ತಪ್ಪೆಸಗಿದ ಅಧಿಕಾರಿಗಳನ್ನು ಶಿಕ್ಷಿಸುವಲ್ಲಿ ತಾರತಮ್ಯ: ಬಿಹಾರ ಪೊಲೀಸರ ಸಂಘದ ಆಕ್ಷೇಪ

Update: 2020-04-27 17:44 GMT

ಪಾಟ್ನ, ಎ.27: ತಪ್ಪು ಮಾಡಿದ ಸಿಬ್ಬಂದಿಗಳನ್ನು ಶಿಕ್ಷಿಸುವಾಗಲೂ ಸರಕಾರ ತಾರತಮ್ಯ ಎಸಗುತ್ತಿದೆ ಎಂದು ಬಿಹಾರ ಪೊಲೀಸರ ಸಂಘದ ಪದಾಧಿಕಾರಿಗಳು ದೂರಿದ್ದಾರೆ.

ಲಾಕ್‌ಡೌನ್ ಸಂದರ್ಭ ಅರಾರಿಯಾ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗೃಹರಕ್ಷಕ ದಳ(ಹೋಂಗಾರ್ಡ್) ಸಿಬ್ಬಂದಿಯೊಬ್ಬರು , ಆ ಮಾರ್ಗದಲ್ಲಿ ಬಂದ ಕೃಷಿ ಅಧಿಕಾರಿಯ ವಾಹನವನ್ನು ತಡೆದು ಪಾಸ್ ತೋರಿಸುವಂತೆ ಕೋರಿದ್ದರು. ಈ ಬಗ್ಗೆ ಆಕ್ಷೇಪಿಸಿದ ಅಧಿಕಾರಿ, ಹೋಂಗಾರ್ಡ್ ಸಿಬಂದಿಗೆ ಬಸ್ಕಿ ಹೊಡೆಯುವ ಶಿಕ್ಷೆ ವಿಧಿಸಿದ್ದರು. ಈ ಘಟನೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ, ಜಿಲ್ಲಾಧಿಕಾರಿ ರಾಜ್ಯದ ಗೃಹ ಇಲಾಖೆಗೆ ವಿವರವಾದ ವರದಿಯನ್ನು ಸಲ್ಲಿಸಿದ್ದರು.

ವರದಿಯ ಹಿನ್ನೆಲೆಯಲ್ಲಿ, ಕೃಷಿ ಇಲಾಖೆಯ ಹಿರಿಯ ಅಧಿಕಾರಿ ಮನೋಜ್ ಕುಮಾರ್‌ರನ್ನು ವರ್ಗಾಯಿಸಲಾಗಿದ್ದರೆ, ಕಿರಿಯ ಅಧಿಕಾರಿ ರಾಜೀವ್ ಕುಮಾರ್ ಮತ್ತು ಸಹಾಯಕ ಸಬ್‌ಇನ್ಸ್‌ಪೆಕ್ಟರ್ ಗೋವಿಂದ್ ಸಿಂಗ್‌ರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಈ ಬಗ್ಗೆ ಆಕ್ಷೇಪ ಎತ್ತಿರುವ ಬಿಹಾರ ಪೊಲೀಸರ ಸಂಘ, ಕೃಷಿ ಅಧಿಕಾರಿಗೆ ಎಚ್ಚರಿಕೆ ನೀಡಿ ವರ್ಗಾಯಿಸಲಾಗಿದೆ. ಆದರೆ ಎಎಸ್‌ಐ ಗೋವಿಂದ್ ಸಿಂಗ್‌ರನ್ನು ಅಮಾನತುಗೊಳಿಸಲಾಗಿದೆ. ಇದು ತಾರತಮ್ಯದ ಕ್ರಮವಾಗಿದೆ ಎಂದು ದೂರಿದೆ.

 ಮೂವರು ಅಧಿಕಾರಿಗಳ ವಿರುದ್ಧವೂ ಎಫ್‌ಐಆರ್ ದಾಖಲಿಸಲಾಗಿದೆ. ಮನೋಜ್ ಕುಮಾರ್ ಮತ್ತು ರಾಜೀವ್ ಕುಮಾರ್ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಲಾಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News