ರಮಝಾನ್ ನ ಮೊದಲ ದಿನ ತಿಹಾರ್ ಜೈಲಿನಲ್ಲಿ ಕಳೆದ ಗರ್ಭಿಣಿ ಸಫೂರ ಝರ್ಗಾರ್

Update: 2020-04-27 16:22 GMT

ಹೊಸದಿಲ್ಲಿಯಲ್ಲಿರುವ ಭಾರೀ ಭದ್ರತೆಯ ತಿಹಾರ್ ಜೈಲಿನ ಕೊಠಡಿಯೊಂದರಲ್ಲಿ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿವಿಯ ಸಫೂರ ಝರ್ಗಾರ್ ತನ್ನ ಮೊದಲ ರಮಝಾನ್ ದಿನವನ್ನು ಕಳೆದರು.

ತನ್ನ ಪ್ರಥಮ ಗರ್ಭಧಾರಣೆಯ 2ನೆ ತ್ರೈಮಾಸಿಕದಲ್ಲಿರುವ ಝರ್ಗಾರ್ ರನ್ನು ಕಠಿಣ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಎಪ್ರಿಲ್ 10ರಂದು ಬಂಧಿಸಲಾಗಿತ್ತು. ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಗಳನ್ನು ನಡೆಸಿದ್ದ ಜಾಮಿಯಾ ಕೋಆರ್ಡಿನೇಶನ್ ಸಮಿತಿಯ ಸದಸ್ಯರಾಗಿದ್ದರು ಝರ್ಗಾರ್.

ಶಾಂತಿಯುತ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಸಂಘಪರಿವಾರದ ದಾಳಿ ನಂತರ ದಿಲ್ಲಿಯಲ್ಲಿ ಸ್ಫೋಟಿಸಿದ ಗಲಭೆಗೆ ಸಂಚು ರೂಪಿಸಿದ್ದಾರೆ ಎಂದು ಝರ್ಗಾರ್ ಮೇಲೆ ಪೊಲೀಸರು ಆರೋಪ ಹೊರಿಸಿದ್ದಾರೆ. ಈ ಗಲಭೆಯಲ್ಲಿ 53 ಮಂದಿ ಪ್ರಾಣ ಕಳೆದುಕೊಂಡಿದ್ದು, ಇದರಲ್ಲಿ ಹೆಚ್ಚಿನವರು ಮುಸ್ಲಿಮರಾಗಿದ್ದಾರೆ.

ಝರ್ಗಾರ್ ಬಗ್ಗೆ ಮಾತನಾಡುವ ಅವರ ಶಿಕ್ಷಕರು, “ಆಕೆಯ ಶೈಕ್ಷಣಿಕ ದಾಖಲೆ ಮತ್ತು ಆಕೆಯ ವೈದ್ಯಕೀಯ ಪರಿಸ್ಥಿತಿಯನ್ನು ಪರಿಗಣಿಸಿ ನ್ಯಾಯಾಂಗವು ಶೀಘ್ರ ಬಿಡುಗಡೆಗೆ ಅವಕಾಶ ನೀಡಲಿದೆ” ಎಂದು ಹೇಳಿದ್ದಾರೆ.

ಕೊರೋನ ಬಿಕ್ಕಟ್ಟಿನ ನಡುವೆ ನಡೆಯುತ್ತಿರುವ ಬಂಧನವು ಸಿಎಎ ವಿರೋಧಿ ಆಂದೋಲನವು ಲಾಕ್ ಡೌನ್ ತೆಗೆದ ನಂತರ ಸದ್ದಿಲ್ಲದೆ ಕೊನೆಯಾಗಲು ನಡೆಸುತ್ತಿರುವ ತಂತ್ರವಾಗಿದೆ ಎಂದು ಜೆಸಿಸಿಯ ಸದಸ್ಯರೊಬ್ಬರು ಆರೋಪಿಸಿದ್ದಾರೆ.

ಫೆಬ್ರವರಿ 10ರಂದು ಝರ್ಗಾರ್ ಪೊಲೀಸ್ ಮತ್ತು ವಿದ್ಯಾರ್ಥಿಗಳ ನಡುವೆ ಸಂಘರ್ಷದ ಸಂದರ್ಭ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದರು.

“ಆನಂತರ ಆಕೆ ಗರ್ಭಿಣಿಯಾಗಿರುವ ಕಾರಣದಿಂದ ಎಲ್ಲಿಯೂ ಹೋಗದಂತೆ ಮನೆಯವರು ನಿರ್ಬಂಧಿಸಿದ್ದರು. ಕೋವಿಡ್ 19 ಸ್ಫೋಟಗೊಂಡ ನಂತರ ಅಗತ್ಯ ಕೆಲಸಗಳಿಗಲ್ಲದೆ ಬೇರೆ ಯಾವುದೇ ಕಾರಣಕ್ಕೂ ಮನೆಯಿಂದ ಹೊರಗೆ ಕಾಲಿಡುತ್ತಿರಲಿಲ್ಲ. ಆಕೆ ಮನೆಯಿಂದಲೇ ಕೆಲಸ ಮಾಡುತ್ತಿದ್ದರು” ಎಂದು ಝರ್ಗಾರ್ ರ ಪತಿ ಹೇಳಿದ್ದಾರೆ.

