ಪುರಿ ರಥೋತ್ಸವದ ಬಗ್ಗೆ ತುರ್ತು ನಿರ್ಧಾರ ಕೈಗೊಳ್ಳಿ: ಒಡಿಶಾ ಸಿಎಂಗೆ ಕಾಂಗ್ರೆಸ್ ಪತ್ರ
ಭುವನೇಶ್ವರ, ಎ.22: ಕೊರೋನ ಪಿಡುಗನ್ನು ಗಮನದಲ್ಲಿಟ್ಟುಕೊಂಡು, ಪುರಿಯ ಜಗನ್ನಾಥ ದೇವಾಲಯದ ಪ್ರಸಿದ್ಧ ವರ್ಷಾವಧಿ ರಥೋತ್ಸವವನ್ನು ನಡೆಸುವ ಬಗ್ಗೆ ಪುರಿ ಶಂಕಾರಾಚಾರ್ಯ ಸ್ವಾಮೀಜಿ ಮತ್ತಿತರ ಧಾರ್ಮಿಕ ಮುಖಂಡರ ಜೊತೆ ಮಾತುಕತೆ ನಡೆಸಿ, ತುರ್ತು ನಿರ್ಧಾರವನ್ನು ಕೈಗೊಳ್ಳಬೇಕೆಂದು ಒಡಿಶಾದ ಕಾಂಗ್ರೆಸ್ ಅಧ್ಯಕ್ಷ ನಿರಂಜನ ಪಟ್ನಾಯಕ್ ಅವರು ಬುಧವಾರ ಮುಖ್ಯಮಂತ್ರಿ ನವೀನ್ ಪಟ್ನಾಯಕ್‌ರನ್ನು ಆಗ್ರಹಿಸಿದ್ದಾರೆ.
ನಿರಂಜನ ಪಟ್ನಾಯಕ್ ಅವರು ಈ ಬಗ್ಗೆ ಒಡಿಶಾ ಮುಖ್ಯಮಂತ್ರಿಯವರಿಗೆ ಜೂನ್ 23ರಂದು ಬರೆದ ಪತ್ರದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಥಗಳನ್ನು ಕಟ್ಟುವ ಕೆಲಸವು ಎಪ್ರಿಲ್ 26, ಅಕ್ಷಯ ತೃತೀಯ ದಿನದಂದು ಆರಂಭವಾಗಲಿದೆ. ಇದಕ್ಕಾಗಿ ಬೇಕಾಗಿರುವ ಬೆತ್ತಗಳು ಈಗಾಗಲೇ ಪುರಿಯನ್ನು ತಲುಪಿವೆ ಎಂದು ಅವರು ಹೇಳಿದ್ದಾರೆ.
ಕೋವಿಡ್-19 ಹಾಳಿಯ ಹಿನ್ನೆಲೆಯಲ್ಲಿ ರಾಜ್ಯ ಸರಕರಾವು ತಕ್ಷಣವೇ ಶ್ರೀ ಜಗನ್ನಾಧ ದೇಗುಲ ಆಡಳಿತ ಸಮಿತಿ ಹಾಗೂ ಪುರಿ ಶಂಕರಾಚಾರ್ಯ ಸ್ವಾಮೀಜಿಯವರ ಜೊತೆ ಮಾತುಕತೆ ನಡೆಸಿ ನಿರ್ಧಾರ ಕೈಗೊಳ್ಳಬೇಕೆಂದು ನಿರಂಜನ್ ಪಟ್ನಾಯಕ್ ಒತ್ತಾಯಿಸಿದ್ದಾರೆ. ಪುರಿ ಜಗನ್ನಾಥ ದೇವಾಲಯದ ಜಾತ್ರೆಯನ್ನು ನಡೆಸುವ ಕುರಿತು ಸಾಮಾಜಿಕ ಕಾರ್ಯಕರ್ತರು ಹಾಗೂ ನಾಗರಿಕರ ಅಭಿಪ್ರಾಯಗಳನ್ನು ಕೂಡಾ ಪರಿಗಣನೆಗೆ ತೆಗೆದುಕೊಳ್ಳಬೇಕೆಂದು ನಿರಂಜನ್ ಒತ್ತಾಯಿಸಿದ್ದಾರೆ.
ಜಗನ್ನಾಥ ದೇವಾಲಯದ ರಥವನ್ನು ನಿರ್ಮಿಸಲು ಇನ್ನೂ ಸ್ವಲ್ಪವೇ ಮಯ ಉಳಿದಿದೆ. ಕೊರೋನಾ ಹರಡುವ ಸಾಧ್ಯತೆಯಿರುವುದರಿಂದ ಜಾತ್ರೆಯ ಸಮಯ ಸಾರ್ವಜನಿಕರಲ್ಲಿ ಸುರಕ್ಷಿತ ಅಂತರದ ನಿರ್ಬಂಧಗಳನ್ನು ಸಡಿಲಿಸುವ ಸಾಧ್ಯತೆಗಳು ತೀರಾ ಮಂದವಾಗಿವೆ. ಕೊರೋನಾ ಸಾಂಕ್ರಾಮಿಕ ಪಿಡುಗಿನಿಂದಾಗಿ ಇಡೀ ಮನುಕುಲವೇ ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ದೇಶದ ಇತಿಹಾಸದಲ್ಲೇ ಇದೊಂದು ಅಪರೂಪದ ಸನ್ನಿವೇಶವಾಗಿದೆ ಎಂದವರು ಹೇಳಿದ್ದಾರೆ.