ಹಸಿವಿನ ಆಕ್ರೋಶದ ನಡುವೆಯೇ ಸ್ಯಾನಿಟೈಸರ್ ತಯಾರಿಗೆ ಹೆಚ್ಚುವರಿ ಅಕ್ಕಿ ಬಳಸಲು ಕೇಂದ್ರದ ನಿರ್ಧಾರ !
ಹೊಸದಿಲ್ಲಿ, ಎ.20: ದೇಶದಲ್ಲಿ ಹ್ಯಾಂಡ್ ಸ್ಯಾನಿಟೈಸರ್‌ಗಳ ಪೂರೈಕೆಯಲ್ಲಿ ಕೊರತೆಯಾಗದಂತೆ ಎಥೆನಾಲ್ ಉತ್ಪಾದಿಸಲು ತನ್ನ ಕೇಂದ್ರದ ಗೋದಾಮುಗಳಲ್ಲಿರುವ ಹೆಚ್ಚುವರಿ ಅಕ್ಕಿಯನ್ನು ಬಳಸಿಕೊಳ್ಳಲು ಪೆಟ್ರೋಲಿಯಂ ಸಚಿವಾಲಯವು ಸೋಮವಾರ ನಿರ್ಧರಿಸಿದೆ. ವಾಯುಮಾಲಿನ್ಯವನ್ನು ತಗ್ಗಿಸಲು ಪೆಟ್ರೋಲಿಗೂ ಈ ಎಥೆನಾಲ್ ಅನ್ನು ಸೇರಿಸಲಾಗುತ್ತದೆ. ದೇಶವ್ಯಾಪಿ ಲಾಕ್‌ಡೌನ್ ನಿಂದಾಗಿ ಸಾವಿರಾರು ಜನರು ಹಸಿವೆಯಿಂದ ನರಳುವ ಸ್ಥಿತಿಗೆ ತಲುಪುತ್ತಿರುವ ಈ ಸಂದರ್ಭದಲ್ಲಿ ಸರಕಾರದ ಕ್ರಮವು ವಿವಾದವನ್ನು ಸೃಷ್ಟಿಸುವ ನಿರೀಕ್ಷೆಯಿದೆ.
ಹೆಚ್ಚುವರಿ ಆಹಾರ ಧಾನ್ಯಗಳನ್ನು ಎಥೆನಾಲ್ ಆಗಿ ಪರಿವರ್ತಿಸಲು ಅವಕಾಶ ಕಲ್ಪಿಸಿರುವ ರಾಷ್ಟ್ರೀಯ ಜೈವಿಕ ಇಂಧನಗಳ ನೀತಿಯನ್ನು ಉಲ್ಲೇಖಿಸಿರುವ ಸರಕಾರವು,ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಷ್ಟ್ರೀಯ ಜೈವಿಕ ಇಂಧನ ಸಮನ್ವಯ ಸಮಿತಿ (ಎನ್‌ಬಿಸಿಸಿ)ಯ ಸಭೆಯು ಈ ನಿರ್ಧಾರವನ್ನು ಕೈಗೊಂಡಿದೆ ಎಂದು ತಿಳಿಸಿದೆ.
ಮದ್ಯಸಾರ ಆಧಾರಿತ ಸ್ಯಾನಿಟೈಸರ್‌ಗಳ ತಯಾರಿಕೆಗಾಗಿ ಮತ್ತು ಪೆಟ್ರೋಲ್‌ನಲ್ಲಿ ಮಿಶ್ರಗೊಳಿಸಲು ಎಥೆನಾಲ್ ಉತ್ಪಾದಿಸಲು ಭಾರತೀಯ ಆಹಾರ ನಿಗಮ(ಎಫ್‌ಸಿಐ)ದ ಗೋದಾಮುಗಳಲ್ಲಿ ರುವ ಮಿಗತೆ ಅಕ್ಕಿಯನ್ನು ಬಳಸಿಕೊಳ್ಳುವ ಪ್ರಸ್ತಾವಕ್ಕೆ ಒಪ್ಪಿಗೆ ನೀಡಲಾಗಿದೆ ಎಂದು ಸರಕಾರವು ಹೇಳಿಕೆಯಲ್ಲಿ ತಿಳಿಸಿದೆ.
ಲಾಕ್‌ಡೌನ್ ಬಳಿಕ ಎಫ್‌ಸಿಐ ಗೋದಾಮುಗಳು ತುಂಬಿದ್ದರೂ ಲಕ್ಷಾಂತರ ಬಡವರು ಹಸಿವಿನಿಂದ ಬಳಲುತ್ತಿದ್ದಾರೆ ಎಂಬ ವರದಿಗಳ ಕುರಿತು ಕಳೆದ ಕೆಲವು ವಾರಗಳಿಂದ ತೀವ್ರ ವಿವಾದ ಸೃಷ್ಟಿಯಾಗಿದೆ.
ಲಾಕ್‌ಡೌನ್ ಆರಂಭವಾಗುತ್ತಿದ್ದಂತೆ ಸರಕಾರವು ದೇಶಾದ್ಯಂತ ಸುಮಾರು 80 ಕೋಟಿ ಜನರಿಗೆ ಮುಂದಿನ ಮೂರು ತಿಂಗಳ ಅವಧಿಗೆ ಉಚಿತ ರೇಷನ್ ಒದಗಿಸುವುದಾಗಿ ಭರವಸೆ ನೀಡಿತ್ತು. ಆದರೆ ಇದು ಪಡಿತರ ಚೀಟಿ ಹೊಂದಿರುವವರಿಗೆ ಮಾತ್ರ ದೊರೆಯುತ್ತಿದೆ. ಹೆಚ್ಚಿನ ವಲಸೆ ಕಾರ್ಮಿಕರ ಬಳಿ ಪಡಿತರ ಚೀಟಿಗಳು ಇಲ್ಲ,ಹೀಗಾಗಿ ಅವರು ಪಡಿತರದಿಂದ ವಂಚಿತರಾಗಿದ್ದಾರೆ.