×
Ad

ಕೊರೋನ ಸೋಂಕಿತರಿಗೆ ಪ್ಲಾಸ್ಮಾ ದಾನಕ್ಕೆ ಮುಂದಾದ ತಬ್ಲೀಗಿಗಳಿಗೆ ವ್ಯಾಪಕ ಪ್ರಶಂಸೆ

Update: 2020-04-27 10:39 IST

ಹೊಸದಿಲ್ಲಿ :  ದೇಶದಲ್ಲಿ ಕೋವಿಡ್-19 ಸೋಂಕು ವ್ಯಾಪಿಸಲು ಪ್ರಮುಖ ಕಾರಣ ಎಂಬ ಅಪವಾದ ಹೊತ್ತು ಕೆಲ ಮಾಧ್ಯಮ ಸಂಸ್ಥೆಗಳಿಂದ ಹಾಗೂ ಟ್ವಟ್ಟರಿಗರಿಂದ ಭಾರೀ ನಿಂದನೆಕ್ಕೊಳಗಾಗಿದ್ದ ತಬ್ಲೀಗಿ ಜಮಾಅತ್  ಸದಸ್ಯರು ಇದೀಗ ಅದೇ ಟ್ವಿಟ್ಟರಿಗರಿಂದ ಶ್ಲಾಘನೆಗೊಳಗಾಗಿದ್ದಾರೆ ಹಾಗೂ #TabligiHeroes ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಲು ಕಾರಣರಾಗಿದ್ದಾರೆ.

ಕೋವಿಡ್-19 ರೋಗಿಗಳ ಚಿಕಿತ್ಸೆಗೆ ನೆರವಾಗಲು ಅವರಿಗೆ ತಮ್ಮ ಪ್ಲಾಸ್ಮಾ ದಾನ ಮಾಡಲು ಕೆಲ ತಬ್ಲೀಗಿ ಜಮಾಅತ್ ಸದಸ್ಯರು ಮುಂದೆ ಬಂದಿರುವುದರಿಂದ ಅವರ ಹೃದಯ ವೈಶಾಲ್ಯತೆಗೆ ಎಲ್ಲೆಡೆಯಿಂದ  ಪ್ರಶಂಸೆ ದೊರಕಿದೆ.

ರವಿವಾರ ತಡರಾತ್ರಿಯಿಂದ ಟ್ವಿಟರ್ ನಲ್ಲಿ #TabligiHeroes ಟ್ರೆಂಡಿಂಗ್  ಆಗಿತ್ತು. ಈ ಹಿಂದೆ ಕೊರೋನ ಪಾಸಿಟಿವ್ ಆಗಿದ್ದವರು ಈಗ ಇತರ ರೋಗಿಗಳಿಗಾಗಿ ತಮ್ಮ ಪ್ಲಾಸ್ಮಾ ದಾನಕ್ಕೆ ಮುಂದೆ ಬಂದಿರುವುದು  ಎಲ್ಲರಿಗೆ ಖುಷಿ ನೀಡಿದೆ.

 ಈ ಹಿಂದೆ ತಬ್ಲೀಗಿ ಜಮಾಅತ್ ಸದಸ್ಯರಿಗೆ 'ಉಗ್ರ'ರೆಂಬ ಹಣೆಪಟ್ಟಿ ಕಟ್ಟಿದ ಹಾಗೂ ಅವರು 'ಕೊರೋನ ಜಿಹಾದ್' ನಡೆಸುತ್ತಿದ್ದಾರೆಂದು ಆರೋಪಿಸಿದ್ದ ಕೆಲ ಮಾಧ್ಯಮಗಳನ್ನು ಟ್ವಿಟ್ಟರಿಗರು ತರಾಟೆಗೆ  ತೆಗೆದುಕೊಂಡಿದ್ದಾರಲ್ಲದೆ ಇದೀಗ ಅದೇ ತಬ್ಲೀಗಿ ಜಮಾಅತ್ ಸದಸ್ಯರು ತಮ್ಮ ಪ್ಲಾಸ್ಮಾ ದಾನ ಮಾಡಲು ಮುಂದೆ ಬಂದಿರುವ ಕುರಿತಂತೆ ಕನಿಷ್ಠ ಪ್ರಚಾರ ನೀಡುತ್ತಿರುವುದೇಕೆ ಎಂದೂ ಪ್ರಶ್ನಿಸಿದ್ದಾರೆ.

ಈ ದೇಶದ ಜನತೆ ಒಗ್ಗಟ್ಟಿನಲ್ಲಿರುವಾಗ ದ್ವೇಷದ ವಾತಾವರಣವನ್ನು ಸೃಷ್ಟಿಸುವ ಯತ್ನದ ವಿರುದ್ಧವೂ ಟ್ವಿಟ್ಟರಿಗರು ಕಿಡಿಕಾರಿದ್ಧಾರೆ. ಸೋಮವಾರ ಬೆಳಗ್ಗೆ 7 ಗಂಟೆ ಹೊತ್ತಿಗೆ #TabligiHeroes ಹ್ಯಾಶ್ ಟ್ಯಾಗ್ ಸುಮಾರು ಎರಡು ಲಕ್ಷ ಟ್ವೀಟ್‍ಗಳಿಗೆ ಕಾರಣವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News