ಫ್ಯಾಕ್ಟ್ ಚೆಕ್: ಮುಸ್ಲಿಮರು ಟೆರೇಸಿನಲ್ಲಿ ನಮಾಝ್ ಮಾಡುತ್ತಿರುವ ವೈರಲ್ ಚಿತ್ರ ದುಬೈನದ್ದು
ಈ ಲೇಖನ ಮೊದಲು altnews.in ನಲ್ಲಿ ಪ್ರಕಟವಾಗಿತ್ತು
ಹೊಸದಿಲ್ಲಿ: ಕಟ್ಟಡಗಳ ಟೆರೇಸಿನಲ್ಲಿ ಜನರ ಗುಂಪೊಂದು ನಮಾಝ್ ಮಾಡುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಈ ಚಿತ್ರ ಟ್ವೀಟ್ ಮಾಡಿ "ಇದು ಎಲ್ಲಿಯ ಚಿತ್ರ ಎಂದು ತಿಳಿದಿದೆಯೇ?#ಕ್ವಾರಂಟೀನ್'' ಎಂದು ಬರೆದಿದ್ದರು. ಈ ಪೋಸ್ಟ್ ಅನ್ನು ಇಲ್ಲಿಯ ತನಕ 5,000ಕ್ಕೂ ಅಧಿಕ ಬಾರಿ ರಿಟ್ವೀಟ್ ಮಾಡಲಾಗಿದೆ.
ಫೇಸ್ಬುಕ್ ಪುಟ Hukka aur Khat ಈ ಚಿತ್ರ ಪೋಸ್ಟ್ ಮಾಡಿ (ಇದು ಧರ್ಮಕ್ಕೆ ತೋರಿಸುವ ವಿಶ್ವಾಸವಿರಬಹುದು ಆದರೆ ಇದು ದೇಶದ್ರೋಹವಲ್ಲವೇ?) ಎಂದು ಹಿಂದಿಯಲ್ಲಿ ಪೋಸ್ಟ್ ಮಾಡಿದೆ. ಈ ಪೋಸ್ಟ್ ಅನ್ನು ಕೂಡ 400ಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದಾರೆ. ಆದರೆ ಈ ಚಿತ್ರ ಎಲ್ಲಿಯದು ಎಂಬ ಸುಳಿವು ಇಲ್ಲದೇ ಇದ್ದರೂ ಭಾರತದ ಮುಸ್ಲಿಂ ಸಮುದಾಯವನ್ನು ಈ ಚಿತ್ರದ ಮೂಲಕ ಟಾರ್ಗೆಟ್ ಮಾಡಿರುವುದು ಸ್ಪಷ್ಟ.
ಅಗ್ನಿಹೋತ್ರಿ ಅವರು ಟ್ವೀಟ್ ಮಾಡಿದ ಚಿತ್ರದಲ್ಲಿ ಕೆಲವು ಕಟ್ಟಡಗಳನ್ನು ಕ್ರಾಪ್ ಮಾಡಲಾಗಿರುವುದು ಸ್ಪಷ್ಟ. ಆದರೆ ಇಂತಹುದೇ ಇತರ ಫೋಟೋಗಳಲ್ಲಿ ಹಿನ್ನೆಲೆಯ ಕಟ್ಟಡಗಳು ಕಾಣಿಸುತ್ತವೆ.
