ಪಾದರಾಯನಪುರ: ಕೋತಿ ತಾನೂ ಕೆಟ್ಟು ಊರನ್ನೂ ಕೆಡಿಸಿದರೆ?

Update: 2020-04-21 05:23 GMT

ಕೊರೋನ ಮತ್ತು ಅಜ್ಞಾನ ಇವೆರಡರ ಜೊತೆ ಜೊತೆಗೆ ಹೋರಾಡಬೇಕಾದಂತಹ ಸ್ಥಿತಿ ಈ ದೇಶದ ಪೊಲೀಸರು ಮತ್ತು ವೈದ್ಯರಿಗೆ ಬಂದೊದಗಿದೆ. ಇಡೀ ವಿಶ್ವವೇ ಕೊರೋನದ ಆಘಾತಕ್ಕೆ ತತ್ತರಿಸಿ ಕೂತಿರುವಾಗ, ಇನ್ನೊಂದೆಡೆ ಭಾರತದ ಕೆಲವೆಡೆಗಳಲ್ಲಿ ಅಜ್ಞಾನ, ಅವಿವೇಕದ ಗೋಡೆ ದಾಟಲು ಕೊರೋನ ವಿರುದ್ಧದ ಜಾಗೃತಿಗೆ ಸಾಧ್ಯವಾಗುತ್ತಿಲ್ಲ. ಅಷ್ಟೇ ಅಲ್ಲ, ಕೊರೋನ ವಿರುದ್ಧ ನಡೆಸುವ ಈ ಹೋರಾಟದಲ್ಲಿ ಅವರು ಪ್ರತಿದಾಳಿಯನ್ನು ಎದುರಿಸಬೇಕಾದಂತಹ ಸ್ಥಿತಿ ನಿರ್ಮಾಣವಾಗಿದೆ. ಇತ್ತೀಚೆಗೆ ಪಂಜಾಬ್‌ನಲ್ಲಿ ಲಾಕ್‌ಡೌನ್ ಉಲ್ಲಂಘಿಸಿ ಸುರಕ್ಷಿತ ಅಂತರ ಪಾಲಿಸದ ಜನರನ್ನು ನಿಯಂತ್ರಿಸಲು ಹೋದಾಗ, ಅಲ್ಲಿನ ಜನರು ಪೊಲೀಸರ ಮೇಲೆ ಬರ್ಬರ ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಒಬ್ಬ ಪೊಲೀಸ್ ಅಧಿಕಾರಿಯ ಕೈಯನ್ನೇ ಕತ್ತರಿಸಲಾಯಿತು. ಇಂದೋರ್‌ನಲ್ಲಿ ಮಾಹಿತಿಗಾಗಿ ತೆರಳಿದ್ದ ವೈದ್ಯಕೀಯ ಸಿಬ್ಬಂದಿಯ ವಿರುದ್ಧ ಜನರು ದಾಳಿ ನಡೆಸಿದರು. ಮಹಾರಾಷ್ಟ್ರದಲ್ಲಿ ನಡೆಯುತ್ತಿದ್ದ ರಥಯಾತ್ರೆಯೊಂದನ್ನು ತಡೆಯಲು ಮುಂದಾದ ಪೊಲೀಸರ ಮೇಲೆ ಕಲ್ಲುತೂರಾಟ, ಹಲ್ಲೆಗಳು ನಡೆದವು. ಬೆಂಗಳೂರಿನಲ್ಲೂ ಆರೋಗ್ಯ ಸಿಬ್ಬಂದಿಯ ಮೇಲೆ ಹಲವು ಬಾರಿ ದಾಳಿ ನಡೆದಿದ್ದು ಮಾಧ್ಯಮಗಳಲ್ಲಿ ಚರ್ಚೆಯ ವಿಷಯವಾಯಿತು. ಈ ಕುರಿತಂತೆ ತನಿಖೆಯೂ ನಡೆಯುತ್ತಿದೆ. ಸದ್ಯಕ್ಕೆ ಕೊರೋನದ ಅಪಾಯಗಳೇನು ಎನ್ನುವುದನ್ನು ತಿಳಿಯದ ಅಮಾಯಕರು ದೇಶದಲ್ಲಿ ಯಾರು ಇಲ್ಲ. ‘ಲಾಕ್‌ಡೌನ್’ನಂತಹ ಮಹತ್ವದ ನಿರ್ಧಾರ ಕೈಗೊಂಡಿರುವುದೇ ಕೊರೋನ ಅದೆಷ್ಟು ಅಪಾಯಕಾರಿ ಎಂಬುದನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡಿಸಿದೆ ಮತ್ತು ಕೊರೋನ ಕುರಿತು ಬೇಜವಾಬ್ದಾರಿ ಪ್ರದರ್ಶಿಸಿದ ಪ್ರದೇಶಗಳೆಲ್ಲ ಅದಕ್ಕಾಗಿ ಅಪಾರ ಬೆಲೆ ತೆತ್ತಿವೆ. ದುರಂತವೆಂದರೆ, ಕೊರೋನ ಸೋಂಕಿತರು ಮತ್ತು ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ ಕೆಲವು ಪ್ರದೇಶಗಳು ಇನ್ನೂ ಈ ಬಗ್ಗೆ ಗಾಢ ನಿರ್ಲಕ್ಷವನ್ನು ತಳೆದಿರುವುದು. ಅದಕ್ಕೆ ಅತ್ಯುತ್ತಮ ಉದಾಹರಣೆಯೇ, ಬೆಂಗಳೂರಿನ ಪಾದರಾಯನ ಪುರದಲ್ಲಿ ಪೊಲೀಸರು ಮತ್ತು ಆರೋಗ್ಯ ಸಿಬ್ಬಂದಿಯ ಮೇಲೆ ನಡೆದ ದಾಂಧಲೆ. ಕಾರಣ ಅದೇನೇ ಇರಲಿ. ಪಾದರಾಯನ ಪುರದಲ್ಲಿ ನಡೆದಿರುವ ದಾಂಧಲೆ ಅಕ್ಷಮ್ಯ.

ಕೊರೋನ ಸೋಂಕು ಶಂಕಿತರನ್ನು ಕ್ವಾರಂಟೈನ್ ಮಾಡುವುದಕ್ಕಾಗಿ ಬಿಬಿಎಂಪಿ ಹಾಗೂ ಆರೋಗ್ಯ ಸಿಬ್ಬಂದಿ ಧಾವಿಸಿದಾಗ, ಅವರ ವಿರುದ್ಧ ಸ್ಥಳೀಯರು ದಾಳಿ ನಡೆಸಿದ್ದಾರೆ. ಕರ್ತವ್ಯ ನಿರ್ವಹಿಸಲು ಪೊಲೀಸರಿಗೂ ಅಡ್ಡಿ ಪಡಿಸಿದ್ದಾರೆ. ನಗರ ಆಯುಕ್ತ ಭಾಸ್ಕರ್ ರಾವ್ ‘‘ಪೊಲೀಸರ ಮೇಲೆ ಹಲ್ಲೆ ನಡೆಸಿಲ್ಲ’’ ಎಂದು ಹೇಳಿದರೂ, ಒಟ್ಟು ದಾಳಿ ಕೊರೋನ ವಿರುದ್ಧದ ಕಾರ್ಯಾಚರಣೆಯ ಮೇಲೆ ನಡೆದಿರುವುದು. ಈ ದಾಳಿಯಿಂದ ನೊಂದವರು ಕೇವಲ ಪೊಲೀಸ್ ಮತ್ತು ಆರೋಗ್ಯ ಸಿಬ್ಬಂದಿ ಮಾತ್ರವಲ್ಲ. ಕೊರೋನ ಕ್ವಾರಂಟೈನ್‌ನ್ನು ನಿರಾಕರಿಸುವುದೆಂದರೆ, ಪರೋಕ್ಷವಾಗಿ ಕೊರೋನವನ್ನು ಇತರರಿಗೂ ಹಂಚುವುದೆಂದೇ ಅರ್ಥ. ಪಾದರಾಯನಪುರಈಗಾಗಲೇ ಕೊರೋನ ಸೋಂಕಿತರ ಮೂಲಕ ಗುರುತಿಸಲ್ಪಟ್ಟಿರುವುದರಿಂದ ರೋಗ ಹರಡದಂತೆ ತಡೆಯಬೇಕಾದರೆ ಶಂಕಿತರ ಕ್ವಾರಂಟೈನ್ ಅನಿವಾರ್ಯ. ಇಂತಹ ಸಂದರ್ಭದಲ್ಲಿ ಇದನ್ನು ತಿರಸ್ಕರಿಸಿದರೆ ಅದರ ಅಪಾಯ ಸ್ವತಃ ಅವರ ಕುಟುಂಬಕ್ಕೆ, ಅವರ ಪರಿಸರಕ್ಕೆ ಮಾತ್ರವಲ್ಲ, ಅಲ್ಲಿಂದ ಅದು ಇತರ ಪ್ರದೇಶಗಳಿಗೂ ವ್ಯಾಪಿಸಬಹುದು. ಇಂತಹ ಸಂದರ್ಭದಲ್ಲಿ ಕ್ವಾರಂಟೈನ್‌ಗೆ ಪೂರ್ಣ ಪ್ರಮಾಣದಲ್ಲಿ ಸಹಕರಿಸುವುದೆಂದರೆ ತಮಗೆ ತಾವೇ ಒಳಿತನ್ನು ಮಾಡಿಕೊಂಡಂತೆ. ಇದೀಗ ಪಾದರಾಯನ ಪುರದ ಸ್ಥಿತಿ ಕೋತಿ ತಾನು ಕೆಟ್ಟು, ಊರನ್ನು ಕೆಡಿಸಿತು ಎಂಬ ಗಾದೆಯಂತಾಯಿತು. ಪಾದರಾಯನ ಪುರದಲ್ಲಿ ನಡೆದ ಘಟನೆಗೆ ಅಲ್ಲಿನ ಜನರನ್ನು ಹೊಣೆ ಮಾಡುವುದಕ್ಕಿಂತ ಜನಪ್ರತಿನಿಧಿಗಳನ್ನು ಹೊಣೆ ಮಾಡುವುದೇ ಹೆಚ್ಚು ಸೂಕ್ತ. ಅಲ್ಲಿನ ಜನರಲ್ಲಿ ಗೊಂದಲ, ಆತಂಕ ಬಿತ್ತುವಲ್ಲಿ ಈ ರಾಜಕಾರಣಿಗಳ ಪಾತ್ರ ಬಹುದೊಡ್ಡದು. ಈ ಪ್ರದೇಶದ ಜನರ ಬಹುದೊಡ್ಡ ದೌರ್ಬಲ್ಯವೆಂದರೆ ಇವರ ನಿಯಂತ್ರಣ ಹಲವು ಸ್ಥಳೀಯ ರಾಜಕಾರಣಿಗಳ ಕೈಯಲ್ಲಿರುವುದು. ಈ ಜನರ ಆತಂಕ, ಅಭದ್ರತೆ, ಅಜ್ಞಾನ, ಅನಕ್ಷರತೆಯನ್ನೆಲ್ಲ ತಮ್ಮ ರಾಜಕೀಯಕ್ಕೆ ಯಥೇಚ್ಛವಾಗಿ ಬಳಸಿಕೊಂಡವರು ಇಲ್ಲಿನ ಜನಪ್ರತಿನಿಧಿಗಳು. ಚುನಾವಣೆಯ ಸಂದರ್ಭದಲ್ಲಿ ಇವರನ್ನು ತಮ್ಮೆಲ್ಲ ಲಾಭಗಳಿಗೆ ದುರ್ಬಳಕೆ ಮಾಡುವ ಜನನಾಯಕರು ನಿಜಕ್ಕೂ ತಮ್ಮ ಜನರ ಮೇಲೆ ಕಾಳಜಿ ಹೊಂದಿದ್ದಾರೆ ಎಂದಾದರೆ, ಕ್ವಾರಂಟೈನ್‌ನ ನೇತೃತ್ವವನ್ನು ಇವರೇ ಹೊತ್ತುಕೊಳ್ಳಬೇಕಾಗಿತ್ತು. ಅಷ್ಟೇ ಅಲ್ಲ, ನಿಜಕ್ಕೂ ಇವರಿಗೆ ತಮ್ಮ ಜನರ ಮೇಲೆ ಪ್ರೀತಿಯಿದ್ದರೆ, ಆ ಪ್ರದೇಶಕ್ಕೆ ಕೊರೋನ ಕಾಲಿಡಲೇ ಬಾರದಂತೆ ಬೇಕಾದ ಮುಂಜಾಗ್ರತೆಯನ್ನು ಇವರು ವಹಿಸಿಕೊಳ್ಳಬೇಕಾಗಿತ್ತು.

