ಅಮೆರಿಕ: ಮತ್ತೆ 1,973 ಸಾವು

Update: 2020-04-09 17:08 GMT

ವಾಶಿಂಗ್ಟನ್, ಎ. 9: ಅಮೆರಿಕದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊರೋನವೈರಸ್‌ನಿಂದಾಗಿ 1,973 ಸಾವುಗಳು ಸಂಭವಿಸಿವೆ. ಇದು ದೈನಂದಿನ ಕೊರೋನ ವೈರಸ್ ಸಾವಿನ ಸಂಖ್ಯೆಯಲ್ಲಿ ದಾಖಲೆಯಾಗಿದೆ. ಇದರೊಂದಿಗೆ ದೇಶದಲ್ಲಿ ಮಾರಕ ಸಾಂಕ್ರಾಮಿಕ ಕಾಯಿಲೆಯಿಂದಾಗಿ ಮೃತಪಟ್ಟವರ ಸಂಖ್ಯೆ ಬುಧವಾರ 14,695ನ್ನು ದಾಟಿದೆ.

ಕೊರೋನವೈರಸ್ ಸಾವುಗಳ ಸಂಖ್ಯೆಯಲ್ಲಿ ಅಮೆರಿಕವು ಈಗ ಸ್ಪೇನನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ನೆಗೆದಿದೆ. ಇಟಲಿ ಮೊದಲ ಸ್ಥಾನದಲ್ಲಿದ್ದರೆ, ಸ್ಪೇನ್ ಮೂರನೇ ಸ್ಥಾನಕ್ಕೆ ಇಳಿದಿದೆ. ಇಟಲಿಯಲ್ಲಿ 17,669 ಸಾವುಗಳು ದಾಖಲಾಗಿದ್ದರೆ, ಸ್ಪೇನ್‌ನಲ್ಲಿ 14,555 ಸಾವುಗಳು ವರದಿಯಾಗಿವೆ.

ಅಮೆರಿಕದಲ್ಲಿ ಈ ವಾರ ಅತ್ಯಧಿಕ ಸಂಖ್ಯೆಯಲ್ಲಿ ಜನರು ಕೊರೋನವೈರಸ್‌ನಿಂದಾಗಿ ಸಾಯುತ್ತಾರೆ ಎಂದು ಅಮೆರಿಕದ ಅಧಿಕಾರಿಗಳು ಎಚ್ಚರಿಸಿದ್ದಾರೆ.

ಕನಿಷ್ಠ 11 ಭಾರತೀಯರ ಸಾವು

ಅಮೆರಿಕದಲ್ಲಿ ಕನಿಷ್ಠ 11 ಭಾರತೀಯರು ನೋವೆಲ್-ಕೊರೋನವೈರಸ್ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ ಹಾಗೂ ಇನ್ನೂ 16 ಮಂದಿ ಸೋಂಕಿಗೆ ಒಳಗಾಗಿದ್ದಾರೆ.

ಅಮೆರಿಕದಲ್ಲಿ ಕೊರೋನವೈರಸ್ ಸೋಂಕಿನಿಂದಾಗಿ ಮೃತಪಟ್ಟ ಭಾರತೀಯರೆಲ್ಲರೂ ಪುರುಷರು. ಅವರ ಪೈಕಿ 10 ಮಂದಿ ನ್ಯೂಯಾರ್ಕ್ ಮತ್ತು ನ್ಯೂಜರ್ಸಿ ಪ್ರದೇಶದವರು ಹಾಗೂ ಆ ಪೈಕಿ ನಾಲ್ವರು ನ್ಯೂಯಾರ್ಕ್ ನಗರದಲ್ಲಿ ಟ್ಯಾಕ್ಸಿ ಚಾಲಕರಾಗಿ ಕೆಲಸ ಮಾಡುತ್ತಿದ್ದವರು.

ನ್ಯೂಯಾರ್ಕ್ ನಗರವು ಅಮೆರಿಕದ ಕೊರೋನವೈರಸ್ ಸೋಂಕಿನ ಕೇಂದ್ರಬಿಂದುವಾಗಿದೆ ಹಾಗೂ ಅಲ್ಲಿ 6,000ಕ್ಕೂ ಅಧಿಕ ಸಾವುಗಳು ಸಂಭವಿಸಿವೆ ಹಾಗೂ 1,38,000ಕ್ಕೂ ಅಧಿಕ ಸೋಂಕು ಪ್ರಕರಣಗಳು ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News