×
Ad

​ದೇಶದಲ್ಲಿ 20 ಸಾವಿರ ದಾಟಿದ ಕೊರೋನ ಸೋಂಕಿತರ ಸಂಖ್ಯೆ; ಸಾವು 645

Update: 2020-04-22 09:08 IST

ಹೊಸದಿಲ್ಲಿ. ಎ.22: ದೇಶದಲ್ಲಿ ಕೋವಿಡ್-19 ಸೋಂಕು ಪ್ರಕರಣಗಳ ಸಂಖ್ಯೆ 20 ಸಾವಿರದ ಗಡಿ ದಾಟಿದ್ದು, ವಿಶ್ವದಲ್ಲಿ 20 ಸಾವಿರಕ್ಕಿಂತ ಅಧಿಕ ಸೋಂಕಿತರು ಇರುವ 17ನೇ ದೇಶ ಎನಿಸಿಕೊಂಡಿದೆ. ಮಹಾರಾಷ್ಟ್ರ, ರಾಜಸ್ಥಾನ ಹಾಗೂ ಪಶ್ಚಿಮ ಬಂಗಾಳದಲ್ಲಿ ಗರಿಷ್ಠ ಸಂಖ್ಯೆಯ ಸೋಂಕು ಪ್ರಕರಣಗಳು ಕಾಣಿಸಿಕೊಂಡಿದ್ದು, ಸಾವಿನ ಸಂಖ್ಯೆಯಲ್ಲೂ ಏರಿಕೆಯಾಗಿದ್ದು, ಒಂದೇ ದಿನ 49 ಮಂದಿ ಬಲಿಯಾಗುವ ಮೂಲಕ ಒಟ್ಟು ಮೃತಪಟ್ಟ ಸೋಂಕಿತರ ಸಂಖ್ಯೆ 645 ಆಗಿದೆ.

ರಾಜ್ಯಗಳಿಂದ ಕಲೆ ಹಾಕಿದ ಮಾಹಿತಿ ಪ್ರಕಾರ ಒಟ್ಟು ಸೋಂಕಿತರ ಸಂಖ್ಯೆ 20,083ನ್ನು ತಲುಪಿದ್ದು, ಒಂದೇ ದಿನ 1,493 ಪ್ರಕರಣಗಳು ದೃಢಪಟ್ಟಿವೆ. ರವಿವಾರ ದಾಖಲಾದ ಗರಿಷ್ಠ (1,613) ಸಂಖ್ಯೆಯ ಬಳಿಕ ಮಂಗಳವಾರ ಎರಡನೇ ಗರಿಷ್ಠ ಸಂಖ್ಯೆ ದಾಖಲಾಗಿದೆ. ಈ ಪೈಕಿ ಮೂರನೇ ಒಂದಕ್ಕೂ ಅಧಿಕ ಪ್ರಕರಣಗಳು ಮಹಾರಾಷ್ಟ್ರದಲ್ಲೇ ಇದ್ದು, ಮಂಗಳವಾರ ಒಂದೇ ದಿನ 552 ಪ್ರಕರಣಗಳು ದಾಖಲಾಗಿವೆ. ಮುಂಬೈ ನಗರದಲ್ಲೇ 419 ಪ್ರಕರಣಗಳು ಕಂಡುಬಂದಿದ್ದು, 12 ಮಂದಿ ಸಾವಿಗೀಡಾಗಿದ್ದಾರೆ.

ರಾಜಸ್ಥಾನ (159) ಮತ್ತು ಪಶ್ಚಿಮ ಬಂಗಾಳ (53)ದಲ್ಲಿ ಕೂಡಾ ಗಣನೀಯ ಸಂಖ್ಯೆಯ ಹೆಚ್ಚಳ ಕಂಡುಬಂದಿದ್ದು, ಈ ಸಾಂಕ್ರಾಮಿಕ ರೋಗ  ಗುಜರಾತ್‌ನಲ್ಲೂ ತನ್ನ ವೇಗವನ್ನು ಮುಂದುವರಿಸಿದೆ. ರಾಜ್ಯದಲ್ಲಿ ಮಂಗಳವಾರ 239 ಪ್ರಕರಣಗಳು ಪತ್ತೆಯಾಗಿವೆ.

ಮಹಾರಾಷ್ಟ್ರ 5,000ದ ಗಡಿ ದಾಟಿದ್ದರೆ, ಎರಡನೇ ಸ್ಥಾನದಲ್ಲಿರುವ ಗುಜರಾತ್ ಕೂಡಾ 2,000ದ ಗಡಿ ದಾಟಿದೆ. ರಾಷ್ಟ್ರ ರಾಜಧಾನಿ ಗರಿಷ್ಠ ಸೋಂಕಿತರ ಸಂಖ್ಯೆಯಲ್ಲಿ ಮೂರನೇ ಸ್ಥಾನದಲ್ಲಿದೆ. ಮೊದಲ ಪ್ರಕರಣ ದಾಖಲಾಗಿ ಕೇವಲ 34 ದಿನಗಳಲ್ಲಿ ಮಹಾರಾಷ್ಟ್ರ ಹಾಗೂ ಗುಜರಾತ್ ಕ್ರಮವಾಗಿ 5,000 ಹಾಗೂ 2,000ದ ಗಡಿ ತಲುಪಿವೆ. ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ಮಂಗಳವಾರ 15 ಮಂದಿ ಬಲಿಯಾಗಿದ್ದು, ಸೂರತ್‌ನಲ್ಲಿ 2 ಹಾಗೂ ಭಾವನಗರ ಮತ್ತು ಬರೂಚ್‌ನಲ್ಲಿ ತಲಾ ಒಂದು ಸಾವು ಸಂಭವಿಸಿದೆ.

ಮಹಾರಾಷ್ಟ್ರದಲ್ಲಿ ಕೇವಲ ಎರಡೇ ದಿನದಲ್ಲಿ ಸೋಂಕಿತರ ಸಂಖ್ಯೆ ಒಂದು ಸಾವಿರಕ್ಕೂ ಅಧಿಕವಾಗಿದೆ. ಮಹಾರಾಷ್ಟ್ರದಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಮಂದಿ ಮನೆ ಅಥವಾ ವಿವಿಧ ಸಂಸ್ಥೆಗಳಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆ. ಮಹಾರಾಷ್ಟ್ರ ಹಾಗೂ ಗುಜರಾತ್‌ನಲ್ಲಿ ಒಂದೇ ದಿನ ತಲಾ 19 ಮಂದಿ ಮೃತಪಟ್ಟಿದ್ದು, ಎರಡು ರಾಜ್ಯಗಳಲ್ಲಿ ಒಟ್ಟು ಸಾವಿನ ಸಂಖ್ಯೆ ಕ್ರಮವಾಗಿ 251 ಹಾಗೂ 90ಕ್ಕೇರಿದೆ. ಉತ್ತರ ಪ್ರದೇಶದಲ್ಲಿ ಮೂರು ಮಂದಿ ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 22ಕ್ಕೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News