ಪ್ರತಿ ವಾರ್ಡ್‌ಗಳಿಗೆ ಹೋಗಿ ಜನರಲ್ಲಿ ಕೊರೋನ ಕುರಿತಂತೆ ಜಾಗೃತಿಯನ್ನು ಬಿತ್ತುವ, ಆರೋಗ್ಯ ಅಧಿಕಾರಿಗಳ ಜೊತೆಗೆ ಪೂರ್ಣವಾಗಿ ಸಹಕರಿಸಲು ಸೂಚನೆ, ಮಾರ್ಗದರ್ಶನಗಳನ್ನು ನೀಡಬೇಕಾಗಿತ್ತು. ಅದ್ಯಾವುದೂ ನಡೆಯದ ಕಾರಣದಿಂದಾಗಿಯೇ ಅಲ್ಲಿನ ಜನರು ಹಲವು ರೀತಿಯಲ್ಲಿ ಬಲಿಪಶುಗಳಾಗಿದ್ದಾರೆ. ಒಂದೆಡೆ ಕೊರೋನ ಆತಂಕ ಅವರಲ್ಲಿ ಆವರಿಸಿದೆ. ಎರಡನೆಯದಾಗಿ, ಕ್ರಿಮಿನಲ್‌ಗಳಾಗಿ ಜೈಲು ಸೇರಬೇಕಾದ ಪರಿಸ್ಥಿತಿ. ಅಷ್ಟೇ ಅಲ್ಲ, ಅಲ್ಲಿ ನಡೆದ ಘಟನೆಯನ್ನು ಜನರನ್ನು ಬಳಸಿಕೊಂಡು ಟಿವಿಯೊಳಗಿರುವ ‘ಬ್ರಾಹ್ಮಣ್ಯ ಮನಸ್ಥಿತಿ’ಗಳು ಇಡೀ ಸಮಾಜವನ್ನೇ ಒಡೆಯುವ ಪ್ರಯತ್ನವನ್ನು ಮಾಡುತ್ತಿವೆ. ಆ ಜನರನ್ನು ಟಿವಿಯೊಳಗಿರುವ ‘ರಣಹದ್ದು’ಗಳಿಗೆ ಆಹಾರವಾಗಿ ಕೊಟ್ಟ ಹೆಗ್ಗಳಿಕೆಯನ್ನೂ ಸ್ಥಳೀಯ ಜನಪ್ರತಿನಿಧಿಗಳೇ ಹೊತ್ತುಕೊಳ್ಳಬೇಕು. ಜನಪ್ರತಿನಿಧಿ ಝಮೀರ್ ಅಹ್ಮದ್ ಖಾನ್ ಘಟನೆಗೆ ಪೊಳ್ಳು ಸಮರ್ಥನೆಗಳನ್ನು ನೀಡುತ್ತಿದ್ದಾರೆ. ‘‘ರಾತ್ರಿ ತಪಾಸಣೆಗೆ ಹೋಗುವುದು ಬೇಡ. ಹಗಲು ಹೊತ್ತಿನಲ್ಲೇ ಹೋಗೋಣ ಎಂದು ಬಿಬಿಎಂಪಿ ಆಯುಕ್ತರಿಗೆ ಶನಿವಾರ ಸಂಜೆ ತಿಳಿಸಿ ರವಿವಾರ ಇಡೀ ದಿನ ಅವರಿಗಾಗಿ ಕಾದಿದ್ದೆ. ಸಂಜೆ 6:30ರ ವೇಳೆಗೆ ನನ್ನ ಗಮನಕ್ಕೆ ತರದೆ ನೇರವಾಗಿ ಬಿಬಿಎಂಪಿಯವರು ಅಲ್ಲಿಗೆ ಹೋಗಿದ್ದರಿಂದ ಯಡವಟ್ಟಾಗಿದೆ’’ ಎಂದು ಅವರು ತಿಳಿಸುತ್ತಾರೆ. ಆದರೆ ಕೊರೋನಾದ ಈ ಒತ್ತಡದ ಸಂದರ್ಭದಲ್ಲಿ ಇಂತಹದೇ ಸಮಯದಲ್ಲಿ ಹೋಗಬೇಕು ಎಂದು ನಿರ್ಬಂಧಿಸುವಂತಿಲ್ಲ. ರಾತ್ರಿ ಪೊಲೀಸರ ಜೊತೆಗೆ ಸಿಬ್ಬಂದಿ ಏಕಾಏಕಿ ಮನೆಗೆ ನುಗ್ಗಿ ಹಲವರನ್ನು ಕ್ವಾರಂಟೈನ್ ಹೆಸರಲ್ಲಿ ವಶಕ್ಕೆ ತೆಗೆದುಕೊಂಡಿರುವುದು ಕೆಲವರಲ್ಲಿ ಗಾಬರಿ, ಆತಂಕ ಹುಟ್ಟಿಸುವುದು ಸಹಜವೇ ಆಗಿದೆ. ಈ ಪ್ರದೇಶದಲ್ಲಿರುವ ಹೆಚ್ಚಿನವರು ಕಾರ್ಮಿಕ ವರ್ಗದವರು.