'ನಮೋ' ಮತ್ತು 'ಮೋದಿ ಕಿಂಗ್ಡಮ್' ಎಂಬ ಫೇಸ್ ಬುಕ್ ಪುಟಗಳು ಈ ಫೋಟೋ ಶೇರ್ ಮಾಡಿ ಕನ್ನಡದಲ್ಲಿ ಹೀಗೆ ಬರೆದಿದ್ದವು- "ಆರೋಗ್ಯ, ಸಮಾಜ ಹಾಗೂ ವೈಜ್ಞಾನಿಕತೆ ಬಗಗೆ #ಕೆಲವರಿಗೆ ಮನವರಿಕೆ ಮಾಡೋದು !#ಕತ್ತೆ_ಮುಂದೆ_ಕಿನ್ನರಿ_ಬಾರಿಸಿದಂತೆ..?'' ಎಂದು ಬರೆಯಲಾಗಿತ್ತು.
altnews.in ಈ ಚಿತ್ರದ ಗೂಗಲ್ ರಿವರ್ಸ್ ಸರ್ಚ್ ಮಾಡಿದಾಗ ಈ ಹಿಂದೆ ಇದೇ ಚಿತ್ರವನ್ನು ಸೌದಿ ಅರೇಬಿಯಾ ಮತ್ತು ಕುವೈತ್‍ನಲ್ಲಿ ಶೇರ್ ಮಾಡಿದ್ದು ಹಾಗೂ ಅಲ್ಲಿನ ಹಲವು ಜನರು ಇದನ್ನು ಶೇರ್ ಮಾಡಿರುವುದು ತಿಳಿಯುತ್ತದೆ, ಆದರೆ ಯಾವ ಸ್ಥಳ ಎಂಬುದು ಮಾತ್ರ ಮೊದಲು ಸ್ಪಷ್ಟವಾಗಿಲ್ಲ. ನಂತರ ಚಿತ್ರವನ್ನು ಕೂಲಕಂಕಷವಾಗಿ ಗಮನಿಸಿದಾಗ ಮಸೀದಿ, ನೀರು ಸಮುದ್ರ ಹಾಗೂ ಒಂದು ದೋಣಿ ಕಾಣಿಸುತ್ತದೆ.
ಇದನ್ನೇ ಬಳಸಿ ಗೂಗಲ್ ಸರ್ಚ್ ಮಾಡಿದಾಗ ದುಬೈ ಕ್ರೀಕ್ ಸಮೀಪದಲ್ಲಿ ಈ ನಿರ್ದಿಷ್ಟ ವೈರಲ್ ಚಿತ್ರದ ಹಿನ್ನೆಲೆಯಲ್ಲಿ ಕಾಣಿಸುವ ಎತ್ತರದ ಕಟ್ಟಡ ಕಾಣಿಸಿತು. ಈ ಕಟ್ಟಡಗಳು ದುಬೈಯ ಪಾರಂಪರಿಕ ಪುರಾತತ್ವ ಇಲಾಖೆಯ ಅಧೀನದಲ್ಲಿದೆ. ಈ ಚಿತ್ರ ಹಾಗೂ ವೈರಲ್ ಚಿತ್ರದ ಹಿನ್ನೆಲೆಯಲ್ಲಿರುವ ಕಟ್ಟಡ ಒಂದೇ ಎಂದು ತಿಳಿದು ಬರುತ್ತದೆ.
ಇನ್ನೂ ಹಲವು ಕೋನಗಳಲ್ಲಿ altnews.in ಈ ಚಿತ್ರ ಪರಿಶೀಲಿಸಿ ದುಬೈಯಲ್ಲಿ ಮುಸ್ಲಿಮರು ನಮಾಝ್ ಮಾಡುತ್ತಿರುವ ಚಿತ್ರ ಬಳಸಿ ಭಾರತದಲ್ಲಿ ಲಾಕ್ ಡೌನ್ ಸಂದರ್ಭ ಮುಸ್ಲಿಮರು ಈ ರೀತಿ ನಮಾಝ್ ಸಲ್ಲಿಸುತ್ತಿದ್ದಾರೆ ಎಂದು ತಪ್ಪು ಅಭಿಪ್ರಾಯ ಮೂಡಿಸಲು ಯತ್ನಿಸಲಾಗಿದೆ ಎಂದು ಕಂಡುಕೊಂಡಿದೆ.
ಕೃಪೆ: altnews.in