ತಿಹಾರ್ ಜೈಲು ಭಾರತದಲ್ಲಿ ಅತಿ ಹೆಚ್ಚು ಕೈದಿಗಳಿರುವ ಜೈಲಾಗಿದೆ. ಕೊರೋನ ವೈರಸ್ ಹಿನ್ನೆಲೆಯಲ್ಲಿ ಈಗಾಗಲೇ ದೇಶದ ಕೋರ್ಟ್ ಗಳು ವಿಚಾರಣೆಗೆ ಒಳಪಡದ ಕೈದಿಗಳ ಬಿಡುಗಡೆಗೆ ಆದೇಶಿಸಿದೆ. ಆದರೆ ಗಲಭೆ, ಶಸ್ತ್ರಾಸ್ತ್ರ ಸಂಗ್ರಹ, ಕೊಲೆಯತ್ನ, ಹಿಂಸಾಚಾರಕ್ಕೆ ಪ್ರಚೋದನೆ, ದೇಶದ್ರೋಹ, ಕೊಲೆ ಮತ್ತು ಧರ್ಮದ ಆಧಾರದಲ್ಲಿ 2 ಗುಂಪುಗಳ ನಡುವೆ ದ್ವೇಷ ಪ್ರಚೋದಿಸಿದ ಆರೋಪ ಸೇರಿದಂತೆ 18 ಆರೋಪಗಳನ್ನು ಎದುರಿಸುತ್ತಿರುವ ಝರ್ಗಾರ್ ರಿಗೆ ಈ ಅವಕಾಶ ನೀಡಿಲ್ಲ.

“ಮಕ್ಕಳು ಮತ್ತು ಮಹಿಳೆಯರು ಪ್ರತಿಭಟನೆಗೆ ಸೇರುವಂತೆ ಮಾಡಿದ ಆರೋಪವಿರುವ ಜಾಫ್ರಾಬಾದ್ ಪ್ರಕರಣದಲ್ಲಿ ನಾವು ಅವರಿಗೆ ಜಾಮೀನು ಪಡೆದಿದ್ದೆವು” ಎಂದು ಅವರ ವಕೀಲರು ತಿಳಿಸಿದ್ದಾರೆ.

ಆದರೆ ಅವರ ಬಿಡುಗಡೆಗೂ ಮುನ್ನ ಮತ್ತೊಂದು ಪ್ರಕರಣದಲ್ಲಿ ಪೊಲೀಸರು ಝರ್ಗಾರ್ ರನ್ನು ಬಂಧಿಸಿದ್ದಾರೆ. ಆಕೆಯ ವಿರುದ್ಧದ ಆರೋಪಗಳೇನು ಎನ್ನುವುದನ್ನು ತಿಳಿಸಲು ಕೂಡ ಪೊಲೀಸರು ನಿರಾಕರಿಸಿದರು. ಆಕೆಯ ವಿರುದ್ಧ ಯುಎಪಿಎ ಹೇರಿರುವುದರಿಂದ ಆರೋಪಗಳು ಏನೇನು ಎಂದು ತಿಳಿಸಬೇಕೆಂದು ಕೋರ್ಟ್ ಆದೇಶಿಸಿತ್ತು.

ಕೊರೋನ ವೈರಸ್ ಬಿಕ್ಕಟ್ಟಿನ ನಡುವೆ ನ್ಯಾಯಾಂಗ ಪ್ರಕ್ರಿಯೆಗಿರುವ ಕನಿಷ್ಟ ಅವಕಾಶಗಳ ಬಗ್ಗೆಯೂ ಕಳವಳಗಳು ವ್ಯಕ್ತವಾಗುತ್ತಿವೆ. ವಕೀಲರು ಮತ್ತು ಕುಟುಂಬ ಸದಸ್ಯರೂ ಸಹ ಜೈಲಿನಲ್ಲಿ ಭೇಟಿಯಾಗುವುದನ್ನು ಈಗಾಗಲೇ ನಿಷೇಧಿಸಲಾಗಿದೆ.

ಕೆಲವು ದಿನಗಳ ನಂತರ ವಕೀಲರು ಝರ್ಗಾರ್ ಜೊತೆ ಮಾತನಾಡಲು ಕೋರ್ಟ್ ಅವಕಾಶ ನೀಡಿತ್ತು.               

“ಕ್ವಾರಂಟೈನ್ ಹೆಸರಲ್ಲಿ ಝರ್ಗಾರ್ ರನ್ನು ಏಕಾಂಗಿಯಾಗಿ ಇರಿಸಿದ್ದನ್ನು ಕೇಳಿ ಆಘಾತಗೊಂಡೆ. ಇದರಿಂದ ಆಕೆಯು ಮೇಲಾಗುವ ಮಾನಸಿಕ ಸಮಸ್ಯೆಗಳ ಬಗ್ಗೆ ನೀವು ಆಲೋಚಿಸಿದ್ದೀರಾ? ತನ್ನ ಪತಿಯ ಜೊತೆ ಮಾತನಾಡಲು 5 ಬಾರಿ ಪ್ರಯತ್ನಿಸಿದ್ದು, ಕೋವಿಡ್ 19 ಶಿಷ್ಟಾಚಾರಗಳ ಹೆಸರಲ್ಲಿ ಅವಕಾಶ ನಿರಾಕರಿಸಲಾಯಿತು ಎಂದವರು ತಿಳಿಸಿದರು” ಎಂದು ವಕೀಲರು ಮಾಹಿತಿ ನೀಡಿದ್ದಾರೆ.

ಕೃಪೆ: aljazeera.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News