×
Ad

ಚೀನಾದ ಕೊರೋನ ಪರೀಕ್ಷೆಯ ಕಿಟ್‌ಗಳ ಆಮದು ರದ್ದು: ಕೇಂದ್ರ ಸರಕಾರದ ಹೇಳಿಕೆ

Update: 2020-04-27 23:26 IST

ಹೊಸದಿಲ್ಲಿ, ಎ.27: ಕೊರೋನ ವೈರಸ್ ಸೋಂಕು ಪರೀಕ್ಷೆಗೆ ಚೀನಾದಿಂದ ಆಮದು ಮಾಡಿಕೊಳ್ಳುವ ತ್ವರಿತ ಪರೀಕ್ಷಾ ಕಿಟ್‌ಗಳ ಗುಣಮಟ್ಟದ ಬಗ್ಗೆ ವ್ಯಾಪಕ ದೂರು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ವ್ಯಾಪಾರಾದೇಶ(ಸರಕುಗಳ ಪೂರೈಕೆಯ ಆರ್ಡರ್)ವನ್ನು ರದ್ದುಗೊಳಿಸಲಾಗಿದೆ ಎಂದು ಕೇಂದ್ರ ಸರಕಾರ ಹೇಳಿದ್ದು, ಕಿಟ್‌ಗಳ ಪೂರೈಕೆಗೆ ಇದುವರೆಗೆ ಯಾವುದೇ ಹಣ ಪಾವತಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದೆ.

  ಚೀನಾದಿಂದ ಆಮದು ಮಾಡಿಕೊಳ್ಳುವ ಕಿಟ್‌ಗಳಿಗೆ ಭಾರತವು ದುಪ್ಪಟ್ಟು ದರ ಪಾವತಿಸುತ್ತಿರುವ ಕಾರಣ ಕಿಟ್‌ಗಳಿಗೆ ಬೆಲೆ ನಿಗದಿಗೊಳಿಸಲಾಗುವುದು ಎಂದು ದಿಲ್ಲಿ ಹೈಕೋರ್ಟ್ ರವಿವಾರ ನಿರ್ದೇಶನ ನೀಡಿದ ಮರುದಿನವೇ ಕೇಂದ್ರ ಸರಕಾರದ ಈ ಸ್ಪಷ್ಟನೆ ಹೊರಬಿದ್ದಿದೆ. ಅಲ್ಲದೆ ಕಿಟ್‌ಗಳನ್ನು ಬಳಸದಂತೆ ನೋಡಲ್ ಏಜೆನ್ಸಿ ಎಲ್ಲಾ ರಾಜ್ಯಗಳಿಗೂ ಸೂಚನೆ ನೀಡಿದೆ.

 ಚೀನಾದ ಗ್ವಾಂಗ್‌ರೊ ವುಂಡ್‌ಫೊ ಬಯೊಟೆಕ್ ಮತ್ತು ಝುಹಾಯ್ ಲಿವ್‌ರೊನ್ ಡಯಗ್ನೊಸ್ಟಿಕ್ಸ್ ಸಂಸ್ಥೆಗಳು ತಯಾರಿಸಿದ ಕಿಟ್‌ಗಳು ದೋಷಯುಕ್ತವಾಗಿರುವುದಾಗಿ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ವರದಿ ನೀಡಿದೆ. ಪೂರ್ಣ ಮುಂಗಡ ಪಾವತಿಸದೆ ಸರಿಯಾದ ಪ್ರಕ್ರಿಯೆ ಅನುಸರಿಸಿದ ಕಾರಣ ಸರಕಾರಕ್ಕೆ ಒಂದು ರೂಪಾಯಿಯೂ ನಷ್ಟವಾಗಿಲ್ಲ ಎಂದು ಐಸಿಎಂಆರ್ ಹೇಳಿದೆ.

ಮ್ಯಾಟ್ರಿಕ್ಸ್ ಎಂಬ ಸಂಸ್ಥೆ ಪ್ರತೀ ಕಿಟ್‌ಗೆ 245 ರೂ.ಯಂತೆ ಚೀನಾದಿಂದ ಭಾರತಕ್ಕೆ ಆಮದು ಮಾಡಿಕೊಂಡಿದೆ. ಆದರೆ ರಿಯಲ್ ಮೆಟಬಾಲಿಕ್ಸ್ ಮತ್ತು ಆರ್ಕ್ ಫಾರ್ಮಸ್ಯೂಟಿಕಲ್ಸ್ ಎಂಬ ವಿತರಕರು ಇದನ್ನು ಸರಕಾರಕ್ಕೆ ತಲಾ 600 ರೂ.ಯಂತೆ ಮಾರಿದ್ದಾರೆ ಎಂಬ ವರದಿಯ ಹಿನ್ನೆಲೆಯಲ್ಲಿ, ಈ ಕಿಟ್‌ಗಳಿಗೆ 400 ರೂ. ಗರಿಷ್ಟ ಮಾರಾಟ ದರವನ್ನು ದಿಲ್ಲಿ ಹೈಕೋರ್ಟ್ ನಿಗದಿಗೊಳಿಸಿತ್ತು.

ಜಾಗತಿಕ ಮಾರುಕಟ್ಟೆಯಲ್ಲಿ ಕೊರೋನ ಪರೀಕ್ಷೆಯ ಕಿಟ್‌ಗಳಿಗೆ ಬೇಡಿಕೆ ಹೆಚ್ಚಿದ್ದ ಸಂದರ್ಭದಲ್ಲಿ, ಮತ್ತು ವಿವಿಧ ದೇಶಗಳು ಇವನ್ನು ಪಡೆಯಲು ಶಕ್ತಿ ಮೀರಿ ಪ್ರಯತ್ನಿಸಿದ್ದ ಸಂದರ್ಭದಲ್ಲಿ ಈ ಕಿಟ್‌ಗಳನ್ನು ಆಮದು ಮಾಡಿಕೊಳ್ಳಲಾಗಿದೆ. ಚೀನಾದಿಂದ ನೇರವಾಗಿ ಆಮದು ಮಾಡಿಕೊಂಡಿದ್ದರೆ 100% ಹಣ ಮುಂಗಡ ಪಾವತಿಸಬೇಕಿತ್ತು. ಆದರೆ ಏಜೆನ್ಸಿಯ ಮೂಲಕ ಆಮದು ಮಾಡಿಕೊಂಡಿದ್ದರಿಂದ ಮುಂಗಡ ಪಾವತಿಸಿಲ್ಲ ಎಂದು ಸರಕಾರ ಹೈಕೋರ್ಟ್‌ಗೆ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News