×
Ad

ಈ ಗ್ರಾಮದಲ್ಲಿ ಲಾಕ್​ಡೌನ್ ಉಲ್ಲಂಘಿಸಿದವರನ್ನು ಕಾಡುತ್ತದೆ 'ದೆವ್ವಗಳು' !

Update: 2020-04-14 20:45 IST
Photo : Twitter

ಕೇಪುಹ್: ಇಂಡೊನೇಷ್ಯಾದ ಕೇಪುಹ್ ಎಂಬ ಗ್ರಾಮದ ರಸ್ತೆಗಳಲ್ಲಿ ದೆವ್ವಗಳೇ ಅಲೆದಾಡುತ್ತಿವೆ. ರಸ್ತೆಯಲ್ಲಿ ಯಾರಾದರೂ ಕಂಡು ಬಂದರೆ ಅವರತ್ತ ಈ ದೆವ್ವಗಳು ಛಂಗನೆ ಹಾರಿ ನಂತರ ಅಲ್ಲಿಂದ ಮರೆಯಾಗಿ ಬಿಡುತ್ತವೆ. ಅಷ್ಟಕ್ಕೂ ಈ ದೆವ್ವಗಳೇನೂ ನಿಜ ದೆವ್ವಗಳಲ್ಲ, ಬದಲಾಗಿ ದೆವ್ವಗಳ ವೇಷ ತೊಟ್ಟ ಮನುಷ್ಯರು. ಕೊರೋನ ವೈರಸ್ ಹಾವಳಿಯ ಹಿನ್ನೆಲೆಯಲ್ಲಿ ಜನರು ತಮ್ಮ ಮನೆಗಳೊಳಗಡೆಯೇ ಇರುವಂತೆ ಮಾಡಲು ಈ ಗ್ರಾಮದ ಆಡಳಿತ ಇಂತಹ ವಿಶಿಷ್ಟ ಕ್ರಮಕ್ಕೆ ಮುಂದಾಗಿದೆ.

ಜಾವಾ ದ್ವೀಪದಲ್ಲಿರುವ ಈ ಗ್ರಾಮದಲ್ಲಿ  ದೆವ್ವಗಳಂತೆ ನಟಿಸಬಲ್ಲವರನ್ನು ರಸ್ತೆಗಳಲ್ಲಿ ಗಸ್ತು ತಿರುಗಿಸಲು ನೇಮಿಸಲಾಗಿದ್ದು ಇಲ್ಲಿನ ಜನರ ಒಂದು ಪುರಾತನ ನಂಬಿಕೆಯಿಂದಲಾದರೂ ಜನರು ಮನೆಗಳೊಳಗಡೆಯೇ ಇದ್ದು ಕೊರೋನ ಸೋಂಕಿಗೆ ಒಳಗಾಗದಂತೆ ಮಾಡಬಹುದು ಎಂದು ಅಲ್ಲಿನ ಆಡಳಿತ ಅಂದುಕೊಂಡಿದೆ. ಈ ದೆವ್ವಗಳ ಅಲ್ಲಿನ ಹೆಸರು 'ಪೊಕೊಂಗ್' ಆಗಿದ್ದು ಇವುಗಳು ನೋಡಲು ಭಯಂಕರವಾಗಿವೆ. ಆದುದರಿಂದ ಜನರು ಭೀತಿಗೊಳಗಾಗುವುದು ಖಂಡಿತ ಎಂದು ಪೊಲೀಸರ ಜತೆ ಸೇರಿ ದೆವ್ವಗಳ ಪಾತ್ರ ನಿರ್ವಹಿಸಲು ಮುಂದೆ ಬಂದ ಯುವಕರ ತಂಡದ ನಾಯಕ ಅಂಜರ್ ಪಂಕನಿಂಗ್ಟ್ಯಸ್ ಹೇಳುತ್ತಾರೆ.

ಈ 'ಪೊಕೊಂಗ್' ದೆವ್ವಗಳು ಬಿಳಿ ಉದ್ದದ ನಿಲುವಂಗಿ ಮೈಗೆ ಸುತ್ತಿಕೊಂಡಿರುತ್ತವೆ ಹಾಗೂ ಮುಖಕ್ಕೆ ಬಿಳಿಯ ಪೌಡರ್ ಹಾಕಲಾಗುತ್ತದೆ. ಕಣ್ಣುಗಳು ವಿಕಾರವಾಗಿ ಭಯ ಹುಟ್ಟಿಸುತ್ತವೆ. ಇಂಡೊನೇಷ್ಯಾದ ಜಾನಪದ ನಂಬಿಕೆಯಂತೆ ಸತ್ತವರ ಆತ್ಮಗಳು ಈ ದೆವ್ವದ ರೂಪದಲ್ಲಿ ತಿರುಗಾಡುತ್ತವೆ.

ಆರಂಭದಲ್ಲಿ ಜನರು ಈ ದೆವ್ವದ ವೇಷಧಾರಿಗಳನ್ನು ನೋಡಲೆಂದೇ ಕುತೂಹಲದಿಂದ ಮನೆಗಳಿಂದ ಹೊರಗಡೆ ಬರುತ್ತಿದ್ದರೆ ಈಗ ಈ ದೆವ್ವಗಳು ಒಂದೊಂದು ಕಡೆ ಮಿಂಚಿನ ತಪಾಸಣೆ ನಡೆಸುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News