ದಿಲ್ಲಿ ಗಲಭೆ ಪ್ರಕರಣಗಳಲ್ಲಿ ಬಂಧನಕ್ಕೆ ಸುಪ್ರೀಂ ಮಾರ್ಗಸೂಚಿ ಪಾಲಿಸಬೇಕು: ದಿಲ್ಲಿ ಹೈಕೋರ್ಟ್

Update: 2020-04-29 11:57 GMT

ಹೊಸದಿಲ್ಲಿ:  ರಾಜಧಾನಿ ದಿಲ್ಲಿಯಲ್ಲಿ ಇತ್ತೀಚೆಗೆ ಸಂಭವಿಸಿದ ಗಲಭೆಗಳಿಗೆ ಸಂಬಂಧಿಸಿದಂತೆ ಬಂಧನಗಳನ್ನು ಈ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿರುವ ಮಾರ್ಗಸೂಚಿಯಂತೆಯೇ ನಡೆಸಬೇಕೆಂದು ದಿಲ್ಲಿ ಹೈಕೋರ್ಟ್ ಆದೇಶಿಸಿದೆ.

ಲಾಕ್ ಡೌನ್ ಸಂದರ್ಭ ಗಲಭೆಗಳಲ್ಲಿ ಆರೋಪಿಗಳೆಂದು ಗುರುತಿಸಲಾದವರ ಬಂಧನಗಳು ಮನಬಂದಂತೆ ನಡೆಯುತ್ತಿವೆ ಎಂದು ಆರೋಪಿಸಿ ಜಮೀಯತ್ ಉಲಾಮ-ಎ-ಹಿಂದ್ ಸಲ್ಲಿಸಿರುವ ಅಪೀಲಿನ ಕುರಿತಂತೆ ಕೇಂದ್ರ ಸರಕಾರ, ದಿಲ್ಲಿ ಸರಕಾರ ಹಾಗೂ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿರುವ ನ್ಯಾಯಮೂರ್ತಿಗಳಾದ ಸಿದ್ಧಾರ್ಥ್ ಮೃದುಲ್ ಹಾಗೂ ತಲ್ವಂತ್ ಸಿಂಗ್ ಅವರ ಪೀಠ ತಮ್ಮ ನಿಲುವು ತಿಳಿಸುವಂತೆ ಸೂಚಿಸಿದೆ.

ಕೊರೋನವೈರಸ್ ಹಿನ್ನೆಲೆಯಲ್ಲಿ ಜೈಲುಗಳಲ್ಲಿ ದಟ್ಟಣೆ ಕಡಿಮೆಗೊಳಿಸುವಂತೆ ಸುಪ್ರೀಂ ಕೋರ್ಟ್ ಹೇಳಿರುವಾಗ ಪೊಲೀಸರು ದಿಲ್ಲಿ ಹಿಂಸೆ ಕುರಿತಾದ ಅಪರಾಧಗಳಿಗೆ ಜನರನ್ನು ಬಂಧಿಸುತ್ತಿದ್ದಾರೆ ಎಂದು ಅಪೀಲುದಾರರು ಆರೋಪಿಸಿದ್ದರು.

ಇಲ್ಲಿಯ ತನಕ ಮಾಡಲಾಗಿರುವ ಎಲ್ಲಾ ಬಂಧನಗಳು ಹಾಗೂ ಭವಿಷ್ಯದಲ್ಲಿ ಮಾಡಲಾಗುವ ಬಂಧನಗಳು ಸುಪ್ರೀಂ ಕೋರ್ಟ್ ಮಾರ್ಗಸೂಚಿಯಂತೆಯೇ ನಡೆಸಲಾಗುವುದು ಎಂದು  ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಸಲಾದ ವಿಚಾರಣೆ ವೇಳೆ ಕೇಂದ್ರ ತಿಳಿಸಿದೆ.

ಬಂಧನಕ್ಕೀಡಾದವರು ಸಂಬಂಧಿತ ಕಾನೂನು ಪ್ರಕ್ರಿಯೆಯಂತೆ ಜಾಮೀನಿಗೆ ಅರ್ಜಿ ಸಲ್ಲಿಸಲು ಸ್ವಾತಂತ್ರ್ಯ ಹೊಂದಿದ್ದಾರೆಂದೂ ನ್ಯಾಯಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News