1.5 ಕೋಟಿ ಪಿಪಿಇ ಕಿಟ್‌ಗಳ ಪೂರೈಕೆಗೆ ಚೀನಾಕ್ಕೆ ಗುತ್ತಿಗೆ ನೀಡಿದ ಭಾರತ

Update: 2020-04-15 16:45 GMT

ಹೊಸದಿಲ್ಲಿ, ಎ.15: ಕೊರೋನ ವೈರಸ್ ಮಹಾಮಾರಿಯ ವಿರುದ್ಧ ತನ್ನ ಸಮರವನ್ನು ಚುರುಕುಗೊಳಿಸಿರುವ ಭಾರತವು, ಸುಮಾರು 1.5 ಕೋಟಿ ವೈಯಕ್ತಿಕ ಸಂರಕ್ಷಣ ಸಲಕರಣೆ (ಪಿಪಿಇ)ಗಳ ಕಿಟ್‌ಗಳನ್ನು ಪೂರೈಕೆ ಮಾಡಲು ಚೀನಿ ಕಂಪೆನಿಗಳಿಗೆ ಗುತ್ತಿಗೆ ನೀಡಿದೆಯೆಂದು ಚೀನಾದಲ್ಲಿನ ಭಾರತೀಯ ರಾಯಭಾರಿ ವಿಕ್ರಮ್ ಮಿರ್ಸಿ ಮಂಗಳವಾರ ತಿಳಿಸಿದ್ದಾರೆ. ಗೌನ್‌ಗಳು, ಕೈಗವಸುಗಳು, ಮಾಸ್ಕ್‌ಗಳು ಹಾಗೂ ಗಾಗಲ್‌ಗಳು ಭಾರತವು ಚೀನದಿಂದ ಆಮದು ಮಾಡಿಕೊಳ್ಳಲಿರುವ ಪಿಪಿಇಗಳಾಗಿವೆ.

15 ಲಕ್ಷ ಕೋವಿಡ್-19 ಕ್ಷಿಪ್ರ ತಪಾಸಣಾ ಕಿಟ್‌ಗಳನ್ನು ಖರೀದಿಸುವ ನಿಟ್ಟಿನಲ್ಲಿಯೂ ಭಾರತವು ಚೀನಾದ ಜೊತೆ ಸಂಪರ್ಕದಲ್ಲಿದೆಯೆಂದು ಅವರು ಹೇಳಿದ್ದಾರೆ. ಈ ಪೈಕಿ ಕೆಲವು ಸಾಮಾಗ್ರಿಗಳು ಈಗಾಗಲೇ ಭಾರತವನ್ನು ತಲುಪಿದೆಯೆಂದು ಅವರು ಹೇಳಿದ್ದಾರೆ.

ವೈದ್ಯಕೀಯ ಸಲಕರಣೆಗಳ ರಫ್ತನ್ನು ತ್ವರಿತಗೊಳಿಸುವಂತೆ ಭಾರತವು ಚೀನಾಕ್ಕೆ ಮನವಿ ಮಾಡಿದೆಯೆಂದು ಮಿರ್ಸಿ ಬೀಜಿಂಗ್‌ನಲ್ಲಿ ನಡೆಸಿದ ವಿಡಿಯೋ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಜೆನೆರಿಕ್ ಔಷಧಿಗಳ ಉತ್ಪಾದನೆಗಾಗಿ ಬೇಕಾದ ಫಾರ್ಮಾಸ್ಯೂಟಿಕಲ್ ವಸ್ತುಗಳ ಪೂರೈಕೆಯನ್ನು ತೆರೆದಿಡುವಂತೆಯೂ ಭಾರತವು ಬೀಜಿಂಗ್‌ಗೆ ಮನವಿ ಮಾಡಿದೆಯೆಂದು ಮಿಸ್ರಿ ತಿಳಿಸಿದ್ದಾರೆ.

ಭಾರತದ ವೈದ್ಯಕೀಯ ಸಂಶೋಧನಾ ಮಂಡಳಿಯು ಎಪ್ರಿಲ್ 13ರಂದು ಕ್ಷಿಪ್ರ ಕೊರೋನ ರೋಗ ತಪಾಸಣಾ ಕಿಟ್‌ಗಳ ಪೂರೈಕೆಗೆ ಆರ್ಡರ್ ಮಾಡಿತ್ತು. ಆದರೆ ಕಾರಣಾಂತರಗಳಿಂದ ಅದರ ರವಾನೆ ವಿಳಂಬಗೊಂಡಿತ್ತು. ಈಗ ಈ ಕಿಟ್‌ಗಳು ಎಪ್ರಿಲ್ 15ಕ್ಕೆ ಭಾರತವನ್ನು ತಲುಪುವ ಸಾಧ್ಯತೆ ಎಂದು ವೈದ್ಯಕೀಯ ಮಂಡಳಿಯು ತನ್ನ ದೈನಂದಿನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಚೀನಾದಲ್ಲಿ ಕೊರೋನ ವೈರಸ್‌ಹಾವಳಿಯು ಉತ್ತುಂಗದಲ್ಲಿದ್ದಾಗ ಭಾರತವು ಆ ದೇಶಕ್ಕೆ ವೈದ್ಯಕೀಯ ನೆರವನ್ನು ನೀಡಿತ್ತು ಎಂದು ಮಿಸ್ರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News