ಫ್ಯಾಕ್ಟ್ ಚೆಕ್: ‘7 ಮಂದಿಯ ಜೊತೆ ಸಿಕ್ಕಿಬಿದ್ದ ಕತರ್ ರಾಜಕುಮಾರಿ’ ಎನ್ನುವ ವೈರಲ್ ಟ್ವೀಟ್ ಸುಳ್ಳು

Update: 2020-04-26 08:12 GMT

ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅರಬ್ ಮಹಿಳೆಯರನ್ನು ಗುರಿಯಾಗಿಸಿ ಮಾಡಿದ ಹಳೆಯ ಇಸ್ಲಾಮೋಫೋಬಿಕ್ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಹರಿದಾಡಿದ ನಂತರ ವೃತ್ತಪತ್ರಿಕೆಯದ್ದು ಎನ್ನಲಾದ ಒಂದು ಫೋಟೊ ಕೂಡಾ ವೈರಲ್ ಆಗುತ್ತಿದೆ. “ಕತರ್‍ನ ರಾಜಕುಮಾರಿ ಏಳು ಮಂದಿ ಪುರುಷರ ಜತೆ ಲೈಂಗಿಕ ಕ್ರಿಯೆಯಲ್ಲಿದ್ದಾಗ ಸಿಕ್ಕಿಬಿದ್ದಿದ್ದಾರೆ” ಎಂಬ ಶೀರ್ಷಿಕೆಯನ್ನು ಈ ಸುದ್ದಿ ಹೊಂದಿದೆ. ಇದು ಬ್ರಿಟಿಷ್ ಪತ್ರಿಕೆ ‘ಫೈನಾನ್ಶಿಯಲ್ ಟೈಮ್ಸ್‍’ನ ವರದಿಯನ್ನು ಉಲ್ಲೇಖಿಸಿದ್ದು, “ಕತರ್ ರಾಜಕುಮಾರಿ ಶೇಖ್ ಸಲ್ವಾ ಲಂಡನ್‍ ನ ಹೋಟೆಲ್ ಒಂದರಲ್ಲಿ ಗುಂಪು ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ದಾಗ ಸಿಕ್ಕಿಹಾಕಿಕೊಂಡಿದ್ದಾರೆ” ಎಂದು ಆರೋಪಿಸಲಾಗಿದೆ.

ಈ ಫೋಟೊವನ್ನು @TheSquind ಎಂಬ ಟ್ವಿಟರ್ ಹ್ಯಾಂಡಲ್‍ನಿಂದ ಪೋಸ್ಟ್ ಮಾಡಲಾಗಿದ್ದು, 500ಕ್ಕೂ ಹೆಚ್ಚು ಮರುಟ್ವೀಟ್‍ ಗಳನ್ನು ಪಡೆದಿದೆ. @TheSquind ಇದನ್ನು ಯುಎಇ ರಾಜಕುಟುಂಬದ ರಾಜಕುಮಾರಿ ಹೆಂದ್ ಅಲ್ ಕಾಸಿಮಿ ಅವರಿಗೂ ಟ್ಯಾಗ್ ಮಾಡಿದೆ. ಈ ಪ್ರಕರಣವನ್ನು ಬ್ರಿಟನ್‍ ನಲ್ಲಿರುವ ಕತರ್ ರಾಯಭಾರ ಕಚೇರಿಯ ಗಮನಕ್ಕೆ ತಂದಾಗ, ಈ ಸುದ್ದಿಯನ್ನು ಪ್ರಕಟಿಸದಿರಲು 50 ದಶಲಕ್ಷ ಡಾಲರ್ ಹಣ ನೀಡುವ ಆಮಿಷ ಒಡ್ಡಲಾಗಿದೆ ಎಂದೂ ಪೋಸ್ಟ್ ‍ನಲ್ಲಿ ಆರೋಪಿಸಲಾಗಿತ್ತು.

