ಕೊರೋನ ಅಲ್ಪ ಲಕ್ಷಣಗಳಿರುವ ರೋಗಿಗಳು ಮನೆಯಲ್ಲೇ ಐಸೊಲೇಶನ್ ನಲ್ಲಿರುವುದು ಹೇಗೆ?
ಹೊಸದಿಲ್ಲಿ: ಕೊರೋನವೈರಸ್ ಸೋಂಕಿನ ಅಲ್ಪ ಲಕ್ಷಣಗಳನ್ನು ಹೊಂದಿರುವ ಅಥವಾ ಕೊರೋನ ಸೋಂಕಿನ ಯಾವುದೇ ಪೂರ್ವ ಲಕ್ಷಣಗಳು ಕಾಣಿಸಿಕೊಳ್ಳದ ರೋಗಿಗಳು ಮನೆಯಲ್ಲಿಯೇ ಐಸೊಲೇಶನ್ ನಲ್ಲಿರಬಹುದಾದ ಕುರಿತಂತೆ ಕೇಂದ್ರ ಗೃಹ ಸಚಿವಾಲಯ ಹೊಸ ಮಾರ್ಗಸೂಚಿಗಳನ್ನು ನೀಡಿದೆ. ಸದ್ಯ ಕೊರೋನ ಪಾಸಿಟಿವ್ ಆದ ಎಲ್ಲರನ್ನೂ ತಕ್ಷಣ ಪ್ರತ್ಯೇಕಿಸಿ ಆಸ್ಪತ್ರೆಗಳಿಗೆ ದಾಖಲಿಸಲಾಗುತ್ತದೆ.
ಹೊಸ ಮಾರ್ಗಸೂಚಿಯಂತೆ ಯಾರು ಹೋಂ ಐಸೊಲೇಶನ್‍ಗೆ ಅರ್ಹರು ?
*ಕೊರೋನ ಸೋಂಕಿನ ಅಲ್ಪ ಲಕ್ಷಣಗಳು/ ಯಾವುದೇ ಪೂರ್ವ ಲಕ್ಷಣಗಳಿಲ್ಲ ಎಂದು ವೈದ್ಯರು ನಿರ್ಧರಿಸಿದ್ದಲ್ಲಿ ಸಂಬಂಧಿತ ರೋಗಿಯನ್ನು ಗೃಹ ಐಸೊಲೇಶನ್ ನಲ್ಲಿರಿಸಬಹುದು.
* ಮನೆಯಲ್ಲಿಯೇ ಐಸೊಲೇಶನ್ ಗೆ ಸ್ಥಳವಿರುವವರು ಹಾಗೂ ಇತರ ಕುಟುಂಬ ಸದಸ್ಯರ ಕ್ವಾರಂಟೈನಿಗೆ ವ್ಯವಸ್ಥೆಯಿರುವವರು ಈ ಆಯ್ಕೆ ಮಾಡಬಹುದು.
* ಆದರೆ ರೋಗಿಯ ಆರೈಕೆಗೆ ದಿನದ 24 ಗಂಟೆಯೂ ಒಬ್ಬರು ಲಭ್ಯರಿರಬೇಕು. ಗೃಹ ಐಸೊಲೇಶನ್‍ನ ಸಂಪೂರ್ಣ ಅವಧಿಯಲ್ಲಿ ರೋಗಿಯ ಆರೈಕೆ ಮಾಡುವವರು ಹಾಗೂ ಆಸ್ಪತ್ರೆಯ ನಡುವೆ ಸಂಪರ್ಕವಿರಬೇಕು.
* ರೋಗಿಯ ಆರೈಕೆ ಮಾಡುವವರು ಹಾಗೂ ಹತ್ತಿರದ ಸಂಪರ್ಕಗಳು ನಿಯಮದಂತೆ ಹೈಡ್ರೋಕ್ಸಿಕ್ಲೊರೊಕ್ವಿನ್ ಪ್ರೊಫಿಲಾಕ್ಸಿಸ್ ಔಷಧಿಯನ್ನು ವೈದ್ಯರ ನಿರ್ದೇಶನದಂತೆ ಸೇವಿಸಬೇಕು.
* ಸರಕಾರದ ಆರೋಗ್ಯ ಸೇತು ಆ್ಯಪ್ ಡೌನ್ ಲೋಡ್ ಮಾಡಬೇಕು ಹಾಗೂ ಈ ಆ್ಯಪ್ ಬ್ಲೂಟೂಥ್ ಅಥವಾ ವೈಫೈ ಮೂಲಕ ಸದಾ ಸಕ್ರಿಯವಾಗಿರಬೇಕು.
* ರೋಗಿ ತನ್ನ ಆರೋಗ್ಯ ಸ್ಥಿತಿಯ ಬಗ್ಗೆ ಅಧಿಕಾರಿಗಳಿಗೆ ಸದಾ ಮಾಹಿತಿ ನೀಡಬೇಕು.
* ಸ್ವಯಂ ಐಸೊಲೇಶನ್ ಹಾಗೂ ಗೃಹ ಕ್ವಾರಂಟೈನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುವುದು ಎಂಬ ಕುರಿತು ರೋಗಿ ಲಿಖಿತ ದಾಖಲೆಗೆ ಸಹಿ ಹಾಕಬೇಕಿದೆ.
* ಒಂದು ವೇಳೆ ರೋಗಿಯಲ್ಲಿನ ಸೋಂಕಿನ ಲಕ್ಷಣಗಳು ಗಂಭೀರವಾದಲ್ಲಿ, ಉಸಿರಾಟದ ಸಮಸ್ಯೆ ಕಾಣಿಸಿದಲ್ಲಿ ತಕ್ಷಣ ವೈದ್ಯಕೀಯ ಸಹಾಯ ಪಡೆಯತಕ್ಕದ್ದು.