ಕೊರೋನ ಬಿಕ್ಕಟ್ಟಿನಿಂದ ಹೈರಾಣಾದ ರೈತರಿಗೆ ಬೇಕಿದೆ ಸಹಾಯ ಹಸ್ತ

Update: 2020-04-29 05:00 GMT

ಕೊರೋನ ವೈರಸ್ ಉಂಟು ಮಾಡಿದ ಬಿಕ್ಕಟ್ಟಿನಿಂದ ಜಗತ್ತಿನ ಬಹುತೇಕ ದೇಶಗಳಂತೆ ಭಾರತವೂ ತತ್ತರಿಸಿ ಹೋಗಿದೆ. ಕೋವಿಡ್-19 ಪರಿಣಾಮವಾಗಿ ಇಡೀ ದೇಶ ದಿಗ್ಬಂಧನದಲ್ಲಿದೆ. ಇಂತಹ ಅಸಹಜ ಸನ್ನಿವೇಶದಲ್ಲಿ ಈ ವರ್ಷ ಮುಂಗಾರು ಮಳೆ ಎಂದಿನಂತೆ ಭರವಸೆದಾಯಕವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.ರಾಜ್ಯದಲ್ಲೂ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ. ಜೂನ್ ಮೊದಲ ವಾರದಲ್ಲಿ ಮುಂಗಾರು ಕೇರಳವನ್ನು ಪ್ರವೇಶಿಸಲಿದೆ. ಮುಂದಿನ 4_5 ದಿನಗಳಲ್ಲಿ ಕರ್ನಾಟಕಕ್ಕೂ ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಅಂದಾಜು ನಿಜವಾದರೆ ಇಂದಿನ ಆರ್ಥಿಕ ಬಿಕ್ಕಟ್ಟಿನಿಂದ ಪಾರಾಗಿ ಉಸಿರಾಡಲು ಅವಕಾಶ ದೊರಕಬಹುದು. ಹವಾಮಾನ ಇಲಾಖೆ ನೀಡಿದ ವರದಿಯಂತೆ ಮಳೆಯಾಗುತ್ತದೆ ಎಂದು ಹೇಳಲಾಗುವುದಿಲ್ಲ.ಆದರೂ ನಾವು ಆಶಾ ಭಾವನೆಯನ್ನು ಕಳೆದುಕೊಳ್ಳಬಾರದು.

 ಈ ವರ್ಷ ಲಾಕ್‌ಡೌನ್ ಪರಿಣಾಮವಾಗಿ ಹಣ್ಣು,ತರಕಾರಿಯಂತಹ ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ತರಲು ರೈತರಿಗೆ ಸಾಧ್ಯವಾಗಲಿಲ್ಲ. ಕರ್ನಾಟಕದಲ್ಲಂತೂ ಕೊರೋನ ವೈರಸ್ ಜೊತೆಗೆ ಕೋಮು ವೈರಸ್ ಕೂಡ ಬೆಳೆಗಾರರನ್ನು ಕಾಡುತ್ತಿದೆ. ಮುಸಲ್ಮಾನರ ಬಳಿ ತರಕಾರಿ ,ಹಣ್ಣು ಹಂಪಲು ಕೊಳ್ಳಬೇಡಿ ಎಂದು ಕೆಲವು ದುಷ್ಟ ಶಕ್ತಿಗಳು ಮಾಡಿದ ವ್ಯವಸ್ಥಿತ ಪ್ರಚಾರದಿಂದ ರೈತರ ಮೇಲೆ ದುಷ್ಪರಿಣಾಮ ಉಂಟಾಗಿದೆ. ಸಾಮಾನ್ಯವಾಗಿ ರೈತರು ಬೆಳೆಯುವ ತರಕಾರಿ, ಹಣ್ಣು ಹಂಪಲುಗಳನ್ನು ಬಡ ಮುಸ್ಲಿಮ್ ಮಹಿಳೆಯರು ಮತ್ತು ಹಣ್ಣಿನ ಅಂಗಡಿ ಹೊಂದಿರುವ ಮುಸ್ಲಿಮರು ಪೇಟೆಗೆ ತಂದು ಮಾರಾಟ ಮಾಡುತ್ತಾರೆ. ಈ ಬಾರಿ ಒಂದೆಡೆ ಕೊರೋನ ಹಾಗೂ ಇನ್ನೊಂದೆಡೆ ಕುತ್ಸಿತ ಪ್ರಚಾರದಿಂದ ಅನೇಕ ಕಡೆ ತರಕಾರಿ ಮಾರಾಟವಾಗದೆ ಕೊಳೆತು ಹೋಯಿತು.ಬಹುತೇಕ ಕಡೆ ಕಲ್ಲಂಗಡಿ, ದ್ರಾಕ್ಷಿ,ಟೊಮ್ಯಾಟೊಗಳನ್ನು ಮಾರುಕಟ್ಟೆಗೆ ಸಾಗಿಸಲು ವಾಹನ ಸಿಗದೆ ತಿಪ್ಪೆಗೆ ಎಸೆದ ನೂರಾರು ಉದಾಹರಣೆಗಳಿವೆ.