ಕಿಶೋರ್ ಕೆ.ಸ್ವಾಮಿ ಎಂಬ ಟ್ವಿಟರ್ ಹ್ಯಾಂಡಲ್‍ ನಿಂದ ಕೂಡಾ ಈ ಫೋಟೊವನ್ನು ಪೋಸ್ಟ್ ಮಾಡಲಾಗಿದ್ದು, “ ಆ್ಯಂಡ್ ಶಿ ಈಸ್ ದ ಪ್ರಿನ್ಸ್ ಸೆಲೆಬ್ರೇಟೆಡ್ ಬೈ ಡಿಎಂಕೆ  ವಿಂಗ್ ಆ್ಯಂಡ್ ಸಿಂಗಲ್ ಸೋರ್ಸ್ ಈಡಿಯೆಟ್ಸ್. ಬ್ಲಡಿ ಪೇಯ್ಡ್ ಕ್ಯಾಂಪೇಲ್ ರ್ಯಾಟ್ಸ್” ಎಂದು ಶೀರ್ಷಿಕೆ ನೀಡಲಾಗಿದೆ.

ಕೋಮುಲೇಪಿತ ಸುಳ್ಳುಮಾಹಿತಿಗಳನ್ನು ಹರಡಿ ಹಲವು ಬಾರಿ ಸಿಕ್ಕಿಬಿದ್ದ ಸಾಮಾಜಿಕ ಮಾಧ್ಯಮ ಪ್ರಭಾವಿ ಪಾಯಲ್ ರೋಹಟ್ಗಿ ಕೂಡಾ ಈ ಪತ್ರಿಕಾ ತುಣುಕನ್ನು ಪತ್ರಕರ್ತೆ ನಿಧಿ ರಜ್ದಾನ್ ಅವರನ್ನು ಗುರಿ ಮಾಡಿದ ಮೆಸೇಜ್‍ನೊಂದಿಗೆ ಟ್ವೀಟ್ ಮಾಡಿದ್ದಾರೆ.

ಇದೇ ಸುದ್ದಿಯನ್ನು ಹಿಂದಿ ದೈನಿಕ ಅಮರ್ ಉಜಾಲ 2016ರಲ್ಲಿ ಪ್ರಕಟಿಸಿತ್ತು.

ವಾಸ್ತವವೇನು?

ಗೂಗಲ್ ‍ನಲ್ಲಿ ಹುಡುಕಾಡಿದಾಗ, ಈ ವರದಿ ಸುಳ್ಳು ಸುದ್ದಿ ಎಂದು ಉಲ್ಲೇಖಿಸಿದ ಹಲವು ವರದಿಗಳು ಕಂಡುಬಂದವು. 2016ರ ಆಗಸ್ಟ್ 24ರಂದು ಫಸ್ಟ್‍ ಪೋಸ್ಟ್ ಪ್ರಕಟಿಸಿದ ಒಂದು ವರದಿಯ ಪ್ರಕಾರ, “ಫೈನಾನ್ಶಿಯಲ್ ಟೈಮ್ಸ್ ಪ್ರಕಟಿಸಿದ ಕತರ್ ರಾಜಕುಮಾರಿ ಪ್ರಕರಣ ಸುಳ್ಳು. ಈ ಲೇಖನ ಪ್ರಕಟಿಸುವ ವೇಳೆಗೆ ಫೈನಾನ್ಶಿಯಲ್ ಟೈಮ್ಸ್ ವರದಿಗೆ ವಿರುದ್ಧವಾದ ಹಲವು ಸುದ್ದಿಗಳು ಪ್ರಕಟವಾಗಿದ್ದು, ಅವುಗಳನ್ನು ಅಳಿಸಿ ಹಾಕಲಾಗಿದೆ ಎಂದು ಹಲವು ಮಂದಿ ಗೂಗಲ್ ಸರ್ಚರ್‍ಗಳು ಹೇಳಿದ್ದಾರೆ”

ಮೊದಲು ಪ್ರಕಟವಾದ ಲೇಖನಕ್ಕಾಗಿ ಟ್ವಿಟರ್‍ನಲ್ಲಿ ಹುಡುಕಾಡಿದಾಗ,  Oddcrimes.com  ಎಂಬ ವೆಬ್‍ ಸೈಟ್ ಮೊದಲು ಈ ಫೈನಾನ್ಶಿಯಲ್ ಟೈಮ್ಸ್ ವರದಿಯನ್ನು ಉಲ್ಲೇಖಿಸಿದ್ದು ಪತ್ತೆಯಾಗಿದೆ. ಈ ವೆಬ್‍ಸೈಟ್ ‍ನಲ್ಲಿ ಪ್ರಕಟವಾದ ಲೇಖನ ಇದೀಗ ಉಳಿದಿಲ್ಲ. ಇತರ ಹಲವು ವೆಬ್‍ಸೈಟ್ ‍ಗಳು ಈ ವರದಿಯನ್ನು ಉಲ್ಲೇಖಿಸಿವೆ ಎಂದು ಆಪಾದಿಸಲಾಗಿತ್ತು.

