ಕೊರೋನ ನಷ್ಟಕ್ಕಾಗಿ ಚೀನಾದಿಂದ ಪರಿಹಾರ ಕೋರುವೆ: ಟ್ರಂಪ್
ವಾಶಿಂಗ್ಟನ್, ಎ. 28: ಕೊರೋನ ವೈರಸ್ ಸಾಂಕ್ರಾಮಿಕದಿಂದ ಉಂಟಾಗಿರುವ ವಿನಾಶಕ್ಕಾಗಿ ಚೀನಾದಿಂದ ಪರಿಹಾರ ಕೇಳುವ ಬಗ್ಗೆ ಯೋಚಿಸುತ್ತಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಹೇಳಿದ್ದಾರೆ.
ನೋವೆಲ್-ಕೊರೋನವೈರಸ್ ಚೀನಾದ ವುಹಾನ್ ನಗರದಲ್ಲಿ ಮೊದಲು ಕಾಣಿಸಿಕೊಂಡಿತು ಹಾಗೂ ಬಳಿಕ ಜಗತ್ತಿನಾದ್ಯಂತ ಹರಡಿದ್ದು ಭಾರೀ ಸಂಖ್ಯೆಯಲ್ಲಿ ಜನರ ಪ್ರಾಣಹಾನಿ ಮಾಡಿದೆ.
‘‘ಈ ವಿಷಯದಲ್ಲಿ ನಾವು ಚೀನಾದ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಹೊಂದಿಲ್ಲ’’ ಎಂದು ಶ್ವೇತಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಟ್ರಂಪ್ ಹೇಳಿದರು. ‘‘ಈ ಪರಿಸ್ಥಿತಿಯ ಬಗ್ಗೆ ನಮಗೆ ಸಮಾಧಾನವಿಲ್ಲ. ಯಾಕೆಂದರೆ ಸಾಂಕ್ರಾಮಿಕವನ್ನು ಅದರ ಮೂಲದಲ್ಲಿಯೇ ನಿಲ್ಲಿಸಬಹುದಾಗಿತ್ತು’’ ಎಂದರು.
‘‘ಸಾಂಕ್ರಾಮಿಕದ ವಿಷಯದಲ್ಲಿ ಚೀನಾವನ್ನು ಉತ್ತರದಾಯಿಯಾಗಿಸಲು ಹಲವಾರು ವಿಧಾನಗಳಿವೆ’’ ಎಂದು ಅಮೆರಿಕ ಅಧ್ಯಕ್ಷರು ನುಡಿದರು.
ಇತ್ತೀಚೆಗೆ, ಕೊರೋನವೈರಸ್‌ನಿಂದ ಉಂಟಾಗಿರುವ ಆರ್ಥಿಕ ಹಾನಿಗಾಗಿ ಜರ್ಮನಿಗೆ 165 ಬಿಲಿಯ ಡಾಲರ್ (ಸುಮಾರು 12.51 ಲಕ್ಷ ಕೋಟಿ ರೂಪಾಯಿ) ಪರಿಹಾರ ನೀಡುವಂತೆ ಜರ್ಮನಿಯ ಪತ್ರಿಕೆಯೊಂದರ ಸಂಪಾದಕೀಯವು ಚೀನಾಕ್ಕೆ ಕರೆ ನೀಡಿತ್ತು.