ಸಂಪೂರ್ಣ ಮದ್ಯ ನಿಷೇಧಕ್ಕೆ ಸಕಾಲ

Update: 2020-04-14 05:55 GMT

ಕೊರೋನ ವೈರಸ್ ವಿಶ್ವವನ್ನು ಅಲ್ಲೋಲ ಕಲ್ಲೋಲಗೊಳಿಸುತ್ತಿದೆ. ಆದರೆ, ಅದೇ ಕೊರೋನಾ ಮನುಷ್ಯನ ದುರಹಂಕಾರ, ಹಮ್ಮು ಬಿಮ್ಮುಗಳಿಗೂ ಮದ್ದರೆಯುತ್ತಿದೆ ಎನ್ನುವುದನ್ನೂ ನಾವು ಮರೆಯಬಾರದು. ಕೊರೋನ ವೈರಸ್‌ಗಳಿಂದ ಕಂಗಾಲಾಗಿರುವ ದೇಶಗಳಲ್ಲಿ ಶ್ರೀಮಂತರಾಷ್ಟ್ರಗಳೇ ಮುಂಚೂಣಿಯಲ್ಲಿವೆ. ಕ್ಯಾನ್ಸರ್‌ನಂತಹ ಔಷಧಿಗಳ ಮೇಲೆ ನಿಯಂತ್ರಣ ಸಾಧಿಸಿ ಮೆರೆಯುತ್ತಿದ್ದ ಶ್ರೀಮಂತ ದೇಶಗಳು, ಭಾರತದಂತಹ ದೇಶದ ಜೊತೆಗೆ ಮಲೇರಿಯಾದಂತಹ ಔಷಧಿಗಾಗಿ ಅಂಗಲಾಚುವ ಸ್ಥಿತಿಯನ್ನೂ ಕೊರೋನ ವೈರಸ್ ತಂದಿಟ್ಟಿದೆ. ತೈಲ ಸಂಪತ್ತನ್ನು ಅನುಭೋಗಿಸುತ್ತಾ, ಶೋಷಿತ ಸಮುದಾಯಗಳನ್ನು ಮರೆತ ದೇಶಗಳು ಇಂದು ತಮ್ಮ ಭವಿಷ್ಯದ ಕುರಿತಂತೆ ಆತಂಕದಿಂದ ದಿನ ದೂಡುತ್ತಿವೆ. ಒಂದೆಡೆ ದೈಹಿಕವಾಗಿ ಕೊರೋನ ವೈರಸ್ ರೋಗವಾಗಿ ಬಾಧಿಸುತ್ತಲೇ, ಮಗದೊಂದೆಡೆ ಮನುಷ್ಯನ ಮನಸ್ಸಿನಲ್ಲಿ ಕೂತಿದ್ದ ದುರಂಹಕಾರಗಳ ವೈರಸ್‌ಗಳನ್ನು ಗುಡಿಸಿಹಾಕಲು ಪ್ರಯತ್ನಿಸುತ್ತಿದೆ. ರೋಗವನ್ನು ಎದುರಿಸುತ್ತಲೇ, ಈ ರೋಗ ನಮಗೆ ಕಲಿಸುತ್ತಿರುವ ಪಾಠಗಳನ್ನು ಆಲಿಸಿ ಬದುಕಿನಲ್ಲಿ ಅಳವಡಿಸುವ ಕಡೆಗೂ ಜಗತ್ತು ಮನ ಮಾಡಬೇಕಾಗಿದೆ.

