×
Ad

ಲಾಕ್‌ಡೌನ್: ದುಸ್ತರವಾದ ಬುಡಕಟ್ಟು ಜನರ ಬದುಕು

Update: 2020-04-19 10:17 IST

ಬೆಂಗಳೂರು: ದೇಶದಾದ್ಯಂತ ಲಾಕ್‌ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ನೂರಾರು ಆದಿವಾಸಿ, ಬುಡಕಟ್ಟು ಕುಟುಂಬಗಳ ಬದುಕು ಚಿಂತಾಜನಕವಾಗಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿರುವ ಬುಡಕಟ್ಟು, ಆದಿವಾಸಿ ಸಮುದಾಯಗಳಿಂದು ಅನ್ನ, ಗಂಜಿಗಾಗಿ ಕಾದು ಕೂರುವಂತಾಗಿದೆ.

ರಾಜ್ಯದಲ್ಲಿ ಕೊಡಗು, ಚಾಮರಾಜನಗರ, ಮೈಸೂರು, ಶಿವಮೊಗ್ಗ ಸೇರಿದಂತೆ ಉತ್ತರಕರ್ನಾಟಕ, ಬಯಲುಸೀಮೆ ಹಾಗೂ ಕರಾವಳಿ ಭಾಗದಲ್ಲಿ ಸಾವಿರಾರು ಆದಿವಾಸಿ ಮತ್ತು ಬುಡಕಟ್ಟು ಕುಟುಂಬಗಳು ವಾಸಿಸುತ್ತಿವೆ. ಸಾಮಾನ್ಯ ದಿನಗಳಲ್ಲಿ ಕಾಡಿನಿಂದ ನಾಡಿಗೆ, ನಾಡಿನಿಂದ ಕಾಡಿಗೆ ಸುತ್ತಾಡಿ ತಮ್ಮ ಜೀವನ ಸಾಗಿಸುತ್ತಿದ್ದರು. ಮತ್ತೊಂದುಕಡೆ ಒಂದಷ್ಟು ಜನರು ಅಲ್ಲಿನ ಕಾಫಿ ತೋಟಗಳಲ್ಲಿ ದುಡಿದು ತಿನ್ನುತ್ತಿದ್ದರು. ಆದರೆ, ಈ ಲಾಕ್‌ಡೌನ್ ಅವರ ಕೂಲಿ ಕೆಲಸವನ್ನು ಕಸಿದುಕೊಂಡಿದ್ದು, ಈಗ ಇವರ ನಡುವೆಯೂ ಕೊರೋನದ ಭೀತಿ ಆವರಿಸಿಕೊಂಡಿದೆ.

ರಾಜ್ಯದ ಕಾಡಂಚಿನಲ್ಲಿ 12ಕ್ಕೂ ಅಧಿಕ ಪಾರಂಪರಿಕ ಬುಡಕಟ್ಟು ಸಮುದಾಯಗಳಿದ್ದು, ತಲೆಮಾರುಗಳಿಂದಲೂ ಕಾಡಿನಲ್ಲಿ ಸಿಗುವ ಜೇನು ಮಾರಾಟದ ಮೂಲಕ ಬದುಕು ಕಟ್ಟಿಕೊಂಡಿದ್ದರು. ಅನಂತರ ಬದಲಾವಣೆಯ ಕಾಲಘಟ್ಟದಲ್ಲಿ ಸರಕಾರಗಳು ಅವರನ್ನು ಒಕ್ಕಲೆಬ್ಬಿಸಿ, ನಾಡಿಗೆ ಕಳುಹಿಸಿದ್ದಾರೆ. ಆದರೆ, ಕಾಡನ್ನೇ ನೆಚ್ಚಿಕೊಂಡು ಬದುಕುತ್ತಿದ್ದ ಅವರಿಗೆ ನಾಡಿನಲ್ಲಿ ಏನೂ ತೋಚದಂತೆ ಪರದಾಡುತ್ತಿದ್ದರು. ದಿನದ ತುತ್ತಿಗಾಗಿ ಪರಿತಪಿಸುತ್ತಿದ್ದರು. ಇದೀಗ ಕೊರೋನ ಲಾಕ್‌ಡೌನ್ ಹಿನ್ನೆಲೆಯಲ್ಲಿ, ಅವರ ಬದುಕು ಭಾಗಶಃ ಲಾಕ್ ಆಗಿರುವುದಂತೂ ಸತ್ಯ.

ಅದರಂತೆ ರಾಜ್ಯದಲ್ಲಿ 50ಕ್ಕೂ ಅಧಿಕ ಬುಡಕಟ್ಟು ಸಮುದಾಯಗಳಿವೆ. ಬುಡಕಟ್ಟು ಜನಾಂಗ ಹಾಗೂ ಆದಿವಾಸಿಗಳು ತಮ್ಮ ಜೀವನ ನಿರ್ವಹಣೆಗಾಗಿ ದಿನಕೂಲಿಯನ್ನೇ ಅವಲಂಬಿಸಿದ್ದಾರೆ. ಮಲೆನಾಡು ಹಾಗೂ ಕೊಡಗು ಕಡೆಗಳಲ್ಲಿ ಕಾಫಿ ತೋಟಗಳಲ್ಲಿ ದುಡಿದರೆ, ಉತ್ತರಕರ್ನಾಟಕ ಹಾಗೂ ಬಯಲು ಸೀಮೆ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವವರಿದ್ದಾರೆ.

