ಭೋಪಾಲ್ ನಲ್ಲಿ ಆರೋಗ್ಯ ಇಲಾಖೆಯೇ ಕೊರೋನ ಹರಡುವ ಹಾಟ್‌ಸ್ಪಾಟ್ !
ಹೊಸದಿಲ್ಲಿ, ಎ.11: ಮಧ್ಯಪ್ರದೇಶದ ರಾಜಧಾನಿ ಭೋಪಾಲದಲ್ಲಿ ವರದಿಯಾಗಿರುವ 121 ಕರೋನ ವೈರಸ್ ಪ್ರಕರಣಗಳಲ್ಲಿ ಅರ್ಧಕ್ಕೂ ಹೆಚ್ಚಿನ ಪ್ರಕರಣಗಳು ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಅವರ ಕುಟುಂಬಗಳೊಂದಿಗೆ ತಳುಕು ಹಾಕಿಕೊಂಡಿವೆ. ರಾಜ್ಯದಲ್ಲಿ ಕೊರೋನ ವೈರಸ್ ವಿರುದ್ಧ ಹೋರಾಟದ ಹೊಣೆಗಾರಿಕೆಯನ್ನು ಹೊಂದಿರುವ ಆರೋಗ್ಯ ಇಲಾಖೆಯೇ ಈಗ ವೈರಸ್‌ನ ಹಾಟ್‌ಸ್ಪಾಟ್ ಆಗಿ ಪರಿಣಮಿಸಿದೆ.
ಇದು ಅಧಿಕಾರಶಾಹಿಯ ಯೋಜನಾ ವೈಫಲ್ಯವಾಗಿದೆ ಮತ್ತು ಅವರ ಅತಿಯಾದ ಆತ್ಮವಿಶ್ವಾಸದ ಫಲಶೃತಿಯಾಗಿದೆ ಎಂದು ಹೇಳಿದ ಇಲಾಖೆಯ ಹಿರಿಯ ಅಧಿಕಾರಿಯೋರ್ವರು,ಇಲಾಖೆಯ 35 ಅಧಿಕಾರಿಗಳಲ್ಲಿ ಕೋವಿಡ್-19 ದೃಢಪಟ್ಟಿದ್ದು, ನಮ್ಮನ್ನು ಕ್ವಾರಂಟೈನ್‌ನಲ್ಲಿರಿಸಲಾಗಿದೆ. ಈಗ ನಮ್ಮ ಕುಟುಂಬ ಸದಸ್ಯರ ಪರೀಕ್ಷಾ ವರದಿಗಳೂ ಪಾಸಿಟಿವ್ ಆಗಿ ಬರತೊಡಗಿವೆ. ಭೋಪಾಲದಲ್ಲಿಯ ಅರ್ಧದಷ್ಟು ಪ್ರಕರಣಗಳು ಈಗ ಆರೋಗ್ಯ ಇಲಾಖೆಯೊಂದಿಗೆ ಗುರುತಿಸಿಕೊಂಡಿವೆ ಎಂದು ಸುದ್ದಿಸಂಸ್ಥೆಗೆ ತಿಳಿಸಿದರು.
ಆರೋಗ್ಯ ಇಲಾಖೆಯ ಉದ್ಯೋಗಿ ಪ್ರಮೋದ್ ಗೋಯಲ್ ಎಂಬಾತ ಮಾ.21ರಂದು ರಾತ್ರಿ ಬಸ್‌ನಲ್ಲಿ ಇಂದೋರ್ ನಿಂದ ಭೋಪಾಲಕ್ಕೆ ಆಗಮಿಸಿದ್ದ. ಮುಂದಿನ ಎರಡು ದಿನಗಳ ಕಾಲ ಆತ ಕಚೇರಿಗೆ ಹಾಜರಾಗಿದ್ದು,ಈ ವೇಳೆ ಆತನಲ್ಲಿ ಕೆಮ್ಮು ಮತ್ತು ಜ್ವರ ಕಾಣಿಸಿಕೊಂಡಿತ್ತು. ಕೊರೋನ ವೈರಸ್‌ನ ಲಕ್ಷಣಗಳನ್ನು ತೋರಿಸುತ್ತಿದ್ದರೂ ಅಧಿಕಾರಿಗಳು ಆತನನ್ನು ಪರೀಕ್ಷೆಗೆ ಕಳುಹಿಸದೆ ಮನೆಗೆ ತೆರಳಿ ವಿಶ್ರಾಂತಿಯನ್ನು ಪಡೆಯುವಂತೆ ಸೂಚಿಸಿದ್ದರು. ಅಧಿಕಾರಿಗಳು ಈ ನಿರ್ಲಕ್ಷ್ಯ ತೋರಿಸದಿದ್ದರೆ ಸೋಂಕಿನ ಹರಡುವಿಕೆಯ ಬಗ್ಗೆ ಮಾ.25ರ ಮೊದಲೇ ನಮಗೆ ಗೊತ್ತಾಗುತ್ತಿತ್ತು ಎಂದು ಈ ಅಧಿಕಾರಿ ದೂರಿದರು.
