ಭಾರತದ ಏಕತೆಗೆ ಹಸಿವು ಮಾಡಿದ ಗಾಯ

Update: 2020-04-27 04:39 GMT

ಹಸಿವನ್ನೇ ರೋಗವಾಗಿಸಿಕೊಂಡಿರುವ ಭಾರತ, ಕೊರೋನದ ಬಗ್ಗೆ ಆತಂಕಗೊಂಡು ಇನ್ನಷ್ಟು ಹಸಿವನ್ನು ಆಮದು ಮಾಡಿಕೊಂಡಿದೆ. ಕೊರೋನ ದೆಸೆಯಿಂದ ಆಮದು ಮಾಡಿಕೊಂಡಿರುವ ಹಸಿವು ಇನ್ನಷ್ಟು ಹೊಸ ಮಾರಕ ರೋಗಗಳನ್ನು ಸೃಷ್ಟಿಸುವ ಎಲ್ಲ ಸಾಧ್ಯತೆಗಳು ಎದ್ದು ಕಾಣುತ್ತಿವೆ. ಕ್ಷಯದಂತಹ ರೋಗ, ಸೃಷ್ಟಿಯಾದ ಹೊಸ ಹಸಿವಿನಿಂದ ಇನ್ನಷ್ಟು ಮಾರಕವಾಗಲಿದೆ. ಹಾಗೆಯೇ ಅಪೌಷ್ಟಿಕತೆಗೆ ಸಂಬಂಧಿಸಿದ ಎಲ್ಲ ರೋಗಗಳು ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ವಿಸ್ತರಿಸಿಕೊಳ್ಳಲಿವೆ. ಒಂದೆಡೆ ನೇರವಾಗಿ ಹಸಿವಿಗೆ ಬಲಿಯಾಗುವವರ ಸಂಖ್ಯೆ ಹೆಚ್ಚಲಿದೆಯಾದರೆ, ಮಗದೊಂದೆಡೆ ಅಪೌಷ್ಟಿಕತೆಯ ಕಾರಣದಿಂದ ಸೃಷ್ಟಿಯಾಗಿರುವ ರೋಗಗಳಿಗೂ ಜನರು ತಮ್ಮನ್ನು ಅರ್ಪಿಸಿಕೊಳ್ಳಲಿದ್ದಾರೆ. ಭಾರತದಂತಹ ದೇಶ, ಕೊರೋನಕ್ಕೆ ಚಿಂತಿತವಾದಷ್ಟೇ ಗಂಭೀರವಾಗಿ ಭವಿಷ್ಯದಲ್ಲಿ ಹಸಿವು ಬೀರಲಿರುವ ದುಷ್ಪರಿಣಾಮಗಳ ಬಗ್ಗೆಯೂ ಯೋಚಿಸಬೇಕಾಗಿದೆ. ಜಗತ್ತಿನಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಹಸಿದ ಜನರಿರುವ ದೇಶವಾದ ಭಾರತದಲ್ಲಿ 20 ಕೋಟಿಗೂ ಅಧಿಕ ಮಂದಿ ಅರೆಹೊಟ್ಟೆಯಿಂದ ನರಳುತ್ತಿದ್ದಾರೆ. ಅದರಲ್ಲೂ 19 ಕೋಟಿಗೂ ಅಧಿಕ ಮಂದಿಗೆ ದಿನನಿತ್ಯದ ಆಹಾರಕ್ಕಾಗಿ ಪರದಾಡಬೇಕಾದ ಪರಿಸ್ಥಿತಿ ಇದೆ. ದೇಶದ ಪ್ರತಿ ಐದು ಮಕ್ಕಳ ಪೈಕಿ ನಾಲ್ವರನ್ನು ಅಪೌಷ್ಟಿಕತೆ ಕಾಡುತ್ತಿದೆ.

ಪೌಷ್ಟಿಕತೆಯನ್ನು ಹೊಂದಿರುವ ವ್ಯಕ್ತಿಗಳಿಗಿಂತ ಅಪೌಷ್ಟಿಕತೆಯುಳ್ಳವರು ಹೆಚ್ಚು ಸುಲಭ ವಾಗಿ ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಕೊರೋನವೈರಸ್ ಹಾವಳಿಯಿಂದಾಗಿ ಭಾರತದ ಹಸಿದ ಜನತೆಯ ಸಂಕಟಗಳೇ ಬೇರೆ. ಅವರಾರೂ ಹಸಿವಿಗೆ ಅಂಜಿದಷ್ಟು ಕೊರೋನಾಕ್ಕೆ ಹೆದರುತ್ತಿಲ್ಲ. ಅವರ ಪಾಲಿಗೆ ಕೊರೋನಒಂದು ರೋಗವೇ ಅಲ್ಲ. ಕೊರೋನ ವೈರಸ್ ಸೋಂಕು ಹರಡುವುದನ್ನು ತಡೆಯಲು ದೇಶಾದ್ಯಂತ ಲಾಕ್‌ಡೌನ್ ಹೇರಿದ ಬಳಿಕ ಬಡ ಜನರ ಸಾವಿನ ಹಾಗೂ ಆತ್ಮಹತ್ಯೆಯ ಪ್ರಕರಣಗಳು ಹೆಚ್ಚುತ್ತಿವೆ. ಇನ್ನೊಂದೆಡೆ ಲಾಕ್‌ಡೌನ್‌ನ ಪರೋಕ್ಷ ಪರಿಣಾಮದಿಂದಾಗಿ ಸಂಭವಿಸಿರುವ ಸಾವುಗಳ ಸಂಖ್ಯೆಯೂ ಲೆಕ್ಕಕ್ಕೆ ಸಿಗುತ್ತಿಲ್ಲ ಅಥವಾ ವರದಿಯಾಗಿಲ್ಲ. ಲಾಕ್‌ಡೌನ್ ಬಳಿಕ ದುಡಿಮೆಯಿಲ್ಲದೆ ಕಂಗಾಲಾಗಿರುವ ವಲಸಿಗ ಕಾರ್ಮಿಕರ ಪಾಡಂತೂ ಶೋಚನೀಯವಾಗಿದೆ. ಹಸಿದ ಹೊಟ್ಟೆಯಲ್ಲಿ ಅವರೀಗ ನೂರಾರು ಮೈಲು ದೂರದಲ್ಲಿರುವ ತಮ್ಮ ಮನೆಗಳಿಗೆ ನಡೆದುಕೊಂಡೇ ಹೋಗುತ್ತಿದ್ದಾರೆ. ಇವರಲ್ಲಿ ಕೆಲವರು ಹಸಿವು, ದಣಿವಿನಿಂದಾಗಿ ದಾರಿ ಮಧ್ಯೆ ಪ್ರಾಣ ಕಳೆದುಕೊಂಡ ಘಟನೆಗಳೂ ವರದಿಯಾಗಿವೆ.

ಭಾರತದ ಗೋದಾಮುಗಳಲ್ಲಿರುವ ಹೆಚ್ಚುವರಿ ಧಾನ್ಯಗಳನ್ನು, ಕೋವಿಡ್-19 ತಡೆಗಾಗಿ ಸ್ಯಾನಿಟೈಸರ್‌ಗಳ ತಯಾರಿಕೆಗೆ ಬೇಕಾದ ಎಥೆನಾಲ್‌ನ ತಯಾರಿಕೆಗೆ ಬಳಸಲು ಕೇಂದ್ರ ಸರಕಾರ ಈಗ ನಿರ್ಧರಿಸಿದೆ. ಭಾರತದಲ್ಲಿ ಸದ್ಯ ಕೋಟ್ಯಂತರ ಟನ್ ಧಾನ್ಯಗಳು ದಾಸ್ತಾನಿದ್ದರೆ, ಇನ್ನೊಂದೆಡೆ ಲಕ್ಷಾಂತರ ಜನರು ಹಸಿವೆಯಿಂದ ನರಳುತ್ತಿದ್ದಾರೆ. ಭಾರತೀಯ ಆಹಾರ ನಿಗಮದ ಗೋದಾಮುಗಳಲ್ಲಿ 7.70 ಕೋಟಿ ಟನ್ ಆಹಾರಧಾನ್ಯಗಳ ದಾಸ್ತಾನಿದ್ದು, ಇದು ಕಾಪುದಾಸ್ತಾನಿಗಿಂತ ನಾಲ್ಕು ಪಟ್ಟು ಅಧಿಕವಾಗಿದೆ. ಈ ದಾಸ್ತಾನಿನ ಒಂದು ಭಾಗವನ್ನು ದೇಶದ ಜನತೆಯನ್ನು ಕಾಡುತ್ತಿರುವ ಹಸಿವಿನ ಸಮಸ್ಯೆಯನ್ನು ನೀಗಿಸಲು ಬಳಸಿಕೊಳ್ಳಬೇಕಾಗಿದೆ. ಆದರೆ ಅದಕ್ಕೆ ಬಲವಾದ ಇಚ್ಛಾಶಕ್ತಿಯ ಅಗತ್ಯವಿದೆ. ಇದೀಗ ಭಾರತ ಸರಕಾರವು ಕೊರೋನ ಪಿಡುಗಿನ ವಿರುದ್ಧ ಹೋರಾಟದ ಭಾಗವಾಗಿ, ತನ್ನ ಗೋದಾಮಿನಲ್ಲಿರುವ ಅಕ್ಕಿಯ ದಾಸ್ತಾನಿನ ಒಂದು ಭಾಗವನ್ನು ಸ್ಯಾನಿಟೈಸರ್‌ಗಳ ಬಳಕೆಗೆ ಉಪಯೋಗಿಸಲು ನಿರ್ಧರಿಸಿದೆ.

