ವಾಟ್ಸ್ಆ್ಯಪ್ ಸುಳ್ಳು ಸುದ್ದಿಗಳ ನಿಯಂತ್ರಣಕ್ಕೆ ರಾಜ್ಯ ಪೊಲೀಸರಿಂದ 'ಫ್ಯಾಕ್ಟ್ ಚೆಕ್' ವಿಭಾಗ ಆರಂಭ

Update: 2020-04-09 14:04 GMT

ಬೆಂಗಳೂರು, ಎ. 9: ಸದಾ ಕೋಮು ದುಳ್ಳುರಿ ಹುಟ್ಟುಹಾಕುವ ಸಂದೇಶಗಳು, ನಕಲಿ ವಿಡಿಯೋ, ಚಿತ್ರಗಳು, ವ್ಯಕ್ತಿ ನಿಂದನೆ ಸೇರಿ ಸುಳ್ಳು ಸುದ್ದಿಗಳ ಮೂಲಕ ಸಮಾಜದ ಸ್ವಾಸ್ತ್ಯವನ್ನೇ ಹಾಳು ಮಾಡಲು ಮುಂದಾಗಿರುವ ಕಿಡಿಗೇಡಿಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಹೊಸ ವೆಬ್ ಸೈಟ್ ಯೊಂದನ್ನು ಹೊರತಂದಿದೆ.

check4spam.com ಸಹಯೋಗದೊಂದಿಗೆ karnataka state police fact check ಹೆಸರಿನಲ್ಲಿ ಹೊಸ ವೆಬ್‌ಸೈಟ್ ರಾಜ್ಯ ಪೊಲೀಸ್ ಇಲಾಖೆ ಹೊರತಂದಿದ್ದು, ಇದರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳ ನಿಜಾಂಶ ಪತ್ತೆ ಮಾಡುವ ಜೊತೆಗೆ ಕಿಡಿಗೇಡಿಗಳ ವಿರುದ್ಧ ಮುಕ್ತವಾಗಿ ದೂರು ಸಲ್ಲಿಸಬಹುದಾಗಿದೆ.

karnataka state police fact check ವೆಬ್‌ಸೈಟ್ ಮುಖಪುಟದಲ್ಲಿಯೇ ಪ್ರಸ್ತುತ ಚಾಲ್ತಿಯಲ್ಲಿರುವ ಸುಳ್ಳು ಸುದ್ದಿಗಳ ನಿಜಾಂಶವನ್ನು ಲಗತ್ತಿಸಲಾಗಿದೆ. ಅಷ್ಟೇ ಅಲ್ಲದೆ, ಕೊರೋನ ವೈರಸ್ ಕುರಿತು ಹರಿದಾಡುತ್ತಿರುವ ಸುಳ್ಳ ಸುದ್ದಿಗಳ ವಾಸ್ತವವನ್ನು ಬಿಚ್ಚಿಡಲಾಗಿದೆ.

ವರದಿ ಹೇಗೆ?: ಸಾಮಾಜಿಕ ಜಾಲತಾಣಗಳಾದ ವಾಟ್ಸ್ಆ್ಯಪ್, ಫೇಸ್ ಬುಕ್, ಟ್ವಿಟ್ಟರ್ ಸೇರಿದಂತೆ ಇನ್ನು ಹಲವು ಅಪ್ಲಿಕೇಷನ್ ಗಳಲ್ಲಿ ಹರಿದಾಡುವ ಕುರಿತು ನಾವು ನೇರವಾಗಿ ಪೊಲೀಸರಿಗೆ ಈ ವೆಬ್‌ಸೈಟ್ ಮೂಲಕ ದೂರು ಸಲ್ಲಿಸಬಹುದು. ತದನಂತರ, ಕೆಲವೇ ಗಂಟೆಗಳಲ್ಲಿಯೇ ನೀವು ಕಳುಹಿಸಿದ ಸುದ್ದಿಯ ಸತ್ಯಾಂಶವನ್ನು karnataka state police fact check ಬಯಲಿಗೆಳೆಯಲಿದೆ.

ಕಾನೂನು ಕ್ರಮ: ಕಿಡಿಗೇಡಿ ಹಬ್ಬಿಸುವ ಸುದ್ದಿಗಳಿಗೆ ಸ್ಪಷ್ಟನೆ ನೀಡುವುದು ಮಾತ್ರವಲ್ಲದೆ, ಅವರ ವಿರುದ್ಧ ಕಾನೂನು ಕ್ರಮವು ಕೈಗೊಳ್ಳಲು ಪೊಲೀಸ್ ಇಲಾಖೆಗೆ ಮುಂದಾಗಿದೆ.

ಈ ಸಂಬಂಧ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ತೆಗೆದುಕೊಳ್ಳುವ ಕಾನೂನು ಕ್ರಮವನ್ನು ಇದೇ ವೆಬ್ ಸೈಟ್ ನಲ್ಲಿ ಉಲ್ಲೇಖಿಸಲಾಗಿದೆ.

ಕೊರೋನ ವೈರಸ್ ಸೇರಿದಂತೆ ಸೂಕ್ಷ್ಮ ವಿಷಯಗಳ ಕುರಿತು ಸುಳ್ಳುಗಳನ್ನು ಹಬ್ಬಿಸುವವರ ವಿರುದ್ಧ ಕ್ರಮಕ್ಕೆ ಪೊಲೀಸ್ ಇಲಾಖೆ ಮುಂದಾಗಿದ್ದು, ಯಾವುದೇ ಸುದ್ದಿ, ಸಂದೇಶಗಳನ್ನು ಇನ್ನೊಬ್ಬರಿಗೆ ಕಳುಹಿಸುವ ಮೊದಲು ಸತ್ಯವೇ ಎಂದು ತಿಳಿದುಕೊಳ್ಳಿ.

-ಪ್ರವೀಣ್ ಸೂದ್, ರಾಜ್ಯ ಪೊಲೀಸ್ ಮಹಾನಿರ್ದೇಶಕ

ನೀವು ನೋಡಬಹುದು

ಯಾವುದೇ ಸುದ್ದಿ, ಅಥವಾ ವಿಡಿಯೋ ಸತ್ಯಾವೇ ಎಂದು ಪರಿಶೀಲಿಸಲು check4spam.com ವೆಬ್ ಸೈಟ್ ನೋಡಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News