ಕ್ಲಿಂಟನ್-ಲೆವಿನ್‌ಸ್ಕಿ ಪ್ರೇಮ ಸಂಬಂಧ ಬಯಲು ಮಾಡಿದ್ದ ಮಹಿಳೆ ನಿಧನ

Update: 2020-04-09 17:11 GMT

ವಾಶಿಂಗ್ಟನ್, ಎ. 9: ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ ಮತ್ತು ಮೋನಿಕಾ ಲೆವಿನ್‌ಸ್ಕಿ ನಡುವಿನ ಪ್ರೇಮ ವ್ಯವಹಾರ ಬಹಿರಂಗಗೊಳ್ಳಲು ಕಾರಣವಾಗಿದ್ದ ರಕ್ಷಣಾ ಇಲಾಖೆ ಪೆಂಟಗನ್ ಸಿಬ್ಬಂದಿ ಲಿಂಡಾ ಟ್ರಿಪ್ ಬುಧವಾರ ನಿಧನರಾಗಿದ್ದಾರೆ.

70 ವರ್ಷದ ಅವರು ಮೇದೋಜೀರಕ ಗ್ರಂಥಿಯ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು.

ಟ್ರಿಪ್ ರಕ್ಷಣಾ ಇಲಾಖೆಯಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಅವರ ಸಹೋದ್ಯೋಗಿ ಲೆವಿನ್‌ಸ್ಕಿ 1990ರ ದಶಕದ ಮಧ್ಯ ಭಾಗದಲ್ಲಿ ಶ್ವೇತಭವನದಲ್ಲಿ ಕೆಲಸ ಮಾಡಿದ್ದರು.

ಶ್ವೇತಭವನದ ಓವಲ್ ಕಚೇರಿಯಲ್ಲಿ ನಾನು ಕ್ಲಿಂಟನ್ ಜೊತೆ ರಹಸ್ಯವಾಗಿ ಮಲಗಿದ್ದಾಗಿ ಲೆವಿನ್‌ಸ್ಕಿ, ಟ್ರಿಪ್‌ಗೆ ಹೇಳಿದ್ದರು. ಅವರ ನಡುವೆ ನಡೆದ ಸಂಭಾಷಣೆಯನ್ನು ಟ್ರಿಪ್ ರಹಸ್ಯವಾಗಿ ಧ್ವನಿಮುದ್ರಿಸಿಕೊಂಡಿದ್ದರು. ನನ್ನ ನೀಲಿ ದಿರಿಸೊಂದರಲ್ಲಿ ಕ್ಲಿಂಟನ್‌ರ ವೀರ್ಯದ ಕಲೆಗಳಿದ್ದು ಅದನ್ನು ಈಗಲೂ ನಾನು ಜೋಪಾನವಾಗಿ ಇಟ್ಟುಕೊಂಡಿದ್ದೇನೆ ಎಂದು ಲೆವಿನ್‌ಸ್ಕಿ ಹೇಳಿದ್ದರು.

ಬಳಿಕ ಟ್ರಿಪ್ ಆ ಧ್ವನಿಮುದ್ರಿಕೆಗಳನ್ನು ಸ್ವತಂತ್ರ ಪ್ರಾಸಿಕ್ಯೂಟರ್ ಕೆನ್ ಸ್ಟಾರ್‌ಗೆ ಹಸ್ತಾಂತರಿಸಿದ್ದರು. ಬಳಿಕ ತನಿಖೆ ನಡೆದು, ಅಂತಿಮವಾಗಿ 1998ರಲ್ಲಿ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಅವರಿಗೆ ವಾಗ್ದಂಡನೆ ವಿಧಿಸಿತು. ಆದರೆ, ಬಳಿಕ ಸೆನೆಟ್ ವಾಗ್ದಂಡನೆಯಿಂದ ಅವರನ್ನು ದೋಷಮುಕ್ತಗೊಳಿಸಿತು.

ಚೇತರಿಕೆ ಹಾರೈಸಿದ ಲೆವಿನ್‌ಸ್ಕಿ

ಲಿಂಡಾ ಟ್ರಿಪ್ ವಿಶ್ವಾಸದ್ರೋಹ ಮಾಡಿದ್ದಾರೆ ಎಂಬುದಾಗಿ ಅಂದು ಲೆವಿನ್‌ಸ್ಕಿ ಹೇಳಿದ್ದರು. ಬುಧವಾರ ಟ್ವೀಟ್ ಮಾಡಿದ ಅವರು, ‘‘ಹಿಂದೆ ಏನೇ ನಡೆದಿರಲಿ, ಲಿಂಡಾ ಟ್ರಿಪ್‌ರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ ಎಂಬ ವಿಷಯ ತಿಳಿದಾಗ, ನಾನು ಅವರ ಚೇತರಿಕೆಗಾಗಿ ಹಾರೈಸುವೆ. ಇದು ಅವರ ಕುಟುಂಬಕ್ಕೆ ಎಷ್ಟು ಕಷ್ಟದ ಸಮಯ ಎನ್ನುವುದನ್ನು ಊಹಿಸಲೂ ನನಗೆ ಆಗುತ್ತಿಲ್ಲ’’ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News