಲ್ ಮೈಕ್ರೋಬಯಾಲಜಿಯಲ್ಲಿ  ಕ್ರಿಶ್ಚಿಯನ್ ಮೆಡಿಕಲ್ ಕಾಲೇಜ್, ವೆಲ್ಲೂರು ಇಲ್ಲಿಂದ ಪಿಎಚ್ಡಿ ಪದವಿ ಪಡೆದಿರುವ ಈಕೆ ಸಿಎಂಸಿ ವೆಲ್ಲೂರ್ ಇಲ್ಲಿನ ಕ್ಲಿನಿಕಲ್ ವೈರಾಲಜಿ ವಿಭಾಗದ ಮಾಜಿ ಮುಖ್ಯಸ್ಥೆಯಾಗಿದ್ದಾರೆ.

ಬೀಲಾ ರಾಜೇಶ್: ತಮಿಳುನಾಡು ಆರೋಗ್ಯ ಇಲಾಖೆಯ ಕಾರ್ಯದರ್ಶಿಯಾಗಿರುವ ಬೀಲಾ ರಾಜ್ಯದಲ್ಲಿ ಕೊರೋನ ವೈರಸ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ. 1997 ಬ್ಯಾಚಿನ ಐಎಎಸ್ ಅಧಿಕಾರಿಯಾಗಿರುವ ಇವರು ಮದ್ರಾಸ್ ಮೆಡಿಕಲ್ ಕಾಲೇಜಿನಿಂದ ಎಂಬಿಬಿಎಸ್ ಪದವಿ ಪಡೆದಿದ್ದಾರೆ. ಈ ಹಿಂದೆ ಚೆಂಗಲ್ಪಟ್ಟು ಇಲ್ಲಿ ಸಬ್-ಕಲೆಕ್ಟರ್ ಆಗಿ  ಮೀನುಗಾರಿಯಾ ಆಯುಕ್ತರು ಹಾಗೂ ತಮಿಳುನಾಡಿನ ನಗರ ಯೋಜನಾ ಆಯುಕ್ತರಾಗಿ ಈಕೆ ಸೇವೆ ಸಲ್ಲಿಸಿದ್ದಾರೆ. ಆರೋಗ್ಯ ಕಾರ್ಯದರ್ಶಿಯಾಗಿ ಕಳೆದ ವರ್ಷ ನೇಮಕಗೊಳ್ಳುವ ಮುನ್ನ ಈಕೆ  ಭಾರತೀಯ ಔಷಧಿ ಹಾಗೂ ಹೋಮಿಯೋಪತಿ ವಿಭಾಗದ ಆಯುಕ್ತೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News