ವಲಸೆ ಕಾರ್ಮಿಕರಿಗೆ ದೇಶದಲ್ಲಿ ಶೇ.65ರಷ್ಟು ಆಶ್ರಯತಾಣಗಳನ್ನು ನಡೆಸುತ್ತಿರುವ ಕೇರಳ ಸರಕಾರ

Update: 2020-04-09 14:13 GMT

ಹೊಸದಿಲ್ಲಿ :  ಲಾಕ್‍ಡೌನ್ ಹಿನ್ನೆಲೆಯಲ್ಲಿ ಅತಂತ್ರರಾಗಿರುವ ದೇಶದ ಸುಮಾರು 6.3 ಲಕ್ಷ ವಲಸಿಗ ಕಾರ್ಮಿಕರಿಗೆ ವಿವಿಧ ಸರಕಾರಗಳು ನಡೆಸುತ್ತಿರುವ ವಸತಿ ಶಿಬಿರಗಳ ಪೈಕಿ  ಶೇ. 47ರಷ್ಟು ಶಿಬಿರಗಳು ಕೇರಳದಲ್ಲಿವೆ. ಒಟ್ಟಾರೆಯಾಗಿ ಇಡೀ ದೇಶದಲ್ಲಿ ವಲಸಿಗ ಕಾರ್ಮಿಕರಿಗಾಗಿರುವ ಪರಿಹಾರ ಶಿಬಿರಗಳ ಪೈಕಿ ಶೇ .65ರಷ್ಟು ಶಿಬಿರಗಳನ್ನು ಕೇರಳ ಸರಕಾರ ನಡೆಸುತ್ತಿದೆ ಎಂಬ ಮಾಹಿತಿಯನ್ನು ಸ್ವತಃ ಕೇಂದ್ರ ಸರಕಾರವೇ ಸುಪ್ರೀಂ ಕೋರ್ಟಿಗೆ ನೀಡಿದೆ.

ದೇಶದ 578 ಜಿಲ್ಲೆಗಳಲ್ಲಿ ಅತಂತ್ರ ಸ್ಥಿತಿ ಎದುರಿಸುತ್ತಿರುವ ವಲಸಿಗ ಕಾರ್ಮಿಕರ ಕಲ್ಯಾಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೈಗೊಂಡಿರುವ ಕ್ರಮಗಳ ಕುರಿತು ಸುಪ್ರೀಂ ಕೋರ್ಟಿಗೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಸಲ್ಲಿಸಿದ ಸ್ಥಿತಿಗತಿ ವರದಿಯಲ್ಲಿ ಮೇಲಿನ ಮಾಹಿತಿ ನೀಡಲಾಗಿದೆ.

ವಲಸಿಗ ಕಾರ್ಮಿಕರು ಲಾಕ್‍ ಡೌನ್‍ ನಿಂದಾಗಿ ಎದುರಿಸುತ್ತಿರುವ ಸಮಸ್ಯೆಗಳನ್ನು ನ್ಯಾಯಾಲಯದ ಗಮನಕ್ಕೆ ತರುವ ನಿಟ್ಟಿನಲ್ಲಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ದಾವೆಗೆ ಪ್ರತಿಕ್ರಿಯೆಯಾಗಿ ಸಚಿವಾಲಯ ಈ ವರದಿ ಸಲ್ಲಿಸಿದೆ.

ಕೇರಳ ಸರಕಾರ ವಲಸಿಗ ಕಾರ್ಮಿಕರಿಗಾಗಿ 15,541 ಶಿಬಿರಗಳನ್ನು ನಡೆಸುತ್ತಿದ್ದರೆ ನಂತರದ ಸ್ಥಾನ 2,230 ಶಿಬಿರಗಳನ್ನು ನಡೆಸುತ್ತಿರುವ ಉತ್ತರ ಪ್ರದೇಶ ಸರಕಾರಕ್ಕೆ ಹೋಗಿದೆ ಎಂದು ಕೇಂದ್ರ ಸಲ್ಲಿಸಿರುವ ಅಫಿಡವಿಟ್‍ನಲ್ಲಿ ತಿಳಿಸಲಾಗಿದೆ. ದೇಶದ ವಿವಿಧೆಡೆ ರಾಜ್ಯ ಸರಕಾರಗಳು ಒಟ್ಟು 22,567 ಆಶ್ರಯತಾಣಗಳನ್ನು ಸುಮಾರು 6.3 ಲಕ್ಷ ಕಾರ್ಮಿಕರಿಗಾಗಿ ನಡೆಸುತ್ತಿವೆ. ಇವುಗಳ ಹೊರತಾಗಿ ಸರಕಾರೇತರ ಸಂಘಟನೆಗಳು 3,909 ಶಿಬಿರಗಳ ಮೂಲಕ 4 ಲಕ್ಷ ಕಾರ್ಮಿಕರಿಗೆ ಆಶ್ರಯ ಒದಗಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News