ಕೊರೋನ ವೈರಸ್‌ನಿಂದ ಭಾರತವೂ ಹಲವು ಪಾಠಗಳನ್ನು ಕಲಿಯಬೇಕಾದ ಸಮಯ. ಉಳಿದ ಶ್ರೀಮಂತ ರಾಷ್ಟ್ರಗಳಿಗೆ ಹೋಲಿಸಿದರೆ ಕೊರೋನ ಭಾರತದಲ್ಲಿ ಮಾಡಿದ ಅನಾಹುತ ತೀರಾ ಸಣ್ಣದು. ಆದರೆ, ನಾವು ಕೊರೋನದ ವೈರಸ್‌ಗಳನ್ನು ಇನ್ನಷ್ಟು ಭೀಕರಗೊಳಿಸಿ ದೇಶದ ಭವಿಷ್ಯವನ್ನು ವಿನಾಶದತ್ತೆ ಕೊಂಡೊಯ್ಯಲು ಅತ್ಯಾಸಕ್ತರಾಗುತ್ತಿದ್ದೇವೆ. ದ್ವೇಷ ರಾಜಕಾರಣಕ್ಕಾಗಿ ಕೊರೋನದಂತಹ ವೈರಸ್‌ನ್ನೂ ಬಳಸಲು ಹಿಂದೇಟು ಹಾಕದ ಶಕ್ತಿಗಳ ಕೈಯಲ್ಲಿ ಭಾರತ ನಲುಗುತ್ತಿದೆ. ಉಳಿದಂತೆ, ಕೊರೋನ ದೇಶದ ಹಲವೆಡೆಗಳಲ್ಲಿ ಮನುಷ್ಯನ ಮಾನವೀಯ ಮುಖಗಳು ಬೆಳಕಿಗೆ ಬರುವುದಕ್ಕೂ ಕಾರಣವಾಗಿದೆ. ಹಿಂದೂ ಮುಸ್ಲಿಮರು ಪರಸ್ಪರ ನೆರವಾಗಿ ಮನುಷ್ಯತ್ವವನ್ನು ಎತ್ತಿ ಹಿಡಿದ ಹಲವು ವರದಿಗಳು ಮಾಧ್ಯಮಗಳ ಮೂಲಕ ಬೆಳಕಿಗೆ ಬರುತ್ತಿವೆ. ಭಾರತದ ಪಾಲಿಗೆ ಇಂತಹ ಘಟನೆಗಳು ಅಳಿದುಳಿದ ಭರವಸೆಗಳಾಗಿವೆ. ಭಾರತದ ಆರ್ಥಿಕತೆಯನ್ನು ಕೊರೋನ ಸಂಪೂರ್ಣ ನಾಶ ಮಾಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇದೇ ಸಂದರ್ಭದಲ್ಲಿ, ಹೊಸ ಭವಿಷ್ಯವೊಂದನ್ನು ಕಟ್ಟುವುದಕ್ಕೆ ಈ ‘ಲಾಕ್‌ಡೌನ್’ ಪರಿಣಾಮಗಳನ್ನು ಹೇಗೆ ಸದ್ಬಳಕೆ ಮಾಡಬಹುದು ಎನ್ನುವುದರ ಕಡೆಗೂ ಸರಕಾರ ಗಮನ ಹರಿಸಬೇಕಾಗಿದೆ. ಲಾಕ್‌ಡೌನ್ ಒಂದೆಡೆ ದೇಶದ ದಿನಗೂಲಿ ನೌಕರರ ಬದುಕನ್ನು ಸರ್ವನಾಶ ಮಾಡಿದೆ.

ಇದೇ ಸಂದರ್ಭದಲ್ಲಿ, ಸಂಕಷ್ಟದ ಬದುಕನ್ನು ಎದುರಿಸಲು ಮಧ್ಯಮ ವರ್ಗ ಮತ್ತು ಮೇಲ್‌ಮಧ್ಯಮ ವರ್ಗಗಳಿಗೆ ಈ ದಿನಗಳು ತರಬೇತಿಯನ್ನೂ ನೀಡಿದೆ. ಹಲವರು ತಮ್ಮೆಳಗಿನ ಕೆಲವು ದೌರ್ಬಲ್ಯಗಳಿಂದ ದೂರ ವಿರಲೇಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ‘ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ’ ಎನ್ನುವುದನ್ನು ಹಲವು ದಶಕಗಳಿಂದ ಸರಕಾರ ಜಾಹೀರಾತುಗಳ ಮೂಲಕ ಎಚ್ಚರಿಸುತ್ತಲೇ ಬಂದಿದೆಯಾದರೂ, ಅದಕ್ಕೆ ಬಲಿ ಬಿದ್ದವರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಆದರೆ, ಲಾಕ್‌ಡೌನ್ ಅನಿವಾರ್ಯವಾಗಿ ಇಂತಹ ಚಟಗಳಿಂದ ಜನರನ್ನು ದೂರ ಉಳಿಯುವಂತೆ ಮಾಡಿದೆ. ಅದರಲ್ಲೂ ಮುಖ್ಯವಾಗಿ, ಲಾಕ್‌ಡೌನ್ ಅವಧಿಯಲ್ಲಿ ‘ಮದ್ಯಕ್ಕೆ ಸಂಪೂರ್ಣ ನಿಷೇಧ’ ಹೇರಿರುವುದರಿಂದ, ದೇಶದಲ್ಲಿ ಸಹಸ್ರಾರು ಸಂಖ್ಯೆಯ ಜನರು ಅನಿವಾರ್ಯವಾಗಿ ಮದ್ಯದ ಚಟದಿಂದ ಕಳಚಿಕೊಂಡಿದ್ದಾರೆ. ಈ ಚಟದಿಂದ ಮುಂದೆಯೂ ಅವರು ದೂರ ಉಳಿದದ್ದೇ ಆದರೆ ಆರೋಗ್ಯದ ಮೇಲೆ, ಅವರ ಆರ್ಥಿಕ ಬದುಕಿನ ಮೇಲೆ ಭಾರೀ ಬದಲಾವಣೆಗಳಾಗಬಹುದು. ಆದುದರಿಂದ, ಲಾಕ್‌ಡೌನ್‌ನ ‘ಮದ್ಯ ನಿಷೇಧ’ವನ್ನು ಬಳಸಿಕೊಂಡು, ದೇಶಾದ್ಯಂತ ಸಂಪೂರ್ಣ ಮದ್ಯ ನಿಷೇಧವನ್ನು ಮಾಡಲು ಸರಕಾರಕ್ಕೆ ಇದು ಸಕಾಲವಾಗಿದೆ. ಈ ಸಂದರ್ಭವನ್ನು ಸರಕಾರ ಸಂಪೂರ್ಣ ಸದುಪಯೋಗ ಪಡಿಸಿಕೊಳ್ಳಬೇಕು.

 ವಿಪರ್ಯಾಸವೆಂದರೆ, ಲಾಕ್‌ಡೌನ್ ಜಾರಿಯಲ್ಲಿರುವ ಈ ಹೊತ್ತಿನಲ್ಲೇ, ಮದ್ಯದಂಗಡಿಗಳನ್ನು, ಬಾರ್‌ಗಳನ್ನು ತೆರೆಯುವ ಕುರಿತಂತೆ ಕೆಲವು ರಾಜ್ಯ ಸರಕಾರಗಳು ಆಲೋಚಿಸುತ್ತಿವೆ. ಇದು ಅತ್ಯಂತ ಭಯಾನಕ ಆಲೋಚನೆಯಾಗಿದೆ. ಜನಸಾಮಾನ್ಯರ ಸದ್ಯದ ಅಗತ್ಯ ದಿನಸಿ ಅಂಗಡಿಗಳೇ ಹೊರತು ಬಾರ್‌ಗಳಲ್ಲ. ದಿನಸಿ ಅಂಗಡಿಗಳ ಜೊತೆ ಜೊತೆಗೆ ಬಾರ್‌ಗಳನ್ನು ತೆರೆದದ್ದೇ ಆದರೆ, ಈಗಾಗಲೇ ಅಗತ್ಯ ವಸ್ತುಗಳಿಲ್ಲದೆ ಹಸಿವಿನಿಂದ ನರಳುತ್ತಿರುವ ಕುಟುಂಬಗಳು ಇನ್ನಷ್ಟು ಅಸಹಾಯಕವಾಗುತ್ತವೆ. ಲಾಕ್‌ಡೌನ್ ಕಾರಣದಿಂದ ಅನಿವಾರ್ಯವಾಗಿ ಮದ್ಯ ಸೇವಿಸದೆ, ಚಟದಿಂದ ದೂರ ಉಳಿದು, ಆ ಹಣವನ್ನು ಕುಟುಂಬ ನಿರ್ವಹಣೆಗೆ ಬಳಸುತ್ತಿರುವವರನ್ನು ಸರಕಾರವೇ ತನ್ನ ತೀರ್ಮಾನದ ಮೂಲಕ ಮತ್ತೆ ಮದ್ಯದ ಚಟಕ್ಕೆ ದೂಡಿದಂತಾಗಬಹುದು. ದಿನಸಿ ತರುವ ಹಣವನ್ನು ಬಾರ್‌ಗಳಿಗೆ ಚೆಲ್ಲಿದರೆ, ಈ ಸಂಕಟದ ಸಮಯದಲ್ಲಿ ಬಡಕುಟುಂಬಗಳ ಮಹಿಳೆಯರು, ಮಕ್ಕಳು ಹೊಟ್ಟೆಗೆ ಏನು ತಿನ್ನಬೇಕು? ಇದೇ ಸಂದರ್ಭದಲ್ಲಿ ಮದ್ಯವಿಲ್ಲದೆ ಹಲವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳೂ ವರದಿಯಾಗಿವೆ. ಹಗಲು ರಾತ್ರಿ ಮದ್ಯ ಸೇವಿಸುವುದನ್ನೇ ಚಟ ಮಾಡಿಕೊಂಡವರು, ಏಕಾಏಕಿ ಮದ್ಯ ಸಿಗದೇ ಇದ್ದಾಗ ದೈಹಿಕವಾಗಿ ಮತ್ತು ಮಾನಸಿಕವಾಗಿ ತತ್ತರಗೊಳ್ಳುವುದು ಸಹಜವೇ ಆಗಿದೆ. ಹಾಗೆಂದು, ಅವರನ್ನು ದೃಷ್ಟಿಯಲ್ಲಿಟ್ಟುಕೊಂಡು ಮದ್ಯದಂಗಡಿ ತೆರೆಯುತ್ತೇನೆ ಎಂದು ಸರಕಾರ ಹೇಳಿದರೆ ಅದು ಆತ್ಮವಂಚನೆಯಾಗುತ್ತದೆ.

ಈ ದೇಶದಲ್ಲಿ ಆಹಾರ ಪದಾರ್ಥಗಳಿಲ್ಲದೆ ಲಕ್ಷಾಂತರ ಜನರು ಒದ್ದಾಡುತ್ತಿರುವ ಈ ದಿನಗಳಲ್ಲಿ ಮುಕ್ತವಾಗಿ ದಿನಸಿ ಮಾರುವ ವಾತಾವರಣವೇ ಇಲ್ಲದೇ ಇರುವಾಗ, ಜನರ ಮೇಲೆ ಕರುಣೆಯಿಂದ ಮದ್ಯವನ್ನು ಒದಗಿಸುತ್ತೇನೆ ಎನ್ನುವುದು ಆತ್ಮವಂಚನೆಯಲ್ಲದೆ ಇನ್ನೇನು? ಮದ್ಯವಿಲ್ಲದೆ ನರಳುತ್ತಿರುವ ಜನರಿಗಾಗಿ ಮದ್ಯದಂಗಡಿಗಳನ್ನು ತೆರೆಯುವುದಲ್ಲ, ಬದಲಿಗೆ ಅವರಿಗೆ ಸೂಕ್ತ ವೈದ್ಯಕೀಯ ನೆರವನ್ನು ನೀಡಬೇಕು. ಆ ಮೂಲಕ ಆ ಚಟದಿಂದ ಅವರನ್ನು ಹೊರ ತರುವ ಕೆಲಸ ನಡೆಯಬೇಕು. ಇದೇ ಸಂದರ್ಭದಲ್ಲಿ ಮದ್ಯದ ಚಟದಿಂದ ಹೊರ ಬರಬೇಕು ಎಂಬ ಬಯಕೆಯಿದ್ದೂ ಹೊರ ಬರಲಾರದವರು, ಈ ಲಾಕ್‌ಡೌನ್ ಕಾರಣದಿಂದ ಚಟದಿಂದ ದೂರ ಉಳಿದಿದ್ದಾರೆ. ದೇಶಾದ್ಯಂತ ಇವರ ಸಂಖ್ಯೆ ಬಹುದೊಡ್ಡದಿದೆ. ಒಂದು ವೇಳೆ ನಾಳೆ ಬಾರ್‌ಗಳನ್ನು, ಮದ್ಯದಂಗಡಿಗಳನ್ನು ತೆರೆದರೂ ಇವರು ಮತ್ತೆ ಅದರ ಬಲೆಗೆ ಬೀಳುತ್ತಾರೆ. ಒಂದು ವೇಳೆ ಶಾಶ್ವತವಾಗಿ ಮದ್ಯದಂಗಡಿಗಳನ್ನು ಮುಚ್ಚಿದ್ದೇ ಆದರೆ, ಇವರೂ ಶಾಶ್ವತವಾಗಿ ಮದ್ಯ ಚಟದಿಂದ ಮುಕ್ತರಾಗುತ್ತಾರೆ. ಒಂದನ್ನು ನಾವು ಗಮನಿಸಬೇಕು. ಕೊರೋನ ವೈರಸ್ ಈ ದೇಶಕ್ಕೆ ಎಷ್ಟು ನಷ್ಟವುಂಟು ಮಾಡಿದೆಯೋ ಅದರ ದುಪ್ಪಟ್ಟು ನಷ್ಟ ಮದ್ಯದಂತಹ ಅಮಲು ಪದಾರ್ಥಗಳ ಚಟದಿಂದ ಉಂಟಾಗಿದೆ.