ಭಾರತ ಕೃಷಿ ಪ್ರಧಾನ ದೇಶ. ಇಲ್ಲಿನ ಆರ್ಥಿಕತೆಯ ಬೆನ್ನೆಲುಬು ಒಕ್ಕಲುತನವೇ ಆಗಿದೆ. ಆದರೆ ಜಾಗತೀಕರಣದ ಆರ್ಥಿಕ ನೀತಿಯ ನಂತರ ಗ್ರಾಮೀಣ ಆರ್ಥಿಕತೆ ಸಂಪೂರ್ಣ ಕಡೆಗಣಿಸಲ್ಪಟ್ಟಿತು. ಔದ್ಯಮೀಕರಣದ ಭರಾಟೆಯಲ್ಲಿ ಒಕ್ಕಲುತನ ತತ್ತರಿಸಿಹೋಗುತ್ತಾ ಬಂತು. ಆದರೆ ಕೊರೋನ ನಾವು ಕಟ್ಟಿಕೊಂಡಿದ್ದ ನವ ಉದಾರವಾದದ ಹುಸಿ ಆರ್ಥಿಕತೆಗೆ ಚೇತರಿಸಲಾಗದ ಪೆಟ್ಟು ನೀಡಿದೆ. ಅನಿರ್ದಿಷ್ಟವಾಗಿ ಮುಂದುವರಿಯುತ್ತಿರುವ ಲಾಕ್‌ಡೌನ್‌ನಿಂದ ವ್ಯಾಪಾರ ವಹಿವಾಟುಗಳ ಮೇಲೆ ದುಷ್ಪರಿಣಾಮ ಉಂಟಾಗಿದೆ. ಈಗ ಆರ್ಥಿಕ ವ್ಯವಸ್ಥೆಯ ಪುನಶ್ಚೇತನಕ್ಕಾಗಿ ಕೃಷಿಯನ್ನೇ ಅವಲಂಬಿಸಬೇಕಾಗಿದೆ.ಕಾರಣ ಸರಕಾರ ಮುಂಗಾರು ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ಅಗತ್ಯದ ತಯಾರಿಯನ್ನು ಮಾಡಿಕೊಳ್ಳಬೇಕಾಗಿದೆ. ಕೊರೋನ ಲಾಕ್‌ಡೌನ್ ಪರಿಣಾಮವಾಗಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಕೆಗೆ ವ್ಯತ್ಯಯ ಉಂಟಾಗಿದೆ. ಅಂತರ್‌ರಾಜ್ಯ ಸರಕು ಸಾಗಣೆ ನಿಂತು ಹೋದ ಪರಿಣಾಮವಾಗಿ ಕೃಷಿಗೆ ಬೇಕಾದ ಬಿತ್ತನೆ ಬೀಜ ಮತ್ತು ರಸಗೊಬ್ಬರಗಳನ್ನು ಸಾಗಿಸುವ ವಾಹನಗಳ ಸಂಚಾರವೂ ಸ್ಥಗಿತಗೊಂಡಿತ್ತು. ಈಗ ಕೃಷಿ ಚಟುವಟಿಕೆಗಳ ಮೇಲಿನ ನಿರ್ಬಂಧವನ್ನು ತೆರವುಗೊಳಿಸಲಾಗಿದೆ. ಆದರೆ ರೈತರ ಸಮಸ್ಯೆಗಳು ಸಂಪೂರ್ಣ ನಿವಾರಣೆಯಾಗಿಲ್ಲ. ಕಟಾವಾದ ಬೆಳೆ ಮಾರಾಟವಾಗದೆ ರೈತರು ಕಂಗಾಲಾಗಿದ್ದಾರೆ. ಕೆಲವು ರೈತರಿಗೆ ಹಿಂಗಾರಿನಲ್ಲಿ ಬೆಳೆದ ಫಸಲನ್ನು ಮಾರಾಟ ಮಾಡಲು ಆಗಿಲ್ಲ. ಕೃಷಿ ಇಲಾಖೆ ಇತ್ತ ಗಮನಕೊಡಬೇಕಾಗಿದೆ.

