ಚೀನಾದಿಂದ 1 ತಿಂಗಳು ಪ್ರಯಾಣಿಸಿ ಮಣಿಪುರ ತಲುಪಿದ ಮಹಿಳೆಯ ಬಂಧನ

Update: 2020-04-10 18:04 GMT

ಗುವಾಹಟಿ, ಎ.10: ಚೀನಾದಿಂದ ಫೆಬ್ರವರಿ 28ರಂದು ರಸ್ತೆಯಲ್ಲಿ ನಡೆಯುತ್ತಾ ಸಾಗಿದ ಮಣಿಪುರ ಮೂಲದ ಮಹಿಳೆಯೊಬ್ಬಳು ಎಪ್ರಿಲ್ 6ರಂದು ಮ್ಯಾನ್ಮಾರ್ ಮೂಲಕ ಮಣಿಪುರ ಪ್ರವೇಶಿಸುವ ಪ್ರಯತ್ನದಲ್ಲಿದ್ದಾಗ ಅಧಿಕಾರಿಗಳು ಬಂಧಿಸಿರುವುದಾಗಿ ವರದಿಯಾಗಿದೆ.

ಕೊರೋನ ಸೋಂಕಿನ ಕಾರಣ ಸಂಚಾರ ವ್ಯವಸ್ಥೆಯನ್ನು ನಿರ್ಬಂಧಿಸಿದ ಹಿನ್ನೆಲೆಯಲ್ಲಿಮಣಿಪುರದ ಚುರಚಂದ್‌ಪುರ ಗ್ರಾಮದ ನಿವಾಸಿ, 23 ವರ್ಷದ ಮಹಿಳೆ ಚೀನಾದಿಂದ ಫೆಬ್ರವರಿ 28ರಂದು ಸ್ವದೇಶಕ್ಕೆ ಮರಳಲು ರಸ್ತೆ ಮೂಲಕ ನಡೆಯುತ್ತಾ ಸಾಗಿದ್ದರು. ಅಲ್ಲಿಂದ ಮ್ಯಾನ್ಮಾರ್ ದೇಶದ ಮೂಲಕ ಸಾಗಿ ಮಣಿಪುರದ ಮೊರೆಹ್ ಬಳಿಯಿರುವ ಅಂತರಾಷ್ಟ್ರೀಯ ಚೆಕ್‌ಪೋಸ್ಟ್‌ನಿಂದ ಮಣಿಪುರ ಪ್ರವೇಶಿಸಲು ಮುಂದಾಗಿದ್ದಾರೆ. ಆದರೆ ಚೆಕ್‌ಪೋಸ್ಟ್ ಬಂದ್ ಮಾಡಿದ್ದರಿಂದ ಚುರಚಂದ್‌ಪುರ ಜಿಲ್ಲೆಯ ಮೂಲಕ ಮಣಿಪುರ ಪ್ರವೇಶಿಸಿದ್ದಾಳೆ.

ಈ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಆಕೆಯನ್ನು ಬಂಧಿಸಲಾಗಿದೆ. ದೇಶವನ್ನು ಅಕ್ರಮವಾಗಿ ಪ್ರವೇಶಿಸಲು ನೆರವು ನೀಡಿದ ಆರೋಪದಲ್ಲಿ ಆಕೆಯ ಕುಟುಂಬದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಕುಟುಂಬ ಸದಸ್ಯರು ಹಾಗೂ ಮಹಿಳೆಯನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News