ಹೀಗೊಂದು ಕೊರೋನ ಹುಟ್ಟು ಹಬ್ಬದ ಆಚರಣೆ

Update: 2020-04-13 04:51 GMT

ಇನ್ನೂ ದೇಶದಲ್ಲಿ ಲಾಕ್‌ಡೌನ್ ಘೋಷಣೆಯಾಗದೇ ಇರುವ ಹೊತ್ತಿನಲ್ಲಿ ಹಮ್ಮಿಕೊಂಡ ತಬ್ಲೀಗಿ ಸಮಾವೇಶವನ್ನು ಮುಂದಿಟ್ಟು ಕೋಮು ದ್ವೇಷವನ್ನು ಹಂಚುತ್ತಿರುವ ಕೆಲವು ಬಿಜೆಪಿ ನಾಯಕರು, ಇದೀಗ ರಾಜ್ಯದೊಳಗೇ ಬಿಜೆಪಿ ಶಾಸಕರೊಬ್ಬರು ನೂರಾರು ಮಂದಿಯನ್ನು ಸೇರಿಸಿ ಹುಟ್ಟು ಹಬ್ಬ ಆಚರಿಸಿದ ವರದಿಯ ಬಗ್ಗೆ ಕಿವಿಯಿದ್ದು ಕಿವುಡರಾಗಿದ್ದಾರೆ. ಬಾಯಿಯಿದ್ದು ಮೂಗರಾಗಿದ್ದಾರೆ. ಹಾಗಾದರೆ, ಈ ದೇಶದಲ್ಲಿ ಕೊರೋನ ಲಾಕ್‌ಡೌನ್ ವಿಷಯದಲ್ಲಿ ಕೆಲವು ನಿರ್ದಿಷ್ಟ ವ್ಯಕ್ತಿಗಳಿಗೆ ವಿನಾಯಿತಿ ಇದೆಯೇ ಎನ್ನುವ ಪ್ರಶ್ನೆಯನ್ನು ಜನರು ಕೇಳುವಂತಾಗಿದೆ. ಅಥವಾ ಕೆಲವು ನಿರ್ದಿಷ್ಟ ವ್ಯಕ್ತಿಗಳ ಕುರಿತಂತೆ ‘ಕೊರೋನ ವೈರಸ್’ ಮೃದು ನಿಲುವು ಹೊಂದಿರಬೇಕು. ಬಹುಶಃ ಅವರ ಪಕ್ಷ, ಜಾತಿ, ಧರ್ಮಗಳ ಆಧಾರದಲ್ಲಿ ಅವರಿಗೆ ಕೊರೋನ ಕೆಲವು ವಿನಾಯಿತಿಗಳನ್ನು ನೀಡಿರುವ ಸಾಧ್ಯತೆಗಳಿವೆ. ಹಾಗಾದರೆ, ಯಾರೆಲ್ಲ ಲಾಕ್‌ಡೌನ್ ಮೀರಿ ಬೀದಿಗಿಳಿಯಬಹುದು, ತಮ್ಮ ತಮ್ಮ ಧರ್ಮಗಳ ಆಚರಣೆಗಳನ್ನು ಸಾರ್ವಜನಿಕವಾಗಿ ಮಾಡಬಹುದು, ಹುಟ್ಟುಹಬ್ಬಗಳನ್ನು ಸಾರ್ವಜನಿಕವಾಗಿ ಸಂಭ್ರಮಿಸಬಹುದು ಎನ್ನುವ ಪಟ್ಟಿಯೊಂದನ್ನು ಸರಕಾರ ಅತ್ಯವಶ್ಯವಾಗಿ ಬಿಡುಗಡೆ ಮಾಡುವ ಅಗತ್ಯವಿದೆ. ಇಲ್ಲವಾದರೆ, ಜನಪ್ರತಿನಿಧಿಗಳು ಹುಟ್ಟು ಹಬ್ಬ ಆಚರಿಸಿದರೆಂದು, ಸಾರ್ವಜನಿಕರು ಕೂಡ ಅದನ್ನೇ ಅನುಸರಿಸಿ ಪೊಲೀಸರಿಂದ ಲಾಠಿ ಏಟು ತಿನ್ನುವ ಅಪಾಯಗಳಿವೆ.

ಕಳೆದ ಹದಿನೈದು ದಿನಗಳಿಂದ ರಾಜ್ಯ ಮಾತ್ರವಲ್ಲ ದೇಶಾದ್ಯಂತ ಬಿಗಿ ಲಾಕ್‌ಡೌನ್ ಘೋಷಿಸಲಾಗಿದೆ. ಅತ್ಯಗತ್ಯ ವಸ್ತುಗಳಿಗಾಗಿ ಬೀದಿಗಿಳಿದ ಅಮಾಯಕರ ಮೇಲೆ ಪೊಲೀಸರು ನಿರ್ದಾಕ್ಷಿಣ್ಯವಾಗಿ ಲಾಠಿಗಳನ್ನು ಬೀಸುತ್ತಿದ್ದಾರೆ. ಕೆಲವೆಡೆ ಪೊಲೀಸ್ ದೌರ್ಜನ್ಯಗಳು ಮಾರಣಾಂತಿಕವಾದ ಉದಾಹರಣೆಗಳೂ ನಮ್ಮ ಮುಂದಿವೆ. ಬದುಕುವ ಹಕ್ಕಿಗಾಗಿ ಬೀದಿಗಿಳಿದ ವಲಸೆ ಕಾರ್ಮಿಕರ ಮೇಲೆ ಕೇಸುಗಳನ್ನು ದಾಖಲಿಸಲಾಗುತ್ತಿದೆ. ಹಲವೆಡೆ ವಲಸೆ ಕಾರ್ಮಿಕರು ಮತ್ತು ಪೊಲೀಸರ ನಡುವೆ ಭಾರೀ ಸಂಘರ್ಷಗಳು ನಡೆಯುತ್ತಿವೆ. ಭಾರೀ ಸಂಖ್ಯೆಯಲ್ಲಿ ಕಾರ್ಮಿಕರನ್ನು ಪೊಲೀಸರು ವಿವಿಧೆಡೆಗಳಲ್ಲಿ ಬಂಧಿಸಿದ್ದಾರೆ. ಹೊರಗಡೆ ಕಾಲಿಡಲು ಸಾಧ್ಯವಾಗದೆ, ಅನ್ನಾಹಾರವಿಲ್ಲದೆ ಜನರು ಸಾಯುವ ಸ್ಥಿತಿ ನಿರ್ಮಾಣವಾಗಿದೆ. ತೀವ್ರ ಅನಾರೋಗ್ಯಕ್ಕೊಳಗಾಗಿರುವ ಜನರನ್ನು ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಪೊಲೀಸರು ಅವರ ಮೇಲೆ ಬರ್ಬರ ದಾಳಿ ನಡೆಸಿದ ಘಟನೆಗಳು ನಡೆದಿವೆ. ಆಸ್ಪತ್ರೆಗೆ ಹೋಗಲು ಸಾಧ್ಯವಾಗದೆ ರೋಗಿ ಮೃತಪಟ್ಟಿರುವ ಘಟನೆಗಳೂ ವರದಿಯಾಗಿವೆ. ಕೊರೋನ ವಿರುದ್ಧ ದೇಶದ ಪ್ರಧಾನಿ ನರೇಂದ್ರ ಮೋದಿ ಮೇಲಿಂದ ಮೇಲೆ ಟಿವಿಗಳಲ್ಲಿ ಬಂದು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಈ ನಿಟ್ಟಿನಲ್ಲಿ ತೆಗೆದುಕೊಳ್ಳುತ್ತಿರುವ ಕಾರ್ಯಕ್ರಮಗಳು ಶ್ಲಾಘನೀಯ. ಇವೆಲ್ಲವುಗಳ ನಡುವೆ ಕೆಲವು ಬೇಜವಾಬ್ದಾರಿ ನಾಯಕರುಗಳು ಸರಕಾರದ ಆದೇಶಗಳನ್ನು ಮೀರುತ್ತಿರುವುದು, ಕೊರೋನ ಹಬ್ಬಲು ಪರೋಕ್ಷ ಕಾರಣವಾಗುತ್ತಿರುವುದು ಆಘಾತಕಾರಿ ವರದಿಗಳು ಹೊರಬೀಳುತ್ತಿವೆ. ಇದೀಗ ನೋಡಿದರೆ, ಬಿಜೆಪಿಯ ಶಾಸಕರೇ ಹುಟ್ಟು ಹಬ್ಬ ಆಚರಿಸುವ ಮೂಲಕ ‘ಲಾಕ್ ಡೌನ್’ ವಿರುದ್ಧ ರಾಜ್ಯದ ಜನರಿಗೆ ಸಂದೇಶವನ್ನು ನೀಡಿದ್ದಾರೆ. ವಿಪರ್ಯಾಸವೆಂದರೆ ಈ ಶಾಸಕರ ವಿರುದ್ಧ ಮುಖ್ಯಮಂತ್ರಿಯಾಗಲಿ, ಪೊಲೀಸ್ ಇಲಾಖೆಯಾಗಲಿ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಘಟನೆಗೆ ಸಂಬಂಧಿಸಿ ಕೆಲವರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆಯಾದರೂ, ಅದರಲ್ಲಿ ಶಾಸಕರ ಹೆಸರೇ ಇಲ್ಲ.

ಸರಕಾರದ ಈ ನೀತಿ, ಜನರಿಗೆ ಲಾಕ್‌ಡೌನ್ ಕುರಿತಂತೆ ವ್ಯತಿರಿಕ್ತವಾದ ಸಂದೇಶವೊಂದನ್ನು ನೀಡುತ್ತಿದೆ. ಹುಟ್ಟುದಿನವನ್ನು ಆಚರಿಸಿದ ಶಾಸಕರ ಮನಸ್ಥಿತಿಯೇ ಪ್ರಶ್ನಾರ್ಹವಾಗಿದೆ. ಇಡೀ ವಿಶ್ವವೇ ಸೂತಕದ ಮನೆಯಾಗಿ ಪರಿವರ್ತನೆಗೊಂಡಿರುವ ಸಂದರ್ಭ ಇದು. ದೇಶ ಒಂದೆಡೆ ಆರ್ಥಿಕ ಕುಸಿತ, ಮಗದೊಂದೆಡೆ ಕೊರೋನ ದುರಂತಗಳಿಂದ ತತ್ತರಿಸಿ ಕೂತಿದೆ. ರಾಜ್ಯದ ಸ್ಥಿತಿಯೂ ಚಿಂತಾಜನಕವಾಗಿದೆ. ಸ್ವತಃ ಮುಖ್ಯಮಂತ್ರಿ ಅವರೇ ‘‘ರಾಜ್ಯದ ಸ್ಥಿತಿ ಗಂಭೀರವಾಗಿದೆ’’ ಎಂದು ಹೇಳಿಕೆ ನೀಡಿದ್ದಾರೆ. ಜನರು ಸಂಕಟಗಳ ನಡುವೆ ಬದುಕುವುದಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಈ ಹೊತ್ತಿನಲ್ಲಿ, ಒಬ್ಬ ಜನಪ್ರತಿನಿಧಿ ಎನಿಸಿಕೊಂಡವರು ತನ್ನ ಹುಟ್ಟಿದ ದಿನವನ್ನು ಹಬ್ಬವಾಗಿ ಆಚರಿಸುತ್ತಾರೆ ಎನ್ನುವುದು ಅವರೊಳಗಿನ ಸಂವೇದನಾ ಹೀನತೆಯನ್ನು ತೋರಿಸುತ್ತದೆ. ಸಾವಿನ ಮನೆಯಲ್ಲಿ ಹುಟ್ಟು ಹಬ್ಬ ಆಚರಿಸುವ ಶಾಸಕರೊಬ್ಬರು, ತನ್ನ ಕ್ಷೇತ್ರದ ಜನರ ನೋವುಗಳಿಗೆ ಹೇಗೆ ಸ್ಪಂದಿಸಲು ಸಾಧ್ಯ? ಇದೊಂದು ರೀತಿಯಲ್ಲಿ ಜನರ ನೋವು, ಸಂಕಟಗಳನ್ನು ಅಣಕಿಸಿದಂತೆ, ವ್ಯಂಗ್ಯವಾಡಿದಂತೆ. ಇದಕ್ಕಾಗಿ ಕನಿಷ್ಠ ಬಿಜೆಪಿಯ ವರಿಷ್ಠರು ಪಕ್ಷದ ನೆಲೆಯಲ್ಲಿ ಈ ಶಾಸಕರನ್ನು ಪ್ರಶ್ನಿಸಬೇಕು ಮತ್ತು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಮೋದಿಯ ಆದೇಶವನ್ನು ಮೀರಿದ ಕಾರಣವನ್ನು ಮುಂದೊಡ್ಡಿಯಾದರೂ ಇವರನ್ನು ಬಿಜೆಪಿ ವರಿಷ್ಠರು ವರನ್ನು ಶಿಕ್ಷಿಸಬೇಕು.

ಇದೇ ಸಂದರ್ಭದಲ್ಲಿ ಈ ಶಾಸಕ ಕೊರೋನ ವೈರಸ್‌ನ್ನು ಎಷ್ಟು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎನ್ನುವುದನ್ನೂ ಇದು ಹೇಳುತ್ತದೆ. ಸುಮಾರು 500 ಮಂದಿಯನ್ನು ಒಟ್ಟು ಸೇರಿಸಿ ಶಾಸಕರು ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ ಎಂದು ವರದಿಗಳು ಹೇಳುತ್ತವೆ. ಈ ಸಂದರ್ಭದಲ್ಲಿ ಯಾವುದೇ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡಿಲ್ಲ. ಇದಕ್ಕೆ ಸಂಬಂಧಿಸಿ ಹಲವರ ಮೇಲೆ ದೂರು ದಾಖಲಿಸಲಾಗಿದೆ. ಇದಷ್ಟೇ ಸಾಕಾಗುವುದಿಲ್ಲ. ಸಮಾರಂಭದಲ್ಲಿ ಭಾಗವಹಿಸಿದ ಅಷ್ಟೂ ಜನರನ್ನು ಒಂದೆಡೆ ಇಟ್ಟು ‘ಕ್ವಾರಂಟೈನ್’ ವಿಧಿಸುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಸರಕಾರ ಯಾವ ಕ್ರಮ ಕೈಗೊಂಡಿದೆ? ಜೊತೆಗೆ 500 ಮಂದಿ ಯಾರ್ಯಾರನ್ನೆಲ್ಲ ಸಂಪರ್ಕಿಸಿದ್ದಾರೆ ಎನ್ನುವುದೂ ತನಿಖೆಯಾಗಬೇಕು. ಒಂದು ರೀತಿಯಲ್ಲಿ ಶಾಸಕ ಆಚರಿಸಿದ್ದು ಕೊರೋನದ ಹುಟ್ಟುಹಬ್ಬವನ್ನು. ಈ ಆಚರಣೆಯ ಮೂಲಕ ಕೊರೋನ ವೈರಸ್‌ಗಳಿಗೆ ಆಹಾರವನ್ನು ಒದಗಿಸಿದ್ದಾರೆ.