ಮುಖ್ಯವಾಗಿ ಬಡವರು ಮತ್ತು ಅಶಿಕ್ಷಿತರು. ಇವರಿಗೆ ಪರಿಸ್ಥಿತಿಯನ್ನು ವಿವರಿಸಿ ಅವರೊಳಗಿರುವ ಎಲ್ಲ ಆತಂಕಗಳನ್ನು ದೂರ ಮಾಡಿ ಅವರನ್ನು ಕ್ವಾರಂಟೈನ್‌ನಲ್ಲಿ ಇರಿಸುವುದು ಆರೋಗ್ಯ ಸಿಬ್ಬಂದಿ, ಪೊಲೀಸ್ ಇಲಾಖೆ ಮತ್ತು ಜನಪ್ರತಿನಿಧಿಗಳ ಜಂಟಿ ಕರ್ತವ್ಯವಾಗಿತ್ತು. ಇಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಡುವಿನ ಹೊಂದಾಣಿಕೆಯ ಕೊರತೆ ಎದ್ದು ಕಾಣುತ್ತದೆ. ಹಾಗೆಯೇ ಸ್ಥಳೀಯ ರಾಜಕೀಯ ಹಗ್ಗಜಗ್ಗಾಟಗಳು ಜನರಲ್ಲಿ ಅನಗತ್ಯ ಗೊಂದಲಗಳನ್ನು ಸೃಷ್ಟಿಸಿರುವ ಸಾಧ್ಯತೆಗಳಿವೆ. ಇವೆಲ್ಲದರ ಪರಿಣಾಮವಾಗಿ ಪಾದರಾಯನಪುರ ಗೊಂದಲಪುರವಾಯಿತು. ಆದರೆ ಇದಕ್ಕಾಗಿ ಸ್ಥಳೀಯ ಬಡ ಅಮಾಯಕರನ್ನು ಮತ್ತೆ ಬಲಿಪಶುಗಳನ್ನಾಗಿಸಬಾರದು. ಪೊಲೀಸರ ಮೇಲೆ, ಆರೋಗ್ಯ ಸಿಬ್ಬಂದಿ ಮೇಲೆ ದಾಂಧಲೆ ನಡೆಸಿದವರ ಹಿಂದೆ ಅಪರಾಧಿ ಶಕ್ತಿಗಳಿದ್ದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುವುದು ಅತ್ಯಗತ್ಯ. ಗಲಭೆಯಲ್ಲಿ ನಿಜಕ್ಕೂ ಕ್ರಿಮಿನಲ್ ಹಿನ್ನೆಲೆಯ ಜನರಿದ್ದರೇ ಎನ್ನುವುದು ತನಿಖೆ ನಡೆಯಬೇಕು. ಆದರೆ ಯಾವ ಕಾರಣಕ್ಕೂ ಕ್ರಿಮಿನಲ್ ಹಿನ್ನೆಲೆಯಿಲ್ಲದ ಜನಸಾಮಾನ್ಯರನ್ನು, ಬಡ ಕಾರ್ಮಿಕರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಬಾರದು. ಅದು ನಡೆದದ್ದೇ ಆದರೆ, ಈಗಾಗಲೇ ಲಾಕ್‌ಡೌನ್‌ನಲ್ಲಿ ಬಸವಳಿದು ಕೂತ ಬಡಜನರ ತಲೆಯ ಮೇಲೆ ವ್ಯವಸ್ಥೆಯೇ ಚಪ್ಪಡಿ ಕಲ್ಲು ಹಾಕಿದಂತಾದೀತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News