ಹಜ್ ಭವನದಲ್ಲಿರುವ ಕೊರೋನ ಶಂಕಿತರನ್ನು ಸ್ಥಳಾಂತರಿಸಿ: ಕೃಷ್ಣ ಬೈರೇಗೌಡ

Update: 2020-04-26 12:58 GMT

ಬೆಂಗಳೂರು, ಎ.26: ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ಹಜ್ ಭವನದಲ್ಲಿರುವ ಕೊರೋನ ಶಂಕಿತರನ್ನು ಬೇರೆಡೆಗೆ ಸ್ಥಳಾಂತರ ಮಾಡಬೇಕೆಂದು ಮಾಜಿ ಸಚಿವ ಕೃಷ್ಣಬೈರೇಗೌಡ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

ಇಲ್ಲಿನ ದೊಡ್ಡಜಾಲ ಗ್ರಾಮ ಪಂಚಾಯತ್ ನವರತ್ನ ಅಗ್ರಹಾರ ಗ್ರಾಮದಲ್ಲಿ 350 ದಿನಸಿ ಕಿಟ್ ಮತ್ತು ತರಕಾರಿ ಕಿಟ್‍ಗಳನ್ನು ಗ್ರಾಮಸ್ಥರಿಗೆ ವಿತರಿಸಿ ಮಾತನಾಡಿದ ಅವರು, ಬ್ಯಾಟರಾಯನಪುರ ಕ್ಷೇತ್ರದಲ್ಲಿ ಇಲ್ಲಿಯವರೆಗೂ ಕೊರೋನ ಸೋಂಕಿತ ಪ್ರಕರಣಗಳು ವರದಿಯಾಗಿಲ್ಲ. ಆದರೆ, ಸರಕಾರ ಕೊರೋನ ಶಂಕಿತರನ್ನು ಹೆಚ್ಚು ಜನನಿಬಿಡ ಪ್ರದೇಶದಲ್ಲಿರುವ ಹಜ್ ಭವನದಲ್ಲಿ ಸ್ಥಳಾವಕಾಶ ನೀಡಿರುವುದರಿಂದಾಗಿ ಸುತ್ತಮುತ್ತಲಿನ ನಾಗರಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು.

ಇಲ್ಲಿ ತಂಗಿರುವ ಕೊರೋನ ಶಂಕಿತರನ್ನು ಸರಕಾರ ಕೂಡಲೇ ನಗರದ ಹೊರ ವಲಯದ ನಿರ್ಜನ ಪ್ರದೇಶದಲ್ಲಿ ಸ್ಥಳ ನಿಗದಿ ಮಾಡಿ ಸ್ಥಳಾಂತರ ಮಾಡಬೇಕು. ಆ ಮೂಲಕ ಅನಗತ್ಯವಾಗಿ ರೋಗ ಹರಡುವುದನ್ನು ತಡೆಗಟ್ಟಬೇಕೆಂದು ಅವರು ರಾಜ್ಯ ಸರಕಾರಕ್ಕೆ ಒತ್ತಾಯಿಸಿದರು.

ಬ್ಯಾಟರಾಯನಪುರ ಕ್ಷೇತ್ರದಲ್ಲಿ ಇದುವರೆಗೂ 25 ರಿಂದ 30 ಸಾವಿರ ರೂ. ಮೌಲ್ಯದ ದಿನಸಿ ಕಿಟ್‍ಗಳನ್ನು ವಿತರಿಸಲಾಗಿದೆ. ಸುಮಾರು 40 ಸಾವಿರ ಕುಟುಂಬಗಳಿಗೆ ತರಕಾರಿ ಕಿಟ್‍ಗಳನ್ನು ವಿತರಿಸಲಾಗಿದೆ. ಪ್ರತಿನಿತ್ಯ 8 ಸಾವಿರ ಆಹಾರದ ಪ್ಯಾಕೆಟ್‍ಗಳನ್ನು ವಿತರಿಸಲಾಗುತ್ತಿದ್ದು, ಇದುವರೆಗೂ ಬ್ಯಾಟರಾಯನಪುರ ಕ್ಷೇತ್ರದ ಕಾಂಗ್ರೆಸ್ ಮುಖಂಡರು ರೈತರಿಂದ ಸುಮಾರು 250 ಟನ್‍ಗಳಷ್ಟು ತರಕಾರಿಯನ್ನು ನೇರವಾಗಿ ಖರೀದಿಸಿ ವಿತರಿಸಿದ್ದಾರೆಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News