ಕೋವಿಡ್ ಚಿಕಿತ್ಸಕರಿಗೆ ಪಿಪಿಇಗಳ ಕೊರತೆ ಇಲ್ಲ: ಕೇಂದ್ರ ಆರೋಗ್ಯ ಸಚಿವಾಲಯ

Update: 2020-04-09 17:40 GMT

ಹೊಸದಿಲ್ಲಿ, ಎ.9: ಕೋವಿಡ್-19 ರೋಗಿಗಳ ಶುಶ್ರೂಷೆ ಮಾಡುವವರಿಗೆ ವೈಯಕ್ತಿಕ ಸಂರಕ್ಷಣಾ ಸಲಕರಣೆ (ಪಿಪಿಇ)ಗಳ ಲಭ್ಯತೆಯ ಬಗ್ಗೆ ಭೀತಿಪಡುವ ಅಗತ್ಯವಿಲ್ಲವೆಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ. ಆದರೆ ಅವುಗಳನ್ನು ತಾರ್ಕಿಕವಾಗಿ ಬಳಸುವ ಅಗತ್ಯವಿದೆಯೆಂದು ಅದು ಒತ್ತಿಹೇಳಿದೆ.

ಇಂದು ಹೊಸದಿಲ್ಲಿಯಲ್ಲಿ ದೈನಂದಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ 20 ಕಂಪೆನಿಗಳು, ಪಿಪಿಇಗಳನ್ನು ತಯಾರಿಸುತ್ತಿವೆ. ಅವುಗಳಿಗೆ ಈಗಾಗಲೇ 1.7 ಕೋಟಿ ಪಿಪಿಇಗಳ ತಯಾರಿಕೆಗಾಗಿ ಆರ್ಡರ್ ನೀಡಲಾಗಿದೆ ಎಂದರು.

‘‘ಪಿಪಿಇಗಳನ್ನು ಅಗತ್ಯಕ್ಕನುಸಾರವಾಗಿ ಬಳಸಬೇಕಾಗಿದೆ. ನಾನು ಈ ಮೊದಲೇ ಹೇಳಿರುವಂತೆ, ದಿನಕ್ಕೆ ಓರ್ವ ನಾಲ್ಕು ಎನನ್95 ಮಾಸ್ಕ್‌ಗಳನ್ನು ಬಳಸಬಹುದಾದರೂ, ಒಂದೇ ಒಂದು ಮಾಸ್ಕ್‌ನಲ್ಲಿಯೂ ಹೊಂದಿಸಿಕೊಳ್ಳಬಹುದಾಗಿದೆ. ಕೇಂದ್ರ ಸರಕಾರವು ರಾಜ್ಯಗಳಿಗೆ ಪಿಪಿಇಗಳ ಪೂರೈಕೆಯನ್ನು ಹೆಚ್ಚಿಸಿದೆ. ಇದೇ ವೇಳೆ ಅವುಗಳನ್ನು ತಾರ್ಕಿಕವಾಗಿ ಬಳಸು ವಂತೆಯೂ ನಾವು ಅವರಿಗೆ ವಿನಂತಿಸುತ್ತೇವೆ’’ ಎಂದು ಅಗರ್ವಾಲ್ ಹೇಳಿದ್ದಾರೆ.

ಈಗಾಗಲೇ 49 ಸಾವಿರ ವೆಂಟಿಲೇಟರ್‌ಗಳ ತಯಾರಿಕೆಗೂ ಆರ್ಡರ್ ಸಲ್ಲಿಸಲಾಗಿದ್ದೆ ಎಂದ ಅವರು ದೇಶಾದ್ಯಂತ 9 ರಾಜ್ಯಗಳಿಗೆ ಕೋವಿಡ್-19 ತಜ್ಞ ವೈದ್ಯರ ತಂಡಗಳನ್ನು ರವಾನಿಸಲಾಗಿದೆಯೆಂದು ತಿಳಿಸಿದರು.

ಬುಧವಾರದಿಂದೀಚೆಗೆ ದೇಶಾದ್ಯಂತ ಕರೋನ ವೈರಸ್ ಸೋಂಕಿನ 540 ಪ್ರಕರಣಳು ವರದಿಯಾಗಿವೆ ಹಾಗೂ 17 ಮಂದಿ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದ್ದಾರೆ. ಭಾರತೀಯ ರೈಲ್ವೆಯು 6 ಲಕ್ಷಕ್ಕೂ ಅಧಿಕ ಮರುಬಳಕೆಗೆ ಯೋಗ್ಯವಾದ ಮಾಸ್ಕ್‌ಗಳು ಹಾಗೂ 4 ಸಾವಿರ ಲೀಟರ್‌ಗಳಷ್ಟು ಸ್ಯಾನಿಟೈಸರ್‌ಗಳನ್ನು ಉತ್ಪಾದಿಸಿದೆ ಎಂದರು. ರೈಲ್ವೆಯು ತನ್ನ 3250 ಕೋಚ್‌ಗಳನ್ನು ಕೋವಿಡ್-19 ಐಸೋಲೇಶನ್ ಘಟಕಗಳಾಗಿ ಮಾರ್ಪಡಿಸಿವೆ ಎಂದು ಅವರು ಹೇಳಿದರು.

ಭಾರತದಲ್ಲಿ ಕೊರೋನಾ ಪೀಡಿತರ ಸಂಖ್ಯೆ 5734ಕ್ಕೇರಿದೆ ಹಾಗೂ 166 ಮಂದಿ ಕೊನೆಯುಸಿರೆಳೆದಿದ್ದಾರೆಂದು ಲವ ಅಗರ್ವಾಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News