ಸರಕಾರ ಎಚ್ಚರಿಕೆ ವಹಿಸಿ ಹಣ್ಣು, ತರಕಾರಿ ಮಾರಾಟಕ್ಕೆ ಇರುವ ಅಡ್ಡಿ ಆತಂಕಗಳನ್ನು ನಿವಾರಿಸಲು ಯತ್ನಿಸಿತಾದರೂ ಅದರಿಂದ ಬೆಳೆಗಾರರಿಗೆ ಹೆಚ್ಚಿನ ಪ್ರಯೋಜನವಾಗಿಲ್ಲ. ಆದರೆ ಕೆಲ ಜನಪ್ರತಿನಿಧಿಗಳು ತಾವೇ ರೈತರಿಂದ ನೇರವಾಗಿ ಖರೀದಿ ಮಾಡಿ ತಮ್ಮ ಕ್ಷೇತ್ರದ ಜನರಿಗೆ ಉಚಿತವಾಗಿ ಹಂಚುತ್ತಿರುವುದು ಕೂಡ ಸ್ವಾಗತಾರ್ಹ ಕ್ರಮವಾಗಿದೆ.

ರಾಜ್ಯದ ಅನೇಕ ಕಡೆ ಮುಂಗಾರು ಪೂರ್ವ ಮಳೆ ಆಶಾದಾಯಕವಾಗಿದೆ.ವಿಜಯಪುರ, ಬಾಗಲಕೋಟೆ, ಬೀದರ್, ಚಿತ್ರದುರ್ಗ ಭಾಗದಲ್ಲಿ ಚೆನ್ನಾಗಿ ಮಳೆಯಾಗಿದೆ. ಕೆಲವು ಕಡೆ ಹೆಸರು, ಎಳ್ಳು, ಉದ್ದು ಮುಂತಾದ ಧಾನ್ಯಗಳ ಬಿತ್ತನೆ ಕಾರ್ಯವೂ ಆರಂಭವಾಗಿದೆ. ಈ ಮುಂಗಾರು ಮಳೆ ನಿರೀಕ್ಷಿಸಿದಂತೆ ಬಿದ್ದರೆ ರೈತರ ಮುಖದಲ್ಲಿ ಮಂದಹಾಸ ಮೂಡುವುದು ಮಾತ್ರವಲ್ಲ, ಕೊರೋನ ಹೊಡೆತದಿಂದ ತತ್ತರಿಸಿದ ದೇಶದ ಆರ್ಥಿಕತೆಗೂ ಅನುಕೂಲವಾಗಲಿದೆ.

 ಸರಕಾರ ಮುಂಗಾರಿನ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಾಗಿದೆ.ಅದಕ್ಕಾಗಿ ಈ ಕೂಡಲೇ ಸಿದ್ಧತೆ ಮಾಡಿಕೊಳ್ಳಬೇಕು. ಸರಕಾರದ ಬಳಿ ಬಿತ್ತನೆ ಬೀಜದ ದಾಸ್ತಾನು ಸಾಕಷ್ಟಿದೆ.ಮಳೆಗಾಲ ಆರಂಭವಾಗುವ ಸಮಯದಲ್ಲಿ ರೈತರಿಗೆ ಬೇಕಾದ ಬಿತ್ತನೆ ಬೀಜಗಳನ್ನು ಮತ್ತು ರಸಗೊಬ್ಬರವನ್ನು ರೈತರಿಗೆ ಸಕಾಲದಲ್ಲಿ ಒದಗಿಸಲು ಕ್ರಮ ಕೈಗೊಳ್ಳಬೇಕು. ಲಾಕ್‌ಡೌನ್ ಪರಿಣಾಮವಾಗಿ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲಾಗದೆ ಹತಾಶರಾಗಿದ್ದಾರೆ. ಇಂತಹ ಸನ್ನಿವೇಶದಲ್ಲಿ ರೈತರಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಖರೀದಿಸಲು ಹಣವಿರುವುದಿಲ್ಲ. ಆದುದರಿಂದ ತೊಂದರೆಯಲ್ಲಿರುವ ರೈತರಿಗೆ ಸರಕಾರ ಸಾಲ ಮತ್ತು ಸಬ್ಸಿಡಿ ರೂಪದಲ್ಲಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಸಲು ಮುಂದಾಗಲಿ. ದೇಶಕ್ಕೆ ವಂಚನೆ ಮಾಡಿ ವಿದೇಶಕ್ಕೆ ಹಾರಿದ ಖದೀಮ ಬಂಡವಾಳಿಗರ 68 ಸಾವಿರ ಕೋಟಿ ರೂಪಾಯಿ ಸಾಲವನ್ನು ಮನ್ನಾ ಮಾಡುವ ಸರಕಾರ ದೇಶಕ್ಕೆ ಅನ್ನ ಹಾಕುವ ರೈತರ ನೆರವಿಗೆ ಧಾವಿಸಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News