ಕೊರೋನ ವೈರಸ್ ವಿರುದ್ಧದ ಕಾರ್ಯಾಚರಣೆಯಲ್ಲಿ ಯಾರು ನೇತೃತ್ವವನ್ನು ವಹಿಸಬೇಕೋ ಅವರೇ ಪದೇ ಪದೇ ಎಡವುತ್ತಿರುವುದು ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ಫೆಬ್ರವರಿ ಎರಡನೇ ವಾರದಲ್ಲೇ ಕೊರೋನ ಅಪಾಯದ ಬಗ್ಗೆ ಕಾಂಗ್ರೆಸ್ ಮುಖಂಡ ರಾಹುಲ್‌ಗಾಂಧಿ ಎಚ್ಚರಿಕೆ ನೀಡಿದ್ದರೂ ಸರಕಾರ ನಿರ್ಲಕ್ಷಿಸಿತ್ತು. ಕೊರೋನ ವಿರುದ್ಧ ದಿಡ್ಡಿ ಬಾಗಿಲು ಹಾಕುವಾಗ ತಡವಾಗಿತ್ತು. ಆ ಬಳಿಕವೂ ಸರಕಾರ ಪದೇ ಪದೇ ಅಪಾಯವನ್ನು ನಿರ್ಲಕ್ಷಿಸುತ್ತಲೇ ಬಂತು. ಸಂಸತ್‌ನಲ್ಲಿ ಅಧಿವೇಶನ ಮುಂದುವರಿಯಿತು. ಮಧ್ಯಪ್ರದೇಶದಲ್ಲಿ ಆಪರೇಷನ್ ಕಮಲ ನಡೆಯಿತು. ಅದರ ಪರಿಣಾಮವನ್ನು ಇದೀಗ ಮಧ್ಯಪ್ರದೇಶ ಅನುಭವಿಸುತ್ತಿದೆ. ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್ ನೇತೃತ್ವದಲ್ಲೇ ರಾಮನವಮಿ ಕಾರ್ಯಕ್ರಮ ನಡೆಯಿತು.

ತಬ್ಲೀಗಿ ಪ್ರಕರಣದಿಂದ ಬೆಳಕಿಗೆ ಬಂದ ಅನಾಹುತಗಳನ್ನು ಕಂಡ ಬಳಿಕವೂ ರಾಮನವಮಿ ಸಂದರ್ಭದಲ್ಲಿ ದೇಶದ ಹೆಚ್ಚಿನ ದೇವಸ್ಥಾನಗಳು ಲಾಕ್‌ಡೌನ್‌ನ್ನು ಉಲ್ಲಂಘಿಸಿದವು. ಇದೀಗ ಬಿಜೆಪಿ ಶಾಸಕರೊಬ್ಬರು ಸಾರ್ವಜನಿಕವಾಗಿ ತನ್ನ ಹುಟ್ಟು ಹಬ್ಬವನ್ನು ಆಚರಿಸುವ ಮೂಲಕ ಬೇಜವಾಬ್ದಾರಿಯ ಪರಮಾವಧಿಯನ್ನು ಮೆರೆದಿದ್ದಾರೆ. ಈ ಶಾಸಕರ ವಿರುದ್ಧ ಇನ್ನೂ ಕ್ರಮ ತೆಗೆದುಕೊಳ್ಳದೇ ಇರುವುದು ಸರಕಾರದ ಲಾಕ್‌ಡೌನ್‌ನನ್ನು ಸರಕಾರವೇ ತಮಾಷೆಗೀಡು ಮಾಡಿದಂತಾಗಿದೆ. ಲಾಕ್‌ಡೌನ್ ವ್ಯಾಪ್ತಿಗೆ ಜನಪ್ರತಿನಿಧಿಗಳು ಒಳಪಡುವುದಿಲ್ಲ ಎನ್ನುವ ತಪ್ಪು ಸಂದೇಶ ಜನಸಾಮಾನ್ಯರಿಗೆ ತಲುಪುವ ಮುನ್ನ, ಹುಟ್ಟು ಹಬ್ಬ ಆಚರಿಸಿದ ಶಾಸಕರ ಮೇಲೆ ಕ್ರಮ ತೆಗೆದುಕೊಂಡು, ಅವನನ್ನು ಕ್ವಾರಂಟೈನ್‌ನಲ್ಲಿ ಇಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News