×
Ad

ಬಾಂದ್ರಾ ಕಾರ್ಮಿಕರ ಪ್ರತಿಭಟನೆ ಪ್ರಕರಣದಲ್ಲಿ ಬಂಧಿತ ವಿನಯ್ ತಂದೆ ಹೆಸರು ಮೆಹಮೂದ್ ಎನ್ನುವುದು ಸುಳ್ಳು

Update: 2020-04-18 16:40 IST

ಮುಂಬೈ: ಮುಂಬೈಯ ಬಾಂದ್ರಾ ನಿಲ್ದಾಣದ ಸಮೀಪ ನೂರಾರು ವಲಸಿಗ ಕಾರ್ಮಿಕರು ಜಮಾಯಿಸಿ ಪ್ರತಿಭಟಿಸಲು ಪ್ರೇರೇಪಣೆ ನೀಡಿದ ಆರೋಪದ ಮೇಲೆ ಪೊಲೀಸರು ಬಂಧಿಸಿರುವ ವಿನಯ್ ದುಬೆ ಎಂಬ ವ್ಯಕ್ತಿಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಲಾಗುತ್ತಿದ್ದು, ಆತನ ತಂದೆಯ ಹೆಸರು ಮೆಹಮೂದ್ ಎಂದು ಆರೋಪಿಸಲಾಗುತ್ತಿದೆ. ಆದರೆ ಇದು ಸುಳ್ಳು ಎಂದು timesofindia.indiatimes.comನ ಫ್ಯಾಕ್ಟ್ ಚೆಕ್ ಸಾಬೀತುಪಡಿಸಿದೆ.

ವಿನಯ್ ದುಬೆ ಉತ್ತರ ಭಾರತೀಯ ಮಹಾಪಂಚಾಯತ್ ಎಂಬ ಸಂಘಟನೆಯ ಮುಖ್ಯಸ್ಥ. ಈತನ ತಂದೆಯ ಹೆಸರು ಜಟಾಶಂಕರ್ ದುಬೆ ಹೊರತು ಮೆಹಮೂದ್ ಅಲ್ಲ.

ಟ್ವಿಟರ್ ನಲ್ಲಿ ವಿನಯ್ ದುಬೆ ಹೆಸರು ಟೈಪ್ ಮಾಡಿ ಸರ್ಚ್ ಮಾಡಿದಾಗ ಆತ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಅವರ ಟ್ವೀಟ್ ಉಲ್ಲೇಖಿಸಿ ಮಾಡಿದ ಟ್ವೀಟ್ ಒಂದು ಕಂಡು ಬಂತು.

ದೇಶಮುಖ್ ಅವರ ಹಿಂದಿ ಟ್ವೀಟ್ ಹೀಗಿತ್ತು – “ಮುಂಬೈ ರಿಕ್ಷಾ ಚಾಲಕ ಜಟಾಶಂಕರ್ ದುಬೆ ಮುಖ್ಯಮಂತ್ರಿಗಳ ಕೊರೋನ ವೈರಸ್ ನಿಧಿಗಾಗಿ ರೂ 25,000 ದೇಣಿಗೆ ನೀಡಿದ್ದಾರೆ.'' ಇದನ್ನು ಉಲ್ಲೇಖಿಸಿ ವಿನಯ್ ದುಬೆ ಮಾಡಿದ ಟ್ವೀಟ್ ಹೀಗಿತ್ತು - ``ನನ್ನ ತಂದೆಯ ಬಗ್ಗೆ ಹೆಮ್ಮೆಯಿದೆ. ಕೊರೋನ ಹೋರಾಟಕ್ಕಾಗಿ ಅವರು ಮಹಾರಾಷ್ಟ್ರ ಸರಕಾರಕ್ಕೆ ಸ್ವಲ್ಪ ದೇಣಿಗೆ ನೀಡಿದ್ದಾರೆ.  ಗೃಹ ಸಚಿವ ಅನಿಲ್ ದೇಶಮುಖ್ ಅವರೇ ಈ ದೇಣಿಗೆ ಸ್ವೀಕರಿಸಿದ್ದರು. ಉದ್ಧವ್ ಠಾಕ್ರೆ ಅವರಿಗೆ ಧನ್ಯವಾದಗಳು. ನಿಮ್ಮ ಸಹಕಾರಕ್ಕೆ ಧನ್ಯವಾದಗಳು''.

ಆದರೆ ದುಬೆ ಅವರ ಟ್ವಿಟ್ಟರ್ ಖಾತೆ ವೆರಿಫೈಡ್ ಅಲ್ಲದೇ ಇದ್ದುದರಿಂದ ಈ ಬಗ್ಗೆ ಸರ್ಚ್ ಮಾಡಿದಾಗ ಆತ 2019 ಲೋಕಸಭಾ ಚುನಾವಣೆಯಲ್ಲಿ ಕಲ್ಯಾಣ್ ಕ್ಷೇತ್ರದಿಂದ ಪಕ್ಷೇತರನಾಗಿ ಸ್ಪರ್ಧಿಸಿದ್ದ ಎಂದು ತಿಳಿದು ಬಂದಿತ್ತು, ಚುನಾವಣಾ ಆಯೋಗದ ವೆಬ್‍ಸೈಟ್‍ ನಲ್ಲಿ ಅಫಿಡವಿಟ್ ಪರಿಶೀಲಿಸಿದಾಗ ಅದರಲ್ಲಿ ತಂದೆಯ ಹೆಸರು ಜಟಾಶಂಕರ್ ಪರಮಾನಂದ್ ದುಬೆ ಎಂದು ಬರೆಯಲಾಗಿತ್ತು.

ಆದುದರಿಂದ ವಿನಯ್ ದುಬೆ ತಂದೆ ಹೆಸರು ಜಟಾಶಂಕರ್ ದುಬೆ ಆಗಿದೆಯೇ ಹೊರತು ಕೆಲವರು ಹೇಳುತ್ತಿರುವಂತೆ ಮೆಹಮೂದ್ ಅಲ್ಲ ಎಂಬುದು ಸ್ಪಷ್ಟ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News