ಕರ್ತಾರ್ ಸಾಹಿಬ್ ಗುರುದ್ವಾರದ 8 ಗುಮ್ಮಟಗಳ ಕುಸಿತ: ಸರಿಪಡಿಸಲು ಪಾಕ್‌ಗೆ ಭಾರತ ಆಗ್ರಹ

Update: 2020-04-20 17:29 GMT

ಲಕ್ನೋ, ಎ.20: ಪಾಕಿಸ್ತಾನದ ನವೀಕೃತ ಕರ್ತಾರ್‌ಪುರ ಸಾಹಿಬ್ ಗುರುದ್ವಾರದ ಕನಿಷ್ಠ ಎಂಟು ಗುಮ್ಮಟಗಳು, ಬಿರುಗಾಳಿ, ಮಳೆಗೆ ಕುಸಿದುಬಿದ್ದಿರವುದನ್ನು ಭಾರತವು ಇಸ್ಲಾಮಾಬಾದ್ ಮುಂದೆ ಪ್ರಸ್ತಾವಿಸಿದೆ ಹಾಗೂ ಗುರುದ್ವಾರಕ್ಕೆ ಆಗಿರುವ ಹಾನಿಯನ್ನು ತುರ್ತಾಗಿ ಸರಿಪಡಿಸುವಂತೆ ಹಾಗೂ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದೆ.

ಬಿರುಗಾಳಿ, ಮಳೆಯಿಂದಾಗಿ ಕುಸಿದುಬಿದ್ದಿರುವ ಗುಮ್ಮಟ ಹಾಗೂ ಗುರುದ್ವಾರದ ಕಟ್ಟಡದ ಇತರ ಭಾಗಗಳಿಗೆ ಆಗಿರುವ ಹಾನಿಯ ಛಾಯಾಚಿತ್ರಗಳು ಕಳೆದ ವಾರಾಂತ್ಯದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು.

ಕಳೆದ ವರ್ಷದ ನವೆಂಬರ್‌ನಲ್ಲಿ ಭಾರತದ ಗುರುದಾಸ್‌ಪುರದಲ್ಲಿರುವ ದೇರಾಬಾಬಾ ಸಾಹೀಬ್ ಹಾಗೂ ಪಾಕಿಸ್ತಾನದ ಕರ್ತಾರ್‌ಪುರ ಸಾಹಿಬ್ ಅನ್ನು ಸಂಪರ್ಕಿಸುವ ಕಾರಿಡಾರ್ ಅನ್ನು ಉದ್ಘಾಟಿಸಲಾಗಿತ್ತು. ಆ ಮೂಲಕ ಉಭಯದೇಶಗಳ ಜನರಿಗೆ ಈ ಎರಡೂ ಯಾತ್ರಾಸ್ಥಳಗಳನ್ನು ಸಂದರ್ಶಿಸಲು ಅವಕಾಶ ದೊರೆತಿತ್ತು.

ಕಾರಿಡಾರ್‌ನ ಉದ್ಘಾಟನೆಗೆ ಮುನ್ನ ಕರ್ತಾರ್‌ಪುರ ಸಾಹಿಬ್ ಗುರುದ್ವಾರದ ಅಭಿವೃದ್ಧಿ ಕಾಮಗಾರಿಗೆ ಕಳಪೆ ದರ್ಜೆಯ ಸಾಮಾಗ್ರಿಗಳನ್ನು ಬಳಸಿರುವುದೇ ಕಾರಣವಾಗಿರುವಬಹುದೆಂದು ಕೆಲವು ಮಾಧ್ಯಮಗಳು ಸಂದೇಹ ವ್ಯಕ್ತಪಡಿಸಿವೆ.

ಸಾಮಾನ್ಯವಾಗಿ ಸಿಮೆಂಟ್ ಹಾಗೂ ಕಬ್ಬಿಣ ಳಸಿಕೊಂಡು ಗುಮ್ಮಟಗಳನ್ನು ಬಳಸಲಾಗುತ್ತಿದೆ. ಆದರೆ ಕರ್ತಾರ್‌ಪುರ ಸಾಹಿಬ್‌ನ್ನು ಕಳೆದ ವರ್ಷದ ನವೆಂಬರ್9ನಲ್ಲಿ ಉದ್ಟಾಟಿಸಲು ಗಡುವು ನಿಗದಿಯಾಗಿದ್ದರಿಂದ ಗುರುದ್ವಾರದ ಹೊಸ ಗುಮ್ಮಟಗಳನ್ನು ತರಾತುರಿಯಿಂದ ಫೈಬರ್ ಹಾಳೆಯಿಂದಲೇ ನಿರ್ಮಿಸಲಾಗಿತ್ತು.

ಶುಕ್ರವಾರ ರಾತ್ರಿ ಸುರಿದ ಬಿರುಗಾಳಿ ಮಳೆಗೆ ಕರ್ತಾರ್‌ಪುರ ಗುರುದ್ವಾರ್‌ಸಾಹೀಬ್‌ನ 8 ಗೋಪುರಗಳಿಗೆ ಹಾನಿಯಾಗಿ, ಕುಸಿದುಬಿದ್ದಿರುವುದನ್ನು ಪಾಕಿಸ್ತಾನಿ ಅಧಿಕಾರಿಯೊಬ್ಬರು ಒಪ್ಪಿಕೊಂಡಿದ್ದಾರೆ.

ಈ ಮಧ್ಯೆ ಭಾರತ ಸರಕಾರವು ಹೇಳಿಕೆಯೊಂದನ್ನು ನೀಡಿದ್ದು, ಗುರುದ್ವಾರದ ಕಟ್ಟಡಗಳಿಗೆ ಆದ ಹಾನಿಯು ಸಿಖ್ಖ್‌ಸಮುದಾಯದಲ್ಲಿ ಭಾರೀ ನೋವನ್ನುಂಟು ಮಾಡಿದೆ ಎಂದು ಹೇಳಿದೆ. ಸಿಖ್ಖ್ ಸಮುದಾಯದ ಭಾವನೆಗಳನ್ನು ಗಮನಕ್ಕೆ ತೆಗೆದುಕೊಂಡು ತಕ್ಷಣವೇ ಗುರುದ್ವಾರಕ್ಕಾದ ಹಾನಿಯನ್ನು ಸರಿಪಡಿಸಬೇಕೆಂದು ಆಗ್ರಹಿಸಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಪಾಕ್, ಗಾಳಿಮಳೆಯಿಂದ ಕರ್ತಾರ್‌ಪುರ ಗುರುದ್ವಾರಕ್ಕಾದ ಹಾನಿಯನ್ನು ಕೆಲವೇ ತಾಸುಗಳಲ್ಲಿ ಸರಿಪಡಿಸಲಾಗಿದೆಯೆಂದು ಪಾಕ್ ಸರಕಾರ ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News