ಜಮ್ಮು ಕಾಶ್ಮೀರ: 28 ಮಂದಿಯ ವಿರುದ್ಧದ ಪಿಎಸ್‌ಎ ಕಾಯ್ದೆ ರದ್ದು

Update: 2020-04-25 17:12 GMT

ಹೊಸದಿಲ್ಲಿ,ಎ.29: ಜಮ್ಮುಕಾಶ್ಮೀರ ಕೇಂದ್ರಾಡಳಿತ ಪ್ರದೇಶದೊಳಗಿನ ಹಾಗೂ ಹೊರಗಿನ ಜೈಲುಗಳಲ್ಲಿರಿಸಲಾದ 28 ಮಂದಿ ವಿರುದ್ಧ ಹೇರಲಾಗಿದ್ದ ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್‌ಎ)ಯನ್ನು ಜಮ್ಮು ಕಾಶ್ಮೀರ ಸರಕಾರ ಹಿಂತೆಗೆದುಕೊಂಡಿದೆ.

ಕಾಶ್ಮೀರ ವರ್ತಕರು ಹಾಗೂ ಉತ್ಪಾದಕ ಒಕ್ಕೂಟ (ಕೆಟಿಎಂಎಫ್)ದ ಅಧ್ಯಕ್ಷ ಹಾಗೂ ಕಾಶ್ಮೀರ ಆರ್ಥಿಕ ಒಕ್ಕೂಟ (ಕೆಇಎ)ದ ವರಿಷ್ಢ ಮುಹಮ್ಮದ್ ಯಾಸಿನ್ ಖಾನ್ ಪಿಎಸ್‌ಎ ಕಾಯ್ದೆ ಹಿಂತೆಗೆಯಲ್ಪಟ್ಟವರ ಪಟ್ಟಿಯಲ್ಲಿರುವವರಲ್ಲಿ ಪ್ರಮುಖರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದೆ.

 ಕಳೆದ ವರ್ಷದ ಆಗಸ್ಟ್ 5ರಂದು ಕೇಂದ್ರ ಸರಕಾರವು ಜಮ್ಮುಕಾಶ್ಮೀರ ರಾಜ್ಯದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿ, ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಬಳಿಕ ರಾಜಕೀಯ ನಾಯಕರು ಸೇರಿದಂತೆ ನೂರಾರು ಜನರನ್ನು ಸಾರ್ವಜನಿಕ ಸುರಕ್ಷತಾ ಕಾಯ್ದೆಯಡಿ ಬಂಧಿಸಿತ್ತು.

ಇವರಲ್ಲಿ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ ಹಾಗೂ ಉಮರ್ ಅಬ್ದುಲ್ಲಾ ಸೇರಿದಂತೆ ಹಲವಾರು ಮಂದಿಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಲಾಗಿತ್ತು.

 ಆದಾಗ್ಯೂ ಮಾಜಿ ಮುಖ್ಯಮಂತ್ರಿ ಹಾಗೂ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ, ನ್ಯಾಶನಲ್ ಕಾನ್ಫರೆನ್ಸ್‌ನ ಪ್ರಧಾನ ಕಾರ್ಯದರ್ಶಿ ಅಲಿ ಮುಹಮ್ಮದ್ ಸಾಗರ್ ಹಾಗೂ ಮಾಜಿ ಸಚಿವ ನಯೀಮ್ ಆಖ್ತರ್ ಸೇರಿದಂತೆ ಹಲವು ನಾಯಕರು ಈಗಲೂ ಬಂಧನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News