5ಜಿ ಜಾಲದ ಮೂಲಕ ಕೊರೋನ ಹರಡುವುದಿಲ್ಲ: ವಿಶ್ವಸಂಸ್ಥೆ

Update: 2020-04-23 16:52 GMT

ವಿಶ್ವಸಂಸ್ಥೆ, ಎ. 23: ಕೋವಿಡ್-19 ಸಾಂಕ್ರಾಮಿಕ ರೋಗ ಹರಡಲು ಅತ್ಯಾಧುನಿಕ 5ಜಿ ಬ್ರಾಡ್‌ಬ್ಯಾಂಡ್ ತಂತ್ರಜ್ಞಾನ ಕಾರಣವಲ್ಲ ಎಂದು ವಿಶ್ವಸಂಸ್ಥೆಯ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಸಂಸ್ಥೆ ಹೇಳಿದೆ.

5ಜಿ ಮತ್ತು ಕೊರೋನವೈರಸ್ ನಡುವೆ ಸಂಬಂಧ ಕಲ್ಪಿಸುವ ಯಾವುದೇ ಸಿದ್ಧಾಂತವು ಹುಸಿಯಾಗಿದೆ ಹಾಗೂ ಅದಕ್ಕೆ ಯಾವುದೇ ತಾಂತ್ರಿಕ ಆಧಾರವಿಲ್ಲ ಎಂದು ಅಂತರ್‌ರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ (ಐಟಿಯು)ದ ವಕ್ತಾರೆ ಮೋನಿಕಾ ಗೆಹ್ನರ್ ‘ಯುಎನ್ ನ್ಯೂಸ್’ಗೆ ಬುಧವಾರ ಹೇಳಿದ್ದಾರೆ.

ನೋವೆಲ್-ಕೊರೋನವೈರಸ್ ಹರಡಲು 5ಜಿ ಜಾಲ ಕಾರಣ ಎಂದು ಆರೋಪಿಸಿ ಐರ್‌ಲ್ಯಾಂಡ್, ಸೈಪ್ರಸ್ ಮತ್ತು ಬೆಲ್ಜಿಯಮ್ ಸೇರಿದಂತೆ ಯುರೋಪ್‌ನ ಹಲವು ದೇಶಗಳಲ್ಲಿ ಜನರು 5ಜಿ ಫೋನ್ ಕಂಬಗಳನ್ನು ಧ್ವಂಸಗೊಳಿಸಿದ್ದಾರೆ ಅಥವಾ ಅವುಗಳಿಗೆ ಹಾನಿ ಮಾಡಿದ್ದಾರೆ ಎನ್ನಲಾಗಿದೆ.

ಬ್ರಿಟನ್‌ನಲ್ಲಿ ಹತ್ತಾರು ಫೋನ್ ಕಂಬ (ಟವರ್)ಗಳಿಗೆ ಹಾನಿ ಮಾಡಲಾಗಿದೆ ಹಾಗೂ ಕರ್ತವ್ಯನಿರತ ಇಂಜಿನಿಯರ್‌ಗಳಿಗೆ ಕಿರುಕುಳ ನೀಡಲಾಗಿದೆ ಎಂದು ಯುಎನ್ ನ್ಯೂಸ್ ವರದಿ ಮಾಡಿದೆ.

‘‘ಕೊರೋನ ವೈರಸ್ ರೇಡಿಯೊ ತರಂಗಗಳಿಂದ ಹರಡುವುದಿಲ್ಲ. ಸಾಂಕ್ರಾಮಿಕದಿಂದಾಗಿ ಸಾರ್ವಜನಿಕರ ಆರೋಗ್ಯ ಮತ್ತು ನೆಮ್ಮದಿಗೆ ಭಂಗ ಬಂದಿರುವಾಗ ಹಾಗೂ ಹದಗೆಟ್ಟಿರುವ ಆರ್ಥಿಕತೆಯನ್ನು ಸರಿಪಡಿಸಲು ಹೆಚ್ಚಿನ ಶ್ರಮದ ಅಗತ್ಯವಿರುವಾಗ, ಈ ಸುಳ್ಳು ಸುದ್ದಿಗಳ ವಿರುದ್ಧ ಹೋರಾಡಲು ನಮ್ಮ ಶ್ರಮ ಮತ್ತು ಸಮಯವನ್ನು ಮೀಸಲಿಡಬೇಕಾಗಿ ಬಂದಿರುವುದು ಶೋಚನೀಯ ಪರಿಸ್ಥಿತಿಯಾಗಿದೆ’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News