184 ದೇಶಗಳನ್ನು ನರಕಕ್ಕೆ ಕಳುಹಿಸಿದ ಚೀನಾ: ಡೊನಾಲ್ಡ್ ಟ್ರಂಪ್ ಮತ್ತೆ ವಾಗ್ದಾಳಿ
ವಾಶಿಂಗ್ಟನ್, ಎ. 29: ಆರಂಭಿಕ ಹಂತದಲ್ಲಿಯೇ ಕೊರೋನ ವೈರಸನ್ನು ಹತ್ತಿಕ್ಕಲು ವಿಫಲವಾಗಿರುವುದಕ್ಕಾಗಿ ಚೀನಾದ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅದು 184 ದೇಶಗಳನ್ನು ನರಕಕ್ಕೆ ಕಳುಹಿಸಿದೆ ಎಂದು ಅವರು ಆರೋಪಿಸಿದ್ದಾರೆ.
ಅದೇ ವೇಳೆ, ಉತ್ಪಾದನೆ ಮತ್ತು ಖನಿಜಗಳಿಗಾಗಿ ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದಾಗಿ ಹಲವಾರು ಅಮೆರಿಕ ಸಂಸದರು ಒತ್ತಾಯಿಸಿದ್ದಾರೆ.
‘ಕಣ್ಣಿಗೆ ಕಾಣದ ಶತ್ರು’ (ನೋವೆಲ್-ಕೊರೋನ ವೈರಸ್) ಜಾಗತಿಕ ಮಟ್ಟದಲ್ಲಿ ಹರಡಲು ಚೀನಾ ಕಾರಣ ಎಂಬುದಾಗಿ ಟ್ರಂಪ್ ಸಾರ್ವಜನಿಕವಾಗಿಯೇ ಆರೋಪಿಸುತ್ತಿದ್ದಾರೆ ಹಾಗೂ ಆ ಬಗ್ಗೆ ತನಿಖೆಗೆ ಆದೇಶ ನೀಡಿದ್ದಾರೆ.
ಸಾಂಕ್ರಾಮಿಕದ ಹರಡುವಿಕೆಯ ಜವಾಬ್ದಾರಿಯನ್ನು ಹೊತ್ತು 140 ಬಿಲಿಯ ಡಾಲರ್ ಪರಿಹಾರ ನೀಡುವಂತೆ ಜರ್ಮನಿಯು ಚೀನಾಕ್ಕೆ ಬೇಡಿಕೆ ಸಲ್ಲಿಸಿತ್ತು. ಈ ಬಗ್ಗೆ ಪ್ರಸ್ತಾಪಿಸಿದ ಟ್ರಂಪ್, 140 ಬಿಲಿಯ ಡಾಲರ್‌ಗೂ ಹೆಚ್ಚಿನ ಮೊತ್ತದ ಪರಿಹಾರವನ್ನು ಅವೆುರಿಕವು ಚೀನಾದಿಂದ ಕೋರಬಹುದಾಗಿದೆ ಎಂದರು.
ಆರಂಭಿಕ ಹಂತದಲ್ಲೇ ಈ ಸಾಂಕ್ರಾಮಿಕದ ಬಗ್ಗೆ ಚೀನಾವು ಎಚ್ಚರಿಕೆ ನೀಡಿದ್ದರೆ, ಇಂದು ಜಗತ್ತಿನಾದ್ಯಂತ ಸಂಭವಿಸಿರುವ ವಿನಾಶ ಮತ್ತು ಆರ್ಥಿಕ ಕುಸಿತವನ್ನು ತಡೆಯಬಹುದಾಗಿತ್ತು ಎಂದು ಅಮೆರಿಕ, ಬ್ರಿಟನ್ ಮತ್ತು ಜರ್ಮನಿಯ ನಾಯಕರು ಹೇಳುತ್ತಿದ್ದಾರೆ.