ಆ್ಯಂಬುಲೆನ್ಸ್ ನಿರಾಕರಣೆ: ಬೈಕ್‌ನಲ್ಲಿ ಆಸ್ಪತ್ರೆಗೆ ಸಾಗಿಸುವಾಗ ಬಾಲಕ ಮೃತ್ಯು
ಪಾಟ್ನ, ಎ.25: 2 ವರ್ಷದ ಬಾಲಕನನ್ನು ಆಸ್ಪತ್ರೆಗೆ ಸಾಗಿಸಲು ಆ್ಯಂಬುಲೆನ್ಸ್ ದೊರಕದ ಕಾರಣ ಬೈಕ್‌ನಲ್ಲೇ ಕೊಂಡೊಯ್ಯುವ ಹಂತದಲ್ಲಿ ದಾರಿ ಮಧ್ಯೆಯೇ ಬಾಲಕ ಮೃತಪಟ್ಟ ಘಟನೆ ಬಿಹಾರದ ಜೆಹನಾಬಾದ್ ಜಿಲ್ಲೆಯಲ್ಲಿ ಶನಿವಾರ ವರದಿಯಾಗಿದೆ.
ಸುನಿಲ್ ಮಾಂಜ್ಹಿ ಎಂಬಾತನ ಪುತ್ರ ಶನಿವಾರ ತೀವ್ರ ಅಸ್ವಸ್ಥನಾದ ಹಿನ್ನೆಲೆಯಲ್ಲಿ ಸದರ್ ಆಸ್ಪತ್ರೆಗೆ ಕರೆತರಲಾಗಿದೆ. ಆದರೆ ಬಾಲಕನ ಆರೋಗ್ಯಸ್ಥಿತಿ ವಿಷಮಿಸಿದಾಗ ಬಾಲಕನನ್ನು ಪಾಟ್ನ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ತಿಳಿಸಿದ್ದಾರೆ. ಆದರೆ ಆ್ಯಂಬುಲೆನ್ಸ್ ಒದಗಿಸಲು ಆಸ್ಪತ್ರೆಯವರು ನಿರಾಕರಿಸಿದ್ದಾರೆ ಎಂದು ಬಾಲಕನ ಹೆತ್ತವರು ಆರೋಪಿಸಿದ್ದಾರೆ.
ಬಳಿಕ ಸುಮಾರು 50 ಕಿ.ಮೀ ದೂರದ ಪಾಟ್ನ ಆಸ್ಪತ್ರೆಗೆ ಬೈಕ್‌ನಲ್ಲಿ ಬಾಲಕನನ್ನು ಕರೆದೊಯ್ಯಲಾಗಿದೆ. ಆದರೆ ದಾರಿ ಮಧ್ಯೆಯೇ ಬಾಲಕ ಅಸುನೀಗಿದ್ದಾನೆ. ಇದರಿಂದ ದಿಕ್ಕೆಟ್ಟ ಪೋಷಕರು ಜಿಲ್ಲಾಧಿಕಾರಿಯ ಕಚೇರಿಯ ಬಳಿ ರಸ್ತೆಯಲ್ಲಿ ಮಗುವಿನ ಮೃತದೇಹವಿಟ್ಟು ರೋಧಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು, ಆ್ಯಂಬುಲೆನ್ಸ್ ಮೂಲಕ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆದರೆ ಬಾಲಕನನ್ನು ಆಸ್ಪತ್ರೆಗೆ ಕರೆತರುವಾಗಲೇ ಆರೋಗ್ಯ ವಿಷಮಿಸಿತ್ತು. ಆದ್ದರಿಂದ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಪಾಟ್ನದ ಆಸ್ಪತ್ರೆಗೆ ದಾಖಲಿಸಲು ತಿಳಿಸಿದ್ದೇವೆ. ಅಲ್ಲದೆ ಆ್ಯಂಬುಲೆನ್ಸ್ ಒದಗಿಸಿದಾಗ ನಿರಾಕರಿಸಿ, ಮೊದಲು ಮನೆಗೆ ಹೋಗುತ್ತೇವೆ. ಅಲ್ಲಿಂದ ಆಸ್ಪತ್ರೆಗೆ ಕರೆದೊಯ್ಯುತ್ತೇವೆ ಎಂದು ಹೇಳಿ ಬೈಕ್‌ನಲ್ಲಿ ತೆರಳಿದ್ದಾರೆ ಎಂದು ಆಸ್ಪತ್ರೆಯ ವೈದ್ಯ ಡಾ ವಿಜಯ್‌ಕುಮಾರ್ ಸಿನ್ಹ ಹೇಳಿದ್ದಾರೆ.