ಲಾಕ್‌ಡೌನ್ ಆನಂತರ ದುಡಿಮೆ ಹಾಗೂ ನೆಲೆ ಎರಡನ್ನೂ ಕಳೆದುಕೊಂಡಿರುವ ವಲಸಿಗ ಕಾರ್ಮಿಕರು ಹಾಗೂ ಬಡವರ ಆಹಾರದ ಅವಶ್ಯಕತೆಯನ್ನು ನಿಭಾಯಿಸುವಲ್ಲಿ ಭಾರತ ಸರಕಾರದ ವೈಫಲ್ಯವು ಈಗಾಗಲೇ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಭಾರೀ ಟೀಕೆಗಳಿಗೆ ಕಾರಣವಾಗಿದೆ. ಲಾಕ್‌ಡೌನ್ ಹೇರಿಕೆಯ ಬಳಿಕ 13 ರಾಜ್ಯಗಳಲ್ಲಿ ಎನ್‌ಜಿಒಗಳು ಹಾಗೂ ಸಮಾಜಸೇವಾ ಸಂಸ್ಥೆಗಳು ಸರಕಾರಕ್ಕಿಂತಲೂ ಹೆಚ್ಚಾಗಿ ಹಸಿದ ಜನತೆಗೆ ಉಣಿಸುತ್ತಿವೆ. ಗುಜರಾತ್‌ನಲ್ಲಿ ಲಾಕ್‌ಡೌನ್ ಬಳಿಕ ಉಚಿತ ಆಹಾರವನ್ನು ಪಡೆಯುತ್ತಿರುವ ಬಡಜನರು ಹಾಗೂ ಕಾರ್ಮಿಕರ ಪೈಕಿ ಶೇ.93 ಮಂದಿ ಎನ್‌ಜಿಒಗಳನ್ನೇ ಆಶ್ರಯಿಸಿದ್ದಾರೆ. ವಾಸ್ತವ ಹೀಗಿರುವಾಗ, ಸರಕಾರಕ್ಕೆ ಯಾಕೆ ದೇಣಿಗೆ ನೀಡಬೇಕು? ಎಂಬ ಪ್ರಶ್ನೆಯೊಂದು ಜನರಲ್ಲಿ ಎದುರಾಗಿದೆ. ಪ್ರಪಂಚಾದ್ಯಂತ ದಿನಂಪ್ರತಿ 21 ಸಾವಿರ ಮಂದಿ ಹಸಿವಿನಿಂದ ಸಾಯುತ್ತಿದ್ದು, ಇವರಲ್ಲಿ ಏಶ್ಯ ಹಾಗೂ ಆಫ್ರಿಕ ದೇಶಗಳ ಜನರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಹಾಗೆ ನೋಡಿದರೆ ಹಸಿವು ಈಗಲೂ ಕೂಡಾ ಕೊರೋನ ವೈರಸ್‌ಗಿಂತಲೂ ಜೋರಾಗಿ ಈ ಜಗತ್ತನ್ನು ಕಾಡುತ್ತಿದೆ. ಈ ತನಕ ಯಾವುದೇ ಸರಕಾರವು ಹಸಿವಿನ ಸಮಸ್ಯೆಯನ್ನು ಬಗೆಹರಿಸಲು ವ್ಯವಸ್ಥಿತವಾಗಿ ಹಾಗೂ ಬದ್ಧತೆಯೊಂದಿಗೆ ಯಾವುದೇ ಕ್ರಮವನ್ನು ಕೈಗೊಳ್ಳದೆ ಇರುವುದು ಕಳವಳಕಾರಿಯಾಗಿದೆ.

ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಅತಿಯಾದ ಆಹಾರ ಸೇವನೆ ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ಸೃಷ್ಟಿಸಿದೆ. ಮಿತಿಮೀರಿದ ಆಹಾರಸೇವನೆ ಹಾಗೂ ಅದರಿಂದ ಉಂಟಾಗುವ ಅನಾರೋಗ್ಯದಿಂದಾಗಿಯೇ ಅಮೆರಿಕನ್ನರು ಸೇರಿದಂತೆ ಪಾಶ್ಚಾತ್ಯ ದೇಶಗಳ ಜನರು ಕೊರೋನ ವೈರಸ್‌ಗೆ ಸುಲಭವಾಗಿ ತುತ್ತಾಗಲು ಕಾರಣವೆಂದು ಯಾರಾದರೂ ಹೇಳಿದಲ್ಲಿ ಅದರಲ್ಲಿ ಅಚ್ಚರಿಯೇನಿಲ್ಲ. ಅನ್ನವನ್ನು ಪೋಲು ಮಾಡಬಾರದೆಂದು ಮನೆಯಲ್ಲಿ ಮಕ್ಕಳನ್ನು ಹಿರಿಯರು ಗದರಿಸಿ, ಬುದ್ಧ್ದಿ ಹೇಳುತ್ತಾರೆ. ಆದರೆ ದುರಂತವೆಂದರೆ, ನಮ್ಮ ಸರಕಾರವು ಸ್ಯಾನಿಟೈಸರ್‌ಗಳ ತಯಾರಿಕೆಗಾಗಿ ಅಪಾರ ಪ್ರಮಾಣದ ಆಹಾರಧಾನ್ಯಗಳನ್ನು ಪೋಲು ಮಾಡಲು ಹೊರಟಿದೆ.

ಆಡಳಿತದ ಯಾವುದೇ ನಡೆಗಳನ್ನು ಪ್ರಶ್ನಿಸಕೂಡದೆಂಬಪ್ರವೃತ್ತಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ. ಸರಕಾರ ಆಹಾರಧಾನ್ಯಗಳನ್ನು ಪೋಲು ಮಾಡುತ್ತಿರುವುದನ್ನು ಪ್ರಶ್ನಿಸಿದರೆ, ಆಹಾರ ಹಾಗೂ ಸಂಪತ್ತಿನ ಸಮಾನ ಹಾಗೂ ಸುಸ್ಥಿರ ವಿತರಣೆಗಾಗಿ ಸರಕಾರವನ್ನು ಆಗ್ರಹಿಸಿದರೆ, ಅಪಾಯಕಾರಿಯಾದ ರಾಸಾಯನಿಕಗಳಿಂದ ಮಲಿನವಾದ ಆಹಾರವನ್ನು ಮಾರಾಟ ಮಾಡುವ ಕಾರ್ಪೊರೇಟ್ ಕಂಪೆನಿಗಳನ್ನು ಪ್ರಶ್ನಿಸಿದರೆ, ದೇಶದ ಹಸಿದ ಜನತೆಗೆ ಆಹಾರವುಣಿಸಲು ಬಳಸಬಹುದಾದ ಹಣವನ್ನು ಶಸ್ತ್ರಾಸ್ತ್ರಗಳ ಖರೀದಿ ಹಾಗೂ ಮಾರಾಟಕ್ಕಾಗಿ ಬಳಸುವುದನ್ನು ಪ್ರಶ್ನಿಸಿದರೆ ಅವರು ‘ನಗರ ನಕ್ಸಲ್’ಗಳಾಗಿ ಜೈಲು ಸೇರಬೇಕಾಗುತ್ತದೆ. ಆದುದರಿಂದಲೇ, ಸರಕಾರದ ನೇತೃತ್ವದಲ್ಲಿ ಪೋಲಾಗುತ್ತಿರುವ ಆಹಾರ ಧಾನ್ಯಗಳ ಬಗ್ಗೆ ಯಾರೂ ಪ್ರಶ್ನೆ ಮಾಡುವ ಸಾಹಸಕ್ಕಿಳಿಯುತ್ತಿಲ್ಲ. ನಮ್ಮ ಹಸಿದ ಜನರಿಗೆ ಊಟ ನೀಡಲು, ನಮ್ಮ ಸರಕಾರವು ಈಗ ಪೋಲು ಮಾಡುತ್ತಿರುವ ಆಹಾರಗಳೇ ಸಾಕಾಗುತ್ತದೆ.