 AWD News ಅಂಥ ವೆಬ್‍ಸೈಟ್‍ಗಳಲ್ಲೊಂದು. ಇದು ಸುಳ್ಳುಸುದ್ದಿಗಳ ವೆಬ್‍ಸೈಟ್ ಆಗಿದೆ. ಹಲವು ಸುಳ್ಳು ಸುದ್ದಿಗಳನ್ನು ಪ್ರಕಟಿಸಿದ ಕುಖ್ಯಾತಿ ಹೊಂದಿದೆ. ಫ್ಯಾಕ್ಟ್ ಚೆಕ್ ನಡೆಸುವ Snopes ಹೇಳುವಂತೆ, “ಈ ವೆಬ್‍ ಸೈಟ್ ಸತ್ಯಾಂಶಗಳನ್ನು ಉಲ್ಲೇಖಿಸುವ ಬದಲು ರಾಷ್ಟ್ರೀಯತೆಯ ಫ್ಯಾಂಟಸಿಯೊಂದಿಗೆ ಆಟವಾಡುತ್ತಿದೆ ಹಾಗೂ ಅಪಾಯಕಾರಿ ವರದಿ ಸೃಷ್ಟಿಸುವ ಸಂಚುಕೋರ ಸಿದ್ಧಾಂತವನ್ನು ಹೊಂದಿದೆ”

ಎಡಬ್ಲ್ಯುಡಿ ಪ್ರಕಟಿಸಿದ ಸುಳ್ಳು ಸುದ್ದಿ ಇಲ್ಲಿದೆ.

ಕುತೂಹಲದ ವಿಚಾರವೆಂದರೆ ಫೈನಾನ್ಶಿಯಲ್ ಟೈಮ್ಸ್‍ ನಲ್ಲಿ ಪ್ರಕಟವಾಗಿದೆ ಎನ್ನಲಾದ ಸುದ್ದಿ ತುಣುಕಿನಲ್ಲಿ ಆ ಸುದ್ದಿಯ ಮೂಲ Middle East Press ಎಂಬ ಇನ್ನೊಂದು ವೆಬ್‍ಸೈಟ್ ಎಂದು ಎಡಬ್ಲ್ಯುಡಿ ನ್ಯೂಸ್ ಉಲ್ಲೇಖಿಸಿದೆ. ಆದರೆ Middle East Press ‍ನಲ್ಲಿ ಕೂಡಾ ಈ ಸುದ್ದಿಯನ್ನು ಡಿಲೀಟ್ ಮಾಡಲಾಗಿದೆ.

ಇದರಿಂದ ನಿರ್ಣಯಕ್ಕೆ ಬರಬಹುದಾದ ಅಂಶವೆಂದರೆ ‘ಕತರ್ ರಾಜಕುಮಾರಿ ಏಳು ಮಂದಿ ಪುರುಷರ ಜತೆ ಸಿಕ್ಕಿಹಾಕಿಕೊಂಡಿದ್ದಾರೆ’ ಎನ್ನುವ ವರದಿಯನ್ನು ಫೈನಾನ್ಶಿಯಲ್ ಟೈಮ್ಸ್ ಪ್ರಕಟಿಸಿಲ್ಲ. ಫೈನಾನ್ಶಿಯಲ್ ಟೈಮ್ಸ್ ಈ ವರದಿಯನ್ನು ಪ್ರಕಟಿಸಿದೆ ಎಂದು ಹೇಳಿದ್ದು ಸುಳ್ಳು ಸುದ್ದಿಗಳನ್ನು ಹರಡುವ ವೆಬ್‍ಸೈಟ್.

