ಜೀವನೋಪಾಯ ಕಳೆದುಕೊಂಡ ಶೇ.90 ಕಾರ್ಮಿಕರು, ಶೇ. 94 ಕಾರ್ಮಿಕರು ಪರಿಹಾರ ಪಡೆಯಲು ಅನರ್ಹ!

Update: 2020-04-10 18:10 GMT

ಹೊಸದಿಲ್ಲಿ: ಕೋವಿಡ್-19 ಸೋಂಕು ಹರಡುವಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರಕಾರ ಜಾರಿಗೊಳಿಸಿರುವ 21 ದಿನಗಳ ಲಾಕ್‍ ಡೌನ್‍ ನಿಂದಾಗಿ ಕಳೆದ ಮೂರು ವಾರಗಳಲ್ಲಿ ಅಂದಾಜು ಶೇ. 90ರಷ್ಟು ಕಾರ್ಮಿಕರು ತಮ್ಮ ಆದಾಯದ ಮೂಲವನ್ನೇ ಕಳೆದುಕೊಂಡಿದ್ದಾರೆ ಎಂದು ಎನ್‍ ಜಿಒ 'ಜನ್  ಸಾಹಸ್' ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ ಎಂದು thequint.com ವರದಿ ಮಾಡಿದೆ.

ಸರಕಾರದ ಪರಿಹಾರ ಹಾಗೂ ಇತರ ಸವಲತ್ತುಗಳನ್ನು ಪಡೆಯಲು ಅಗತ್ಯವಿರುವ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಐಡಿ ಕಾರ್ಡ್‍ ಗಳು ಶೇ. 94ರಷ್ಟು ಕಾರ್ಮಿಕರ ಬಳಿಯಿಲ್ಲ ಎಂದು ದೇಶದ ವಿವಿಧ ಭಾಗಗಳಲ್ಲಿನ 3,196 ನಿರ್ಮಾಣ ಕಾರ್ಮಿಕರನ್ನೊಳಗೊಂಡ ಈ ಸಮೀಕ್ಷೆಯ  ಫಲಿತಾಂಶ ತಿಳಿಸುತ್ತದೆ. ಇದರಿಂದಾಗಿ  ಸರಕಾರ ತನ್ನ ಕಟ್ಟಡ ಮತ್ತು ನಿರ್ಮಾಣ ಕೆಲಸಗಾರರ ನಿಧಿಯಿಂದ ಒದಗಿಸಿರುವ 32,000 ಕೋಟಿ ರೂ. ನಿಂದ ಇವರೆಲ್ಲಾ ಯಾವುದೇ ಪ್ರಯೋಜನ ಪಡೆಯುವುದು ಅಸಾಧ್ಯವಾಗುತ್ತದೆ ಎಂದು ಸಮೀಕ್ಷೆ ಹೇಳಿದೆ.

"ಸದ್ಯ ದೇಶದ ನಿರ್ಮಾಣ ರಂಗದಲ್ಲಿ 5.5 ಕೋಟಿ ಕಾರ್ಮಿಕರಿದ್ದು ಅವರ ಪೈಕಿ 5.1 ಕೋಟಿ ಮಂದಿ ಯಾವುದೇ ಸೌಲಭ್ಯಗಳನ್ನು ಪಡೆಯಲು ಅನರ್ಹರಾಗಬಹುದು'' ಎಂದು ಸಮೀಕ್ಷೆ ತಿಳಿಸಿದೆ.

ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ. 17ರಷ್ಟು ಕಾರ್ಮಿಕರ ಬಳಿ ಬ್ಯಾಂಕ್ ಖಾತೆಯೂ ಇಲ್ಲದೇ ಇರುವುದರಿಂದ ಸರಕಾರ ಒದಗಿಸುವ ಆರ್ಥಿಕ ಸಹಾಯವೂ ಅವರಿಗೆ ಸಿಗದಿರಬಹುದು ಎಂದು ಸಮೀಕ್ಷೆ ಕಂಡುಕೊಂಡಿದೆ. ಅದೇ ಸಮಯ ಇಂತಹ ಕಾರ್ಮಿಕರಿಗೆ ಆಧಾರ್ ಗುರುತು ಪತ್ರ ಅಥವಾ ಗ್ರಾಮ ಪಂಚಾಯತ್ ಮತ್ತು ಅಂಚೆ ಕಚೇರಿಗಳ ಸಹಾಯದಿಂದ ಅವರ ಮನೆ ಬಾಗಿಲಿಗೆ ಆರ್ಥಿಕ ಸಹಾಯ ಒದಗಿಸಬಹುದು ಎಂದು 'ಜನ್ ಸಾಹಸ್' ಸಲಹೆ ನೀಡಿದೆ.

ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ 62ರಷ್ಟು ಕಾರ್ಮಿಕರು ತಮಗೆ ಸರಕಾರ ಘೋಷಿಸಿರುವ ಪರಿಹಾರ ಕ್ರಮಗಳ ಬಗ್ಗೆ ತಿಳಿದಿಲ್ಲವೆಂದರೆ ಶೇ. 37ರಷ್ಟು ಮಂದಿಗೆ ಈ ಸವಲತ್ತುಗಳನ್ನಿ ಹೇಗೆ ಪಡೆಯುವುದು ಎಂದು ತಿಳಿದಿಲ್ಲ.

ಒಂದು ದಿನಕ್ಕೆ ಸಾಕಾಗುವಷ್ಟೂ ರೇಷನ್ ತಮ್ಮ ಬಳಿಯಿಲ್ಲ ಎಂದು ಶೇ. 42ರಷ್ಟು ಕಾರ್ಮಿಕರು ಹೇಳಿದರೆ ಶೇ. 33ರಷ್ಟು ಕಾರ್ಮಿಕರು ತಮಗೆ ರೇಷನ್ ವಸ್ತು ಖರೀದಿಸಲು ಹಣವಿಲ್ಲ ಎಂದಿದ್ದಾರೆ. ಶೇ. 14ರಷ್ಟು ಮಂದಿಯ ಬಳಿ ರೇಷನ್ ಕಾರ್ಡುಗಳೇ ಇಲ್ಲದೇ ಇದ್ದರೆ ಶೇ. 12ರಷ್ಟು ಮಂದಿ ತಾವು ವಲಸಿಗರಾಗಿರುವುದರಿಂದ ತಾವಿರುವ ಪ್ರದೇಶದಲ್ಲಿ ರೇಷನ್ ವಸ್ತುಗಳು ತಮಗೆ ಲಭ್ಯವಾಗುವುದಿಲ್ಲ ಎಂದಿದ್ದಾರೆ.

ಶೇ 31ರಷ್ಟು ಕಾರ್ಮಿಕರು ತಮಗೆ ಸಾಲಬಾಧೆಯಿದೆ ಎಂದಿದ್ದು ಅದನ್ನು ಮರುಪಾವತಿ ಮಾಡುವುದು ಕಷ್ಟವಾಗಬಹುದು ಎಂದಿದ್ದಾರೆ.

 ಕಾರ್ಮಿಕರು ಎದುರಿಸುತ್ತಿರುವ ಮತ್ತೊಂದು ಪ್ರಮುಖ ಸಮಸ್ಯೆಯೆಂದರೆ ಸಾಲ ಮರುಪಾವತಿ. ಸಾಲ ಪಡೆದಿದ್ದು ಈಗ ಸರಿಯಾದ ಕೆಲಸ ಇಲ್ಲದಿರುವುದರಿಂದ ಮರುಪಾವತಿಗೆ ಕಷ್ಟವಾಗುತ್ತಿದೆ ಎಂದು 31% ಕಾರ್ಮಿಕರು ಹೇಳಿದ್ದಾರೆ.

ಕೊರೋನ ಸೋಂಕಿನಿಂದ ಆಗಿರುವ ಪರಿಣಾಮ ದೊಡ್ಡ ಸವಾಲಾಗಿದ್ದರೂ ಲಾಕ್‌ಡೌನ್‌ನಿಂದ ಅರ್ಥವ್ಯವಸ್ಥೆಯ ಮೇಲಾಗಿರುವ ಪರಿಣಾಮ ಇದಕ್ಕಿಂತ ಗಂಭೀರವಾಗಿದೆ. ಈಗಾಗಲೇ ದೇಶದ ಕೆಲವೆಡೆ ಹಸಿವಿನಿಂದ ಸಾವು ಸಂಭವಿಸಿರುವ, ವಲಸೆ ಕಾರ್ಮಿಕರು ಕಾಲ್ನಡಿಗೆಯಲ್ಲೇ ತಮ್ಮ ಊರಿಗೆ ಮರಳುತ್ತಿರುವ ಘಟನೆಗಳು ವರದಿಯಾಗಿವೆ. ಬಡವರಿಗೆ ಮತ್ತು ಕಾರ್ಮಿಕರಿಗೆ ಸರಕಾರ ಘೋಷಿಸಿರುವ ಪರಿಹಾರ ಧನ ಪರ್ಯಾಪ್ತವಾಗಿದೆಯೇ ಮತ್ತು ಅಗತ್ಯವಿರುವವರಿಗೆ ತಲುಪುತ್ತಿದೆಯೇ ಎಂಬುದೇ ಇಲ್ಲಿರುವ ಪ್ರಶ್ನೆಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News