ಕಾಫಿ ತೋಟಗಳಿಗೆ ಅಥವಾ ಕೃಷಿ ಚಟುವಟಿಕೆಯಲ್ಲಿ ದುಡಿದರಷ್ಟೇ ತಿನ್ನಲು ಆಹಾರ ಸಿಗುತ್ತದೆ. ಬದುಕಿನ ಬಂಡಿ ಸಾಗಿಸಲು ಇವುಗಳನ್ನೇ ನೆಚ್ಚಿ ಕೊಂಡಿದ್ದಾರೆ. ಆದರೆ, ಕೊರೋನ ಭೀತಿಯಿಂದ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ಮತ್ತೊಂದುಕಡೆ ಕಾಫಿ ತೋಟಗಳಲ್ಲಿಯೂ ಕೆಲಸ ನಿಲ್ಲಿಸಿದ್ದಾರೆ. ಇದರ ಪರಿಣಾಮ ಈ ಎರಡೂ ಸಮುದಾಯಗಳ ಮೇಲೆ ವ್ಯಾಪಕ ಪರಿಣಾಮ ಬೀರಿದೆ.

ಆಹಾರ ಸಮಸ್ಯೆ: ಪ್ರತಿದಿನ ಕೂಲಿ ನಾಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದ ಈ ಕುಟುಂಬಗಳಿಗೆ ಆಹಾರ ಬಹುದೊಡ್ಡ ಸಮಸ್ಯೆಯಾಗಿ ಕಾಡತೊಡಗಿದೆ. ಗೆಡ್ಡೆಗೆಣಸು ತರಲು ಅರಣ್ಯಕ್ಕೆ ಹೋಗಲೂ ಅಧಿಕಾರಿಗಳು ಬಿಡುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಗಿರಿಜನ ಸಮಗ್ರ ಅಭಿವೃದ್ಧಿ ಇಲಾಖೆ ವತಿಯಿಂದ ಆದಿವಾಸಿ ಕುಟುಂಬಗಳಿಗೆ ನೀಡುತ್ತಿದ್ದ ಪೌಷ್ಠಿಕ ಆಹಾರವೂ ಸರಿಯಾಗಿ ವಿತರಣೆಯಾಗುತ್ತಿಲ್ಲ.

ಗಂಜಿ ಕುಡಿದು ಕಾಲ ಕಳೆಯುವ ಜನರು

ಆದಿವಾಸಿ ಹಾಗೂ ಬುಡಕಟ್ಟು ಜನರು ನ್ಯಾಯಬೆಲೆ ಅಂಗಡಿಗಳಿಂದ ನೀಡಿದ ಅಕ್ಕಿಯಿಂದ ನಿತ್ಯ ಗಂಜಿ ಮಾಡಿಕೊಂಡು ಕುಡಿಯುತ್ತಾ ಮನೆಯ ಎಲ್ಲರೂ ಜೀವನದೂಡುತ್ತಿದ್ದಾರೆ. ಯಾರಾದರೂ ನಮ್ಮ ಹಾಡಿಗೆ ಒಂದಿಷ್ಟು ಸಹಾಯ ಮಾಡುವಂತೆ ಸಮುದಾಯದ ನಿವಾಸ ಸ್ಥಳಗಳಲ್ಲಿನ ಆದಿವಾಸಿಗಳು ಕಣ್ಣೀರು ಹಾಕುತ್ತಿದ್ದಾರೆ.

ಲಾಕ್‌ಡೌನ್ ಘೋಷಣೆ ಬಳಿಕ ಮೂರು ತಿಂಗಳಿಗೆ ಸಾಕಾಗುವಷ್ಟು ಆಹಾರವನ್ನು ಪ್ರತಿಕುಟುಂಬಕ್ಕೆ ನೀಡಬೇಕು ಎಂದು ಸರಕಾರ ಸೂಚನೆ ನೀಡಿದ್ದರೂ ಐಟಿಡಿಪಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆದಿವಾಸಿ ಸಮುದಾಯದ ನಾಯಕ ಬೋಜಪ್ಪ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಸೋಂಕು ಹರಡುವ ಭೀತಿ

ಆದಿವಾಸಿ, ಬುಡಕಟ್ಟು ಜನರಿಗೆ ಯಾವುದೇ ರೀತಿಯ ಮುಂಜಾಗ್ರತಾ ಕಿಟ್‌ಗಳನ್ನು ವಿತರಿಸಿಲ್ಲ. ಮಾಸ್ಕ್, ಸ್ಯಾನಿಟೈಸರ್, ಸೋಪು ನೀಡಿಲ್ಲ. ಅಲ್ಲದೆ, ಆಹಾರ ಪದಾರ್ಥಗಳನ್ನು ನೀಡಿಲ್ಲ. ಬೇರೆ ಬೇರೆ ಕಡೆಗಳಲ್ಲಿ ಕಾರ್ಮಿಕ ಇಲಾಖೆಯವರು ಅಗತ್ಯ ವಸ್ತುಗಳೊಂದಿಗೆ ಸುರಕ್ಷತಾ ಕಿಟ್‌ಗಳನ್ನು ವಿತರಣೆ ಮಾಡಲಾಗುತ್ತಿದೆ. ಆದರೆ, ಈ ಸಮುದಾಯಗಳ ಕುರಿತು ಯಾರೂ ಚಿಂತನೆ ಮಾಡುತ್ತಿಲ್ಲ ಎಂದು ಸಮುದಾಯದ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Writer - ಬಾಬುರೆಡ್ಡಿ ಚಿಂತಾಮಣಿ

contributor

Editor - ಬಾಬುರೆಡ್ಡಿ ಚಿಂತಾಮಣಿ

contributor

Similar News