ಮುಂಬೈ ಮೂಲದ ಇಂಗ್ಲಿಷ್ ಪತ್ರಿಕೆ ಆಫ್ಟರ್‍ ನೂನ್ ನ್ಯೂಸ್‍ಗೆ ನೀಡಿದ ಇ-ಮೇಲ್ ಪ್ರತಿಕ್ರಿಯೆಯಲ್ಲಿ ಫೈನಾನ್ಶಿಯಲ್ ಟೈಮ್ಸ್ ನ್ಯೂಸ್‍ ರೂಂನ ಸಂಪಾದಕೀಯ ಸಹಾಯಕ ಮೈಕೆಲ್ ಲಿಂಡ್ಸೆ, “ನೀವು ಉಲ್ಲೇಖಿಸಿದ ಲೇಖನವನ್ನು ಮೊದಲು www.awdnews.com ಪ್ರಕಟಿಸಿದೆ ಎನ್ನುವುದು ನಮ್ಮ ತಿಳುವಳಿಕೆ. ಇದು ನಮ್ಮ ವೆಬ್ ಸೈಟ್ ಅಲ್ಲ. ಎಡಬ್ಲ್ಯುಡಿ ಪ್ರಕಟಿಸಿರುವ ಸುಳ್ಳು ಲೇಖನಕ್ಕೆ ಫೈನಾನ್ಶಿಯಲ್ ಟೈಮ್ಸ್ ಹೊಣೆಯಲ್ಲ. ಇಷ್ಟು ಮಾತ್ರವಲ್ಲದೇ ಫೈನಾನ್ಶಿಯಲ್ ಟೈಮ್ಸ್ ಇಂಥ ಯಾವ ಸುದ್ದಿಯನ್ನೂ ಪ್ರಕಟಿಸಿಲ್ಲ ಹಾಗೂ ಎಎಡಬ್ಲ್ಯುಡಿಯ ಸುಳ್ಳು ಲೇಖನಲ್ಲಿ ಉಲ್ಲೇಖಿಸಲಾದ ಘಟನೆಗೂ ಪತ್ರಿಕೆಗೂ ಸಂಬಂಧ ಇಲ್ಲ” ಎಂದು ಸ್ಪಷ್ಟಪಡಿಸಿದ್ದರು.

ಫೋಟೊದಲ್ಲಿರುವ ಮಹಿಳೆ ರಾಜಕುಮಾರಿಯಲ್ಲ !

ರಾಜಕುಮಾರಿ ಶೇಖ್ ಸಲ್ವಾ ಅವರದ್ದು ಎಂದು ಹೇಳಲಾದ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೋಟೊ ದುಬೈ ಮೂಲದ ಮಝುರುಯಿ ಹೋಲ್ಡಿಂಗ್ಸ್ ನ ಮುಖ್ಯ ಕಾರ್ಯಾಚರಣೆ ಅಧಿಕಾರಿ ಅಲಿಯಾ ಅಲಿ ಮುಝುರುಯಿ ಅವರದ್ದು. ದುಬೈ ಮೂಲದ ಗಲ್ಫ್ ನ್ಯೂಸ್ ಅವರ ಸಂದರ್ಶನ ನಡೆಸಿದ ವಿಡಿಯೊವನ್ನು ಕೂಡ ಕೊನೆಗೆ ಪ್ರಕಟಿಸಲಾಗಿದೆ.

ನೀವು ಅವರ ಟ್ವಿಟರ್ ಖಾತೆಯಲ್ಲಿನ ಫೋಟೊದಿಂದ ಕೂಡಾ ಇದನ್ನು ದೃಢಪಡಿಸಿಕೊಳ್ಳಬಹುದು.

ಈಗಾಗಲೇ ಇಸ್ಲಾಮೋಫೋಬಿಯಾ ಟ್ವೀಟ್ ಗಳ ಬಗ್ಗೆ  ಧ್ವನಿಯೆತ್ತಿರುವ ಯುಎಇ ರಾಜಕುಮಾರಿ ಹೆಂದ್ ಅಲ್ ಕಾಸಿಮಿಯವರನ್ನು ತೇಜೋವಧೆ ಮಾಡುವ ಸಲುವಾಗಿ ನಾಲ್ಕು ವರ್ಷ ಹಳೆಯ ಸುಳ್ಳು ಸುದ್ದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮರುಜೀವ ನೀಡುವ ಕೆಲಸವನ್ನು ಟ್ರೋಲ್ ಗಳು ಮಾಡಿವೆ ಎನ್ನುವುದಂತೂ ಸ್ಪಷ್ಟ.

Full View

Writer - ಜಿಗ್ನೇಶ್ ಪಟೇಲ್, altnews.in

contributor

Editor - ಜಿಗ್ನೇಶ್ ಪಟೇಲ್, altnews.in

contributor

Similar News