ಮಾ.22ರಂದು ಇಲಾಖೆಯು ಸಾಮಾಜಿಕ ಅಂತರದ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ರಾಷ್ಟ್ರೀಯ ಆರೋಗ್ಯ ಅಭಿಯಾನದ 80-100 ಕಾರ್ಯಕರ್ತರ ನಿಯಮಿತ ಸಭೆಯನ್ನು ನಡೆಸಿತ್ತು.
ರಾಜ್ಯದ ಆಯುಷ್ಮಾನ್ ಭಾರತ ಕಾರ್ಯಕ್ರಮದ ಸಿಇಒ ಹಾಗೂ ಕೊರೋನ ವೈರಸ್ ವಿರುದ್ಧ ಭೋಪಾಲದ ಹೋರಾಟದಲ್ಲಿ ಮುಖ್ಯ ಪಾತ್ರವನ್ನು ಹೊಂದಿರುವ ಐಎಎಸ್ ಅಧಿಕಾರಿ ಜೆ.ವಿಜಯ ಕುಮಾರ ಅವರಲ್ಲಿ ಮೊದಲು ಸೋಂಕು ಕಾಣಿಸಿಕೊಂಡಿದ್ದು,ಅವರ ಸಂಪರ್ಕದಲ್ಲಿದ್ದ ಸುಮಾರು ಒಂದು ಡಝನ್ ಅಧಿಕಾರಿಗಳು ಈಗ ಸ್ವಯಂ ನಿರ್ಬಂಧದಲ್ಲಿದ್ದಾರೆ.
ಮಾ.22ರಂದು ಆರೋಗ್ಯ ಇಲಾಖೆಯ ಕಚೇರಿಯಲ್ಲಿ ಎನ್‌ಎಚ್‌ಎಂ ನಿರ್ದೇಶಕಿಯಾಗಿ ಸ್ವಾತಿ ಮೀನಾ ಅವರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದ ಇಲಾಖೆಯ ಮುಖ್ಯ ಕಾರ್ಯದರ್ಶಿ ಪಲ್ಲವಿ ಜೈನ ಗೋವಿಲ್ ಅವರೂ ಸೋಂಕು ತಗುಲಿದ್ದವರಲ್ಲಿ ಸೇರಿದ್ದಾರೆ. ಮನೆಯಿಂದಲೇ ಕೆಲಸ ಮಾಡತೊಡಗಿದ್ದ ಅವರ ಆರೋಗ್ಯವನ್ನು ವಿಚಾರಿಸಲು ಕೆಲವು ಅಧಿಕಾರಿಗಳು ತೆರಳಿದ್ದರು. ಮೀನಾ ಅಸ್ಪತ್ರೆಗೆ ದಾಖಲಾಗಿರಲಿಲ್ಲ ಅಥವಾ ತಪಾಸಣೆಗೆ ಆತ್ರೆಗೆ ತೆರಳಿರಲಿಲ್ಲ. ಇಲಾಖೆಯ ಆಧಿಕಾರಿಗಳು ತನ್ನ ಕಾಳಜಿ ವಹಿಸಿದ್ದಾಗ ಮೀನಾ ಮಾಸ್ಕ್ ಕೂಡ ಧರಿಸಿರಲಿಲ್ಲ ಎಂದು ಸಾರುವ ಚಿತ್ರಗಳು ಈಗ ಹೊರಬಿದ್ದಿವೆ.