ನಾವು ದುಬಾರಿ ವೆಚ್ಚದಲ್ಲಿ ನಿರ್ಮಿಸಿರುವ ಬೃಹತ್ ಪ್ರತಿಮೆಗಳು, ಮಿಲಿಟರೀಕರಣಕ್ಕಾಗಿ ನಾವು ಮಾಡುತ್ತಿರುವ ವೆಚ್ಚ, ಶಸ್ತ್ರಾಸ್ತ್ರಗಳ ಖರೀದಿ, ಬಾಂಬ್‌ಗಳ ತಯಾರಿಕೆಗೆ ಅಪಾರ ಹಣದ ವ್ಯಯಿಸುವಿಕೆ, ನಮ್ಮ ಮುಖಂಡರ ವಿದೇಶ ಪ್ರವಾಸಕ್ಕಾಗಿ ಅಗಾಧ ಸಂಪನ್ಮೂಲಗಳ ಖರ್ಚು, ರೈತರ ಆತ್ಮಹತ್ಯೆ ಪ್ರಕರಣಗಳು, ಅಸಮರ್ಪಕ ಆರೋಗ್ಯ ಸೇವೆಗಳು, ಭಾರತದ ಕೃಷಿ ಆರ್ಥಿಕತೆಯ ಮೇಲೆ ಕಾರ್ಪೊರೇಟ್ ಶಕ್ತಿಗಳ ನಿಯಂತ್ರಣ ಹಾಗೂ ಭಾರೀ ಸಂಖ್ಯೆಯ ಜನರು ತಮ್ಮ ನೆಲದಿಂದಲೇ ನಿರ್ವಸಿತರಾಗುತ್ತಿರುವುದು, ಇವೆಲ್ಲದಕ್ಕ್ಕೂ ಸಂಬಂಧಿಸಿದ ಇತರ ವಿಚಾರಗಳ ಬಗ್ಗೆ ಯುವಜನತೆಯನ್ನು ನಮ್ಮ ಶಿಕ್ಷಣವು ಜಾಗೃತಗೊಳಿಸಬೇಕಿದೆ. ಚೆನ್ನಾಗಿ ಉಂಡವರು ಆಹಾರ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಜ್ವಲಂತ ವಿಷಯಗಳನ್ನು ಕಡೆಗಣಿಸಿರುವುದರಲ್ಲಿ ಅಚ್ಚರಿಯೇನೂ ಇಲ್ಲ. ಕೊರೋನಅಟ್ಟಹಾಸದಿಂದಾಗಿ ಜಗತ್ತಿನ ಭವಿಷ್ಯ ಅಂಧಕಾರದಲ್ಲಿ ಮುಳುಗಿರುವ ಈ ಸಮಯದಲ್ಲಿ ಹಸಿವಿನ ಪಿಡುಗು ಭಾರತದ ಏಕತೆಯ ಮೇಲೆ ದೊಡ್ಡದೊಂದು ಗಾಯದ ಕಲೆಯನ್ನು ಮೂಡಿಸಿದೆ. ಈ ಕಲೆಯು ಇನ್ನೊಂದು ದೊಡ್ಡ ದುರಂತವಾಗಿ ನಮ್ಮ ಪ್ರಜಾಪ್ರಭುತ್ವ, ಕಾನೂನು ಹಾಗೂ ಶಾಂತಿಗೆ ಕುತ್ತು ತಾರದಿರಲೆಂದು ಆಶಿಸೋಣ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News