ವಿಶ್ವ ಆರೋಗ್ಯ ಸಂಸ್ಥೆಯಿಂದ ಚೀನಾ ಪರ ಧೋರಣೆ ಅಮೆರಿಕದ ದೇಣಿಗೆ ನಿಲ್ಲಿಸುತ್ತೇವೆ: ಟ್ರಂಪ್
ವಾಶಿಂಗ್ಟನ್, ಎ. 8: ನೋವೆಲ್-ಕೊರೋನ ವೈರಸ್ ಸಾಂಕ್ರಾಮಿಕದ ವಿಷಯದಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯು ಚೀನಾ ಪರ ಪಕ್ಷಪಾತ ಧೋರಣೆಯನ್ನು ಹೊಂದಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಆರೋಪಿಸಿದ್ದಾರೆ ಹಾಗೂ ಅದಕ್ಕೆ ಅಮೆರಿಕ ನೀಡುತ್ತಿರುವ ದೇಣಿಗೆಯನ್ನು ತಡೆಹಿಡಿಯುವ ಬೆದರಿಕೆ ಹಾಕಿದ್ದಾರೆ.
ಅಮೆರಿಕವು ವಿಶ್ವ ಆರೋಗ್ಯ ಸಂಸ್ಥೆಯ ಅತಿ ದೊಡ್ಡ ಆರ್ಥಿಕ ಮೂಲವಾಗಿದೆ.
‘‘ವಿಶ್ವ ಆರೋಗ್ಯ ಸಂಸ್ಥೆಗೆ ಅಮೆರಿಕ ನೀಡುತ್ತಿರುವ ದೇಣಿಗೆಗೆ ನಾನು ಅತ್ಯಂತ ಶಕ್ತಿಶಾಲಿ ತಡೆಯನ್ನು ಹೇರುತ್ತೇನೆ’’ ಎಂದು ಇಲ್ಲಿನ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್ ಹೇಳಿದರು.
‘‘ವಿಶ್ವ ಆರೋಗ್ಯ ಸಂಸ್ಥೆಗೆ ಮಾಡುತ್ತಿರುವ ಖರ್ಚನ್ನು ನಾವು ನಿಲ್ಲಿಸಲಿದ್ದೇವೆ’’ ಎಂದು ಟ್ರಂಪ್ ನುಡಿದರು. ‘‘ವಿಶ್ವ ಆರೋಗ್ಯ ಸಂಸ್ಥೆಯು ಚೀನಾದ ಪರವಾಗಿ ಕೆಲಸ ಮಾಡುತ್ತಿದೆ. ಅದು ಸರಿಯಲ್ಲ’’ ಎಂದರು. ‘‘ವಿಶ್ವ ಆರೋಗ್ಯ ಸಂಸ್ಥೆಯು ಯಾಕೆ ಇಂಥ ತಪ್ಪು ಶಿಫಾರಸು ಮಾಡಿತು?’’ ಎಂದು ಟ್ರಂಪ್ ಪ್ರಶ್ನಿಸಿದರು.
ನೋವೆಲ್-ಕೊರೋನ ವೈರಸ್ ಸಾಂಕ್ರಾಮಿಕವು ಚೀನಾದಲ್ಲಿ ಹುಟ್ಟಿ ಈಗ ಜಗತ್ತಿನೆಲ್ಲೆಡೆ ಹಬ್ಬಿದೆ. ವೈರಸ್ ಹರಡುವುದನ್ನು ತಡೆಯಲು ಅಂತರ್‌ರಾಷ್ಟ್ರೀಯ ಪ್ರಯಾಣವನ್ನು ನಿರ್ಬಂಧಿಸುವ ಅಗತ್ಯವಿಲ್ಲ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆಯು ಆರಂಭದಲ್ಲಿ ಶಿಫಾರಸು ಮಾಡಿತ್ತು.
ಈ ಶಿಫಾರಸಿಗೆ ಪ್ರತಿಕ್ರಿಯೆಯಾಗಿ ಟ್ರಂಪ್ ಮೇಲಿನ ಹೇಳಿಕೆಯನ್ನು ನೀಡಿದ್ದಾರೆ ಎಂದು ಭಾವಿಸಲಾಗಿದೆ.
‘‘ಅದೃಷ್ಟವಶಾತ್, ನಮ್ಮ ಗಡಿಯನ್ನು ಚೀನಾಕ್ಕೆ ತೆರೆಯುವಂತೆ ಅವರು ಮಾಡಿದ ಸಲಹೆಯನ್ನು ನಾನು ಆರಂಭದಲ್ಲೇ ತಿರಸ್ಕರಿಸಿದೆ’’ ಎಂದರು.
ನೂತನ-ಕೊರೋನ ವೈರಸ್ ಸಾಂಕ್ರಾಮಿಕವನ್ನು ಚೀನಾ ನಿಭಾಯಿಸಿದ ಬಗ್ಗೆ ಅಮೆರಿಕದಲ್ಲಿ, ಅದರಲ್ಲೂ ಮುಖ್ಯವಾಗಿ ಟ್ರಂಪ್‌ರ ರಿಪಬ್ಲಿಕನ್ ಪಕ್ಷದ ಅನುಯಾಯಿಗಳಲ್ಲಿ ಅತೃಪ್ತಿಯಿದೆ.
ಆರಂಭದಲ್ಲಿ ನಿರ್ಲಕ್ಷಿಸಿದ್ದ ಟ್ರಂಪ್
ಆದರೆ, ಆರಂಭದಲ್ಲಿ ಕೊರೋನ ವೈರಸನ್ನು ನಿರ್ಲಕ್ಷಿಸಿರುವುದಕ್ಕಾಗಿ ಸ್ವತಃ ಟ್ರಂಪ್ ಟೀಕೆಯನ್ನು ಎದುರಿಸುತ್ತಿದ್ದಾರೆ. ಇದೊಂದು ಸಾಮಾನ್ಯ ಜ್ವರ ಹಾಗೂ ಅಮೆರಿಕದಲ್ಲಿ ಅದು ನಿಯಂತ್ರಣದಲ್ಲಿದೆ ಎಂದು ಹೇಳಿದ್ದರು. ಆದರೆ, ಬಳಿಕ, ಅದೊಂದು ರಾಷ್ಟ್ರೀಯ ವಿಪತ್ತು ಎಂಬುದಾಗಿ ಘೋಷಿಸಿದರು. ಅಲ್ಲಿ ಈ ರೋಗದಿಂದ ಮೃತಪಟ್ಟವರ ಸಂಖ್ಯೆ ಈಗ 13,000ವನ್ನು ತಲುಪಿದೆ.