ಮದ್ಯವಿಲ್ಲದೇ ಆತ್ಮಹತ್ಯೆ ಮಾಡಿಕೊಂಡವರ ಬಗ್ಗೆ ಮಾಧ್ಯಮಗಳು ಬರೆಯುತ್ತಿವೆ, ಇದೇ ಸಂದರ್ಭದಲ್ಲಿ ಮದ್ಯದಿಂದ ಹೊರಬರಲಾಗದೆ ಆತ್ಮಹತ್ಯೆ ಮಾಡಿಕೊಂಡ ವರದಿಗಳು ಈ ಹಿಂದೆ ಅದೆಷ್ಟು ಬೆಳಕಿಗೆ ಬಂದಿಲ್ಲ? ಬರೇ ಚಟಕ್ಕೊಳಗಾದವರು ಮಾತ್ರವಲ್ಲ, ಹೆಂಡತಿ, ಮಕ್ಕಳನ್ನೂ ಈ ಮದ್ಯಪಾನಿಗಳು ಆತ್ಮಹತ್ಯೆಗೆ ನೂಕಿದ್ದಾರೆ. ಅಮಲು ಪದಾರ್ಥ ಕೊರೋನದಂತೆಯೇ ಶ್ವಾಸಕೋಶ, ಹೃದಯಸಂಬಂಧಿ ರೋಗಗಳಿಗೂ ಜನರನ್ನು ತಳ್ಳಿದೆ. ಲಕ್ಷಾಂತರ ಜನರು ಇದರಿಂದಾಗಿ ತಮ್ಮ ಆರೋಗ್ಯ, ಪ್ರಾಣವನ್ನು ಕಳೆದುಕೊಂಡಿದ್ದಾರೆ. ಆರ್ಥಿಕ ಸ್ಥಿತಿಗತಿಯನ್ನು ಅಸ್ತವ್ಯಸ್ತ ಮಾಡಿಕೊಂಡಿದ್ದಾರೆ. ಈ ದೇಶ ಯಾವುದೇ ರೋಗಾಣುಗಳ ಕಾರಣದಿಂದ ನಷ್ಟ ಅನುಭವಿಸಿದ್ದಕ್ಕಿಂತ, ಮದ್ಯದಿಂದ ಅನುಭವಿಸಿದ ನಷ್ಟವೇ ಅಧಿಕ. ಇದೀಗ ಕೊರೋನ ನೆಪದಲ್ಲಿ ಘೋಷಿಸಿರುವ ಲಾಕ್‌ಡೌನ್‌ನ್ನು ಮುಂದಿಟ್ಟುಕೊಂಡು, ಮದ್ಯವೆನ್ನುವ ವೈರಸ್‌ಗೆ ಶಾಶ್ವತ ದಿಗ್ಬಂಧನವನ್ನು ವಿಧಿಸುವ ದಿನ ಬಂದಿದೆ. ಜನರ ಅಗತ್ಯದ ಎಲ್ಲ ಅಂಗಡಿ, ಮುಂಗಟ್ಟುಗಳು ಶೀಘ್ರದಲ್ಲೇ ತೆರೆಯಲಿ. ಆದರೆ ಮದ್ಯದಂಗಡಿಗಳು ಮಾತ್ರ ಶಾಶ್ವತವಾಗಿ ಮುಚ್ಚಲಿ. ಈ ದೇಶ ಆ ಮೂಲಕ ಹೊಸ ಆರೋಗ್ಯಪೂರ್ಣ ಯುಗದೆಡೆಗೆ ತನ್ನ ಮೊದಲ ಹೆಜ್ಜೆಯನ್ನಿಡಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News