ಅಮೆರಿಕದಲ್ಲಿ 24 ಗಂಟೆಯಲ್ಲಿ ಕೋವಿಡ್-19ಕ್ಕೆ ಬಲಿಯಾದವರ ಸಂಖ್ಯೆ 4,491ಕ್ಕೇರಿಕೆ
ವಾಷಿಂಗ್ಟನ್, ಎ.17: ಅಮೆರಿಕದಲ್ಲಿ ಕೊರೋನ ವೈರಸ್‌ಗೆ ಬಲಿಯಾದವರ ಸಂಖ್ಯೆ ಗುರುವಾರ 32,917ಕ್ಕೆ ತಲುಪಿದೆ ಎಂದು ಜಾನ್ಸ್ ಹಾಕ್‌ಕಿನ್ಸ್ ಯುನಿವರ್ಸಿಟಿ ದೃಢಪಡಿಸಿದೆ.
ಅಮೆರಿಕದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊರೋನ ವೈರಸ್‌ಗೆ ಮೃತಪಟ್ಟವರ ಸಂಖ್ಯೆ 4,491ಕ್ಕೆ ತಲುಪಿದೆ. ಕೊರೋನ ವೈರಸ್ ಸಾಂಕ್ರಾಮಿಕ ರೋಗಕ್ಕೆ ಇದುವರೆಗಿನ ಗರಿಷ್ಠ ದೈನಂದಿನ ಸಂಖ್ಯೆಯಾಗಿದೆ. ಅಮೆರಿಕದ ರೋಗ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಕೇಂದ್ರವು ಗುರುವಾರದ ಹೊತ್ತಿಗೆ ಕೊರೋನ ವೈರಸ್‌ಗೆ 31,071 ಜನರು ಮೃತಪಟ್ಟಿರುವುದಾಗಿ ದಾಖಲಿಸಿಕೊಂಡಿದೆ. ಇದರಲ್ಲಿ ಸಂಭಾವ್ಯ ವೈರಸ್‌ಗೆ ಮೃತಪಟ್ಟಿರುವ 4,141 ಜನರು ಸೇರಿದ್ದಾರೆ.
ಕೊರೋನಕ್ಕೆ ಅಮೆರಿಕದಲ್ಲಿ ಗರಿಷ್ಠ ಸಂಖ್ಯೆಯ ಜನರು ಸಾವನ್ನಪ್ಪಿದ್ದು, ವಿಶ್ವದಲ್ಲಿ ಇಟಲಿಯ(21,170) ಬಳಿಕ ಅಮೆರಿಕದಲ್ಲಿ ಹೆಚ್ಚು ಜನರು ಕರೋನಕ್ಕೆ ಬಲಿಯಾಗಿದ್ದಾರೆ. ಸ್ಪೇನ್‌ನಲ್ಲಿ 19,130 ಹಾಗೂ ಫ್ರಾನ್ಸ್‌ನಲ್ಲಿ 17,920 ಜನರು ಕೊರೋನ ವೈರಸ್‌ಗೆ ಸಾವನ್ನಪ್ಪಿದ್ದಾರೆ.ಅಮೆರಿಕದಲ್ಲಿ 6,67,800 ಕೊರೋನ ವೈರಸ್ ಪ್ರಕರಣಗಳು ದಾಖಲಾಗಿವೆ. ಕಳೆದೆರಡು ದಿನಗಳಿಂದ ದಾಖಲೆ ಸಂಖ್ಯೆಯಲ್ಲಿ ಜನರು ಸಾವನ್ನಪ್ಪುತ್ತಿದ್ದಾರೆ. ಕೋವಿಡ್-19ರ ಕೇಂದ್ರಸ್ಥಾನವಾಗಿರುವ ನ್ಯೂಯಾರ್ಕ್ ರಾಜ್ಯವೊಂದರಲ್ಲೇ 12,000ಕ್ಕೂ ಅಧಿಕ ಜನರು ಕೊರೋನಕ್ಕೆ ಮೃತಪಟ್ಟಿದ್ದಾರೆ.