68,000 ಕೋಟಿ ರೂ. ಸಾಲ ವಜಾಗೊಳಿಸಿದ ಆರ್‌ಬಿಐ: ಬಾಕಿ ಉಳಿಸಿದವರ ಪಟ್ಟಿಯಲ್ಲಿ ಮೆಹುಲ್ ಚೋಕ್ಸಿ ಅಗ್ರ

Update: 2020-04-27 16:46 GMT

ಹೊಸದಿಲ್ಲಿ, ಎ.27: 2019ರ ಸೆಪ್ಟೆಂಬರ್ 30ರವರೆಗಿನ ಅವಧಿಯಲ್ಲಿ 68,607 ಕೋಟಿ ರೂ. ಮೊತ್ತದ ಸಾಲವನ್ನು ಲೆಕ್ಕಪತ್ರದಿಂದ ತೊಡೆದುಹಾಕಲಾಗಿದೆ(ವಜಾಗೊಳಿಸಲಾಗಿದೆ) ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಿಳಿಸಿದೆ.

ಅಗ್ರ 50 ಉದ್ದೇಶಪೂರ್ವಕ ಸುಸ್ತಿದಾರರ(ಸಾಲ ಮರುಪಾವತಿಗೆ ಬಾಕಿ ಇರಿಸಿಕೊಂಡಿರುವವರ) ಪಟ್ಟಿಯಲ್ಲಿ ತಲೆಮರೆಸಿಕೊಂಡಿರುವ ವಜ್ರೋದ್ಯಮಿ ಮೆಹುಲ್ ಚೋಕ್ಸಿಯ ಸಂಸ್ಥೆ ಗೀತಾಂಜಲಿ ಜೆಮ್ಸ್ (5,492 ಕೋಟಿ ರೂ. ಬಾಕಿ), ಅವರದೇ ಒಡೆತನದ ಗಿಲಿ ಇಂಡಿಯಾ ಲಿ. ಮತ್ತು ನಕ್ಷತ್ರ ಬ್ರಾಂಡ್ ಲಿ. ಸಂಸ್ಥೆಗಳು (ಕ್ರಮವಾಗಿ 1,447 ಕೋಟಿ ರೂ. ಮತ್ತು 1,109 ಕೋಟಿ ರೂ.ಯೊಂದಿಗೆ ) ಪ್ರಥಮ ಸ್ಥಾನದಲ್ಲಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಸಾಕೇತ್ ಗೋಖಲೆ ಸಲ್ಲಿಸಿದ್ದ ಅರ್ಜಿಗೆ ಉತ್ತರವಾಗಿ ಆರ್‌ಬಿಐಯ ಕೇಂದ್ರ ಸಾರ್ವಜನಿಕ ಸಂಪರ್ಕಾಧಿಕಾರಿ ಅಭಯ್ ಕುಮಾರ್ ಮಾಹಿತಿ ನೀಡಿದ್ದಾರೆ.

ಆರ್‌ಇಐ ಆಗ್ರೊ ಲಿ.ಸಂಸ್ಥೆ 4,314 ಕೋಟಿ ರೂ. ಸಾಲದೊಂದಿಗೆ ದ್ವಿತೀಯ, ತಲೆಮರೆಸಿಕೊಂಡಿರುವ ಸ್ವರ್ಣೋದ್ಯಮಿ ಜತಿನ್ ಮೆಹ್ತಾರ ವಿನ್‌ಸಮ್ ಡೈಮಂಡ್ಸ್ 4,076 ಕೋಟಿ ರೂ. ಸಾಲದೊಂದಿಗೆ ತೃತೀಯ, ರೊಟೊಮ್ಯಾಕ್ ಗ್ಲೋಬಲ್ ಪ್ರೈ.ಲಿ. ಸಂಸ್ಥೆ 2,850 ಕೋಟಿ ರೂ, ಕುಡೋಸ್ ಕೆಮೀ, ಪಂಜಾಬ್ 2,326 ಕೋಟಿ ರೂ, ಬಾಬಾ ರಾಮ್‌ದೇವ್ ಸಮೂಹದ ಸಂಸ್ಥೆ ರುಚಿ ಸೋಯಾ ಇಂಡಸ್ಟ್ರೀಸ್ ಇಂದೋರ್ 2,212 ಕೋಟಿ ರೂ, ಗ್ವಾಲಿಯರ್‌ನ ಝೂಮ್ ಡೆವಲಪರ್ಸ್ ಪ್ರೈ.ಲಿ. 2,012 ಕೋಟಿ ರೂ. ಸಾಲ ಬಾಕಿ ಇರಿಸಿಕೊಂಡಿದೆ.

1000 ಕೋಟಿ ಸುಸ್ತಿದಾರರ ವಿಭಾಗದಲ್ಲಿ 18 ಕಂಪೆನಿಗಳಿವೆ. ಇದರಲ್ಲಿ ಹರೀಶ್ ಆರ್ ಮೆಹ್ತಾರ ಫಾರ್‌ಎವರ್ ಪ್ರೆಷಿಯಸ್ ಜುವೆಲ್ಲರಿ ಆ್ಯಂಡ್ ಡೈಮಂಡ್ಸ್ ಲಿ.(1,962 ಕೋಟಿ ರೂ), ತಲೆಮರೆಸಿಕೊಂಡಿರುವ ವಿಜಯ್ ಮಲ್ಯರ ಕಿಂಗ್‌ಫಿಷರ್ ಏರ್‌ಲೈನ್ಸ್ (1,943 ಕೋಟಿ ರೂ.) ಸೇರಿದೆ. 1000 ಕೋಟಿಗಿಂತ ಕಡಿಮೆ ಸಾಲ ಬಾಕಿ ಇರಿಸಿಕೊಂಡಿರುವ ಪಟ್ಟಿಯಲ್ಲಿ 25 ಸಂಸ್ಥೆಗಳಿವೆ. ಅಗ್ರ 50 ಸುಸ್ತಿದಾರರ ಪಟ್ಟಿಯಲ್ಲಿ ಮೊದಲಿನ ಆರು ಸ್ಥಾನದಲ್ಲಿ ಸ್ವರ್ಣೋದ್ಯಮ ಸಂಸ್ಥೆಗಳೇ ಸ್ಥಾನ ಪಡೆದಿವೆ. ಅಗ್ರ ಸುಸ್ತಿದಾರರು ಕಳೆದ ಹಲವು ವರ್ಷಗಳಿಂದ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಸಾಲ ಮರುಪಾವತಿಸಿಲ್ಲ. ಹಲವು ಸಂಸ್ಥೆಗಳ ಮಾಲಕರು ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ ಅಥವಾ ತನಿಖಾ ಸಂಸ್ಥೆಗಳಿಂದ ಕಾನೂನು ಕ್ರಮವನ್ನು ಎದುರಿಸುತ್ತಿದ್ದಾರೆ ಎಂದು ಅರ್ಜಿ ದಾಖಲಿಸಿರುವ ಗೋಖಲೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News