ಉತ್ತರ ಕೊರಿಯಕ್ಕೆ ವೈದ್ಯಕೀಯ ಪರಿಣತರ ತಂಡ ಕಳುಹಿಸಿದ ಚೀನಾ

Update: 2020-04-25 16:30 GMT

ಬೀಜಿಂಗ್, ಎ. 25: ಉತ್ತರ ಕೊರಿಯದ ಸರ್ವಾಧಿಕಾರಿ ಕಿಮ್ ಜೊಂಗ್ ಉನ್‌ರ ಆರೋಗ್ಯ ಪರಿಸ್ಥಿತಿಯ ಬಗ್ಗೆ ಸಲಹೆ ನೀಡಲು ಚೀನಾವು ಉತ್ತರ ಕೊರಿಯಕ್ಕೆ ವೈದ್ಯಕೀಯ ಪರಿಣತರನ್ನೊಳಗೊಂಡ ತಂಡವೊಂದನ್ನು ಕಳುಹಿಸಿದೆ ಎಂದು ‘ರಾಯ್ಟರ್ಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಉತ್ತರ ಕೊರಿಯದ ನಾಯಕನ ಆರೋಗ್ಯ ಪರಿಸ್ಥಿತಿಯ ಬಗ್ಗೆ ವಿರೋಧಾಭಾಸದ ವರದಿಗಳು ಬಂದಿರುವ ನಡುವೆಯೇ ಚೀನಾ ವೈದ್ಯರು ಮತ್ತು ಅಧಿಕಾರಿಗಳು ಉತ್ತರ ಕೊರಿಯಕ್ಕೆ ಭೇಟಿ ನೀಡುತ್ತಿದ್ದಾರೆ.

 ಚೀನಾ ಕಮ್ಯುನಿಸ್ಟ್ ಪಕ್ಷದ ಅಂತರ್‌ರಾಷ್ಟ್ರೀಯ ಸಂಬಂಧಗಳ ಇಲಾಖೆಯ ಹಿರಿಯ ಸದಸ್ಯರೊಬ್ಬರ ನೇತೃತ್ವದ ನಿಯೋಗವು ಗುರುವಾರ ಉತ್ತರ ಕೊರಿಯಕ್ಕೆ ತೆರಳಿದೆ ಎಂದು ಈ ಬಗ್ಗೆ ಮಾಹಿತಿಯಿರುವ ಇಬ್ಬರು ವ್ಯಕ್ತಿಗಳು ಹೇಳಿದ್ದಾರೆ ಎಂದು ‘ರಾಯ್ಟರ್ಸ್’ ವರದಿ ಮಾಡಿದೆ. ಈ ಇಲಾಖೆಯು ನೆರೆಯ ಉತ್ತರ ಕೊರಿಯದೊಂದಿಗೆ ವ್ಯವಹರಿಸುತ್ತಿರುವ ಪ್ರಮುಖ ಚೀನೀ ಸಂಸ್ಥೆಯಾಗಿದೆ.

ಕಿಮ್ ಆರೋಗ್ಯ ಸ್ಥಿತಿಯ ಬಗ್ಗೆ ಗುರುವಾರ ಎರಡು ವರದಿಗಳು ಹೊರಬಿದ್ದಿದ್ದವು. ಒಂದು ವರದಿಯು, ಕಿಮ್ ಎಪ್ರಿಲ್ 12ರಂದು ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಚೇತರಿಸುತ್ತಿದ್ದಾರೆ ಹಾಗೂ ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದರೆ, ಅವರ ಸ್ಥಿತಿ ಗಂಭೀರವಾಗಿಲ್ಲ ಎಂದು ಇನ್ನೊಂದು ವರದಿ ಹೇಳಿದೆ.

ಕಿಮ್ ಜಾಂಗ್ ಉನ್ ಬಗ್ಗೆ ತಪ್ಪು ವರದಿಗಳು ಬಂದಿವೆ ಎಂಬುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಗುರುವಾರ ಹೇಳಿದ್ದರು. ಆದರೆ, ಕಿಮ್ ಅಥವಾ ಉತ್ತರ ಕೊರಿಯದ ಇತರ ನಾಯಕರೊಂದಿಗೆ ನೀವು ಸಂಪರ್ಕದಲ್ಲಿರುವಿರೇ